ವಿಜಯನಗರ / ಹಂಪಿ :ಉತ್ಸವವು ಜನರ ಮನರಂಜನೆ ಮತ್ತು ಉತ್ಸಾಹ ಹೆಚ್ಚಿಸಿದೆಯಾದರೂ ಸಾಹಿತ್ಯಾಸಕ್ತರ ಬರವೂ ಎದುರಾಯಿತು. ಮೂರು ದಿನಗಳ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ನಿರೀಕ್ಷೆಯಂತೆ ಪುಸ್ತಕಗಳು ಮಾರಾಟವಾಗಲಿಲ್ಲ ಎಂದು ಮಾರಾಟಗಾರರು ಬೇಸರ ವ್ಯಕ್ತಪಡಿಸಿದರು.
ಪ್ರಸ್ತುತ ಸಾಮಾಜಿಕ ಜಾಲತಾಣಗಳ ಅಬ್ಬರ ಜೋರಾಗಿದ್ದು, ರವಿ ಬೆಳಗೆರೆ ಅವರ ‘ಹೇಳಿ ಹೋಗು ಕಾರಣ’ ಪುಸ್ತಕದಲ್ಲಿನ ಸಾಲುಗಳನ್ನು ಆಧರಿಸಿ ಅನೇಕ ರೀಲ್ಸ್ಗಳು ಹರಿದಾಡುತ್ತಿವೆ. ಈ ಕಾರಣದಿಂದಾಗಿ ಬಹುತೇಕ ಯುವ ಓದುಗರು ಮತ್ತು ಮಹಿಳಾ ಓದುಗರು ಅದೇ ಪುಸ್ತಕವನ್ನು ಹುಡುಕಿಕೊಂಡು ಬಂದು ಖರೀದಿಸಿದರು. ಒಂದು ಪುಸ್ತಕ ಮಳಿಗೆಯೊಂದರಲ್ಲೇ ಈ ಕೃತಿಯ 200 ರಿಂದ 250 ಪ್ರತಿಗಳು ಮಾರಾಟವಾಗಿರುವುದು ವಿಶೇಷವಾಗಿದೆ. ಇದರ ಜೊತೆಗೆ ನವ್ಯ ಸಾಹಿತ್ಯದ ಪುಸ್ತಕಗಳು ಹಾಗೂ ಹೆಸರಾಂತ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರ ಪುಸ್ತಕಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾದವು.
ಬೇಡಿಕೆ ಕಳೆದುಕೊಂಡ ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕಗಳು ಇತ್ತೀಚೆಗೆ ಎಲ್ಲೆಡೆ ಸ್ಪರ್ಧೆ ಹೆಚ್ಚಿದೆ, ಅದರಲ್ಲೂ ಸರ್ಕಾರಿ ಹುದ್ದೆಗಳಿಗೆ ಇನ್ನಿಲ್ಲದ ಪೈಪೋಟಿ ಇದೆ. ಹೀಗಾಗಿ ಪ್ರಕಾಶಕರು ಮತ್ತು ಪುಸ್ತಕ ಮಾರಾಟಗಾರರು ಹೆಚ್ಚಿನ ಪ್ರಮಾಣದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಪಠ್ಯಗಳನ್ನು ಒಳಗೊಂಡ ಪುಸ್ತಕಗಳನ್ನು ತಂದಿದ್ದರು. ಆದರೆ, ಸರ್ಕಾರವು ಇತ್ತೀಚೆಗೆ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿರುವುದರಿಂದ ಈ ಪುಸ್ತಕಗಳಿಗೂ ಬೇಡಿಕೆ ತಗ್ಗುವಂತಾಗಿದೆ.
ಹಂಪಿ ಉತ್ಸವದಂತಹ ಮೇಳಗಳಲ್ಲಿ ಕಡಿಮೆ ವ್ಯಾಪಾರ:
ಇತ್ತೀಚೆಗೆ ನಡೆದ ಹಂಪಿ ಉತ್ಸವದ ಪುಸ್ತಕ ಪ್ರದರ್ಶನದಲ್ಲಿ ಮಾರಾಟಗಾರರು ನಿರೀಕ್ಷಿತ ಮಟ್ಟದಲ್ಲಿ ಪುಸ್ತಕಗಳು ಮಾರಾಟವಾಗದೆ ಬೇಸರ ವ್ಯಕ್ತಪಡಿಸಿದ್ದಾರೆ. ಕೇವಲ ಕೆಲವು ಪ್ರಸಿದ್ಧ ಸಾಹಿತಿಗಳ ಪುಸ್ತಕಗಳಿಗೆ ಮಾತ್ರ ಬೇಡಿಕೆ ಸೀಮಿತವಾಗುತ್ತಿದೆ ಎಂಬುದು ಮಾರಾಟಗಾರರ ಅಳಲು.
ಯುವ ಪೀಳಿಗೆ ಡಿಜಿಟಲ್ ಮಾಧ್ಯಮಗಳತ್ತ ಹೆಚ್ಚು ಆಕರ್ಷಿತರಾಗುತ್ತಿರುವುದರಿಂದ ಭೌತಿಕ ಪುಸ್ತಕಗಳ ಓದುಗರ ಸಂಖ್ಯೆ ಇಳಿಮುಖವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರವಿದ್ದರೂ, ಅದು ನೈಜ ಪುಸ್ತಕ ಖರೀದಿಯಾಗಿ ಬದಲಾಗುತ್ತಿಲ್ಲ ಎಂದು ಚಿಲ್ಲರೆ ಮಾರಾಟಗಾರರು ಅಭಿಪ್ರಾಯಪಟ್ಟಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್



















