ಬಳ್ಳಾರಿ / ಕಂಪ್ಲಿ : ಕಂಪ್ಲಿ ಪುರಸಭೆ ವ್ಯಾಪ್ತಿಯ ಕಂಪ್ಲಿ ಕೊಟ್ಟಾಲ್ನಲ್ಲಿ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಮಹಾಶಿವರಾತ್ರಿಯ ಮರುದಿನವಾದ ಸೋಮವಾರದಂದು ಸಡಗರ ಸಂಭ್ರಮದಿಂದ ಕಾಶಿ ವಿಶ್ವನಾಥಸ್ವಾಮಿ ಮಹಾರಥೋತ್ಸವ ಜರುಗಿತು.
ಇಲ್ಲಿನ ದೇವಸ್ಥಾನದಲ್ಲಿ ಭಾನುವಾರದಂದು ಬೆಳಿಗ್ಗೆ ಕಾಶಿ ವಿಶ್ವನಾಥ ಮತ್ತು ವಿಶಾಲಾಕ್ಷಿ ಅಮ್ಮನವರ ಕಲ್ಯಾಣೋತ್ಸವ ಮತ್ತು ಸಂಜೆ ಉತ್ಸವ ಮೂರ್ತಿಗಳ ನಂತರ ವಿಗ್ರಹಕ್ಕೆ ರುದ್ರಾಭಿಷೇಕ ಸೇರಿದಂತೆ ವಿವಿಧ ಅಭಿಷೇಕಗಳನ್ನು ಮಾಡಿ, ನೂತನ ವಸ್ತ್ರಗಳು, ಚಿನ್ನಾಭರಣಗಳಿಂದ ಹಾಗೂ ವಿವಿಧ ಹೂಗಳಿಂದ ಅಲಂಕರಿಸಿ ಮಹಾಮಂಗಳಾರತಿ ನೆರವೇರಿಸಿದರು.
ಸೋಮವಾರ ಸಂಜೆ ಸಕಲ ಮಂಗಳವಾಧ್ಯಗಳೊಂದಿಗೆ ದೇವಸ್ಥಾನದಿಂದ ಕಾಶಿ ವಿಶ್ವನಾಥಸ್ವಾಮಿ ಸ್ವಾಮಿಯ ಮಹಾರಥೋತ್ಸವ ಆರಂಭಗೊಂಡು ಮುಖ್ಯರಸ್ತೆಯವರೆಗೆ ತೆರಳಿ ಪುನಃ ದೇವಸ್ಥಾನದ ಹತ್ತಿರ ಸಮಾರೋಪಗೊಂಡಿತು. ಸದ್ಭಕ್ತರು ರಥದ ಕಳಸಕ್ಕೆ ಉತ್ತತ್ತಿ, ಹೂ, ಬಿಲ್ವಾಪತ್ರಿ, ಬಾಳೆಹಣ್ಣು ಅರ್ಪಿಸಿ ತಮ್ಮ ಭಕ್ತಿಯನ್ನು ಮೆರೆದರು.
ರಥೋತ್ಸವದಲ್ಲಿ ಡೊಳ್ಳು ಕುಣಿತ, ತಾಷಾ ರಾಂಡೋಲು, ಭಜನೆ, ಮಂಗಳ ವಾದ್ಯ, ಜಾನಪದ ಕಲಾ ಪ್ರಕಾರಗಳು ಭಾಗವಹಿಸಿದ್ದವು. ಮಹಾರಥೋತ್ಸವದಲ್ಲಿ ಸ್ಥಳೀಯ ಹಾಗೂ ಸುತ್ತಮುತ್ತಲ ಗ್ರಾಮಗಳ ಸಕಲ ಸದ್ಭಕ್ತರು ಭಾಗವಹಿಸಿದ್ದರು.
ನಂತರ ಮುಖಂಡ ಎಂ.ಸುಧೀರ್ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಸಹ ವಿಜೃಂಭಣೆಯಿಂದ ಸಕಲ ಸದ್ಭಕ್ತರ ಸಮ್ಮುಖದಲ್ಲಿ ಮಹಾರಥೋತ್ಸವ ನಡೆಯಿತು. ದೇವರ ಆರಾಧನೆಯಿಂದ ಇಷ್ಟಾರ್ಥಗಳು ಲಭಿಸುವ ಜೊತೆಗೆ ಜೀವನದಲ್ಲಿ ಸುಖ, ಶಾಂತಿ ಮತ್ತು ನೆಮ್ಮದಿ ಕಾಣಲು ಸಾಧ್ಯ ಎಂದರು.
ವರದಿ : ಜಿಲಾನಸಾಬ್ ಬಡಿಗೇರ್



















