
ಗುರುಗಳಿಗೆ ಗುರುವಂದನಾ ಸನ್ಮಾನ : ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ
ಮೆರವಣಿಗೆಗೆ ಸಾಂಸ್ಕೃತಿಕ ಕಲಾ ತಂಡಗಳ ಮೆರಗು : ಮುಸ್ಸಂಜೆಯ ಸಾಂಸ್ಕೃತಿಕ ವೈಭವಕ್ಕೆ ಮನಸೋತ ಹಳೆ ವಿದ್ಯಾರ್ಥಿಗಳು
ಬಳ್ಳಾರಿ / ಕಂಪ್ಲಿ : ಮಕ್ಕಳು ಶಿಕ್ಷಣದ ಮೌಲ್ಯಗಳನ್ನು ಅರಿತುಕೊಂಡಾಗ ಮಾತ್ರ ಭವಿಷ್ಯ ಉಜ್ವಲವಾಗಿರುತ್ತದ ಎಂದು ಅಮೇರಿಕದ ಇಪಿಎ ಬೌದ್ಧ ವಿಜ್ಞಾನಿ ಹಾಗೂ ಹಳೇ ವಿದ್ಯಾರ್ಥಿ ಮಲ್ಲಿಕಾರ್ಜುನ ನಾಡಗೌಡ ಹೇಳಿದರು.
ತಾಲೂಕು ಸಮೀಪದ ಹೊಸ ದರೋಜಿ ಗ್ರಾಮದ ಸ.ಹಿ.ಪ್ರಾ ಶಾಲೆ ಆವರಣದಲ್ಲಿ ಶನಿವಾರ ಹಳೆ ವಿದ್ಯಾರ್ಥಿಗಳ ಬಳಗ, ಶಾಲೆ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಮುಖ್ಯೋಪಾಧ್ಯಾಯ ಮತ್ತು ಸಮಸ್ತ ಶಿಕ್ಷಕರ ವೃಂದದ ವತಿಯಿಂದ ಹಮ್ಮಿಕೊಂಡಿದ್ದ ನವತಿ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಇಲ್ಲಿನ ಶಾಲೆಯಲ್ಲಿ ಓದುವಂತಹ ಸಂದರ್ಭದಲ್ಲಿ ನಮ್ಮ ನಾಡಿನ ಶಿಕ್ಷಣದ ಜೊತೆಗೆ ಗ್ರಾಮೀಣ ಕಲೆ, ಸಂಸ್ಕೃತಿಯ ಪ್ರತಿಬಿಂಬವಾಗಿತ್ತು. ಗುರುಗಳು ನೀಡಿದ ಉತ್ತಮ ಶಿಕ್ಷಣದಿಂದಾಗಿ ಇಂದು ಅಮೇರಿಕದಲ್ಲಿ ಹುದ್ದೆ ಮಾಡುವ ಮೂಲಕ ಉತ್ತಮ ಜೀವನಕ್ಕೆ ನಾಂದಿಯಾಗಿದೆ. ಕಲಿಕಾ ಹಂತದ ಮೌಲ್ಯಯುತ ಸವಿ ನೆನಪುಗಳು ಅವಿಸ್ಮರಣೀಯವಾಗಿವೆ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ವಿ.ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, 1936ರಿಂದ ಇಲ್ಲಿಯ ತನಕ ಇಲ್ಲಿನ ಸರ್ಕಾರಿ ಶಾಲೆಯಲ್ಲಿ ವೃತ್ತಿ ನಿರ್ವಹಿಸಿದ ಹಾಗೂ ಗುರುಗಳ ಮಾರ್ಗದರ್ಶನದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಒಮ್ಮತದಿಂದ ನವತಿ ಮಹೋತ್ಸವ ಸಮಾರಂಭದ ಜೊತೆಗೆ ಸ್ನೇಹ ಸಮ್ಮಿಲನದ ಮೂಲಕ ಹಳೆ ಶಿಕ್ಷಕರ ವೃಂದದವರು ಹಾಗೂ ವಿದ್ಯಾರ್ಥಿಗಳು ಒಂದೆಡೆ ಸೇರುವ ಮೂಲಕ ಹಳೆ ನೆನಪುಗಳನ್ನು ಮೆಲಕು ಹಾಕಿದ್ದಾರೆ. ಗುರುಗಳ ಮತ್ತು ಶಿಷ್ಯಂದಿರ ಸಂಬಂಧ ಅತಿ ದೊಡ್ಡದಾಗಿದೆ. ಗುರುಗಳು ನೀಡುವ ಅಕ್ಷರ ಜ್ಞಾನದೊಂದಿಗೆ ವಿದ್ಯಾರ್ಥಿಗಳ ಭವಿಷ್ಯ ಜೀವನದುದ್ದಕ್ಕೂ ಸುಂದರಮಯವಾಗಿರುತ್ತದೆ ಎಂದರು.
ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ ಗೌರವಿಸಿದರು. ನಂತರ ಗುರುವಂದನಾ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ವೃಂದದವರಿಗೆ ಸನ್ಮಾನದೊಂದಿಗೆ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಾಡಾ ಅಧ್ಯಕ್ಷ ಅಕ್ಷಯ್ ಅಶೋಕ್ ಕುಮಾರ ಲಾಡ್, ಪಿಎಸ್‌ಐ ಶಾಂತಮೂರ್ತಿ, ಜಿ. ಪಂ. ಮಾಜಿ ಸದಸ್ಯ ವಿ.ಜನಾರ್ಧನ, ಗ್ರಾ. ಪಂ ಸದಸ್ಯ ಮಾಯಣ್ಣ, ತಾ. ಪಂ ಮಾಜಿ ಉಪಾಧ್ಯಕ್ಷ ಮಾದಾಪುರ ಮಾರೆಪ್ಪ, ಗ್ರಾ. ಪಂ ಮಾಜಿ ಉಪಾಧ್ಯಕ್ಷ ಮತ್ತು ಶಿಕ್ಷಣ ಪ್ರೇಮಿ ಎಂ.ಎಸ್.ಗುರುಮೂರ್ತಿ, ಮಾಜಿ ಸದಸ್ಯ ಮಾದಾಪುರ ಮಲಿಯಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿದ್ದಣ್ಣ ಯಾಳವಾರ, ಪ್ರಭಾರಿ ಮುಖ್ಯಗುರು ಎಂ.ಇ.ಮಲ್ಲಿಕಾರ್ಜುನ, ಹಳೇ ವಿದ್ಯಾರ್ಥಿಗಳ ಸಂಘದ ಗೌರವಾಧ್ಯಕ್ಷ ಎಂ.ಎಸ್.ಶಿವಮೂರ್ತಿ, ಅಧ್ಯಕ್ಷ ಇ.ಗಿರೀಶ್‌ಕುಮಾರ, ಪ್ರಧಾನ ಕಾರ್ಯದರ್ಶಿ ಗಂಡಿ ಮಲಿಯಪ್ಪ, ಉಪಾಧ್ಯಕ್ಷರಾದ ಕೆ.ಪ್ರಸಾದ್, ಚಾಪಲ್ ರ‍್ರಿಸ್ವಾಮಿ ಸೇರಿದಂತೆ ಶಿಕ್ಷಕ ವೃಂದದವರು, ಎಸ್‌ಡಿಎಂಸಿ ಸದಸ್ಯರು, ಶಿಕ್ಷಣ ಪ್ರೇಮಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.
ಅದ್ಧೂರಿ ಮೆರವಣಿಗೆ : ಇಲ್ಲಿನ ಗ್ರಾಮದಲ್ಲಿ ನವತಿ ಮಹೋತ್ಸವದ ಹಿನ್ನಲೆ ಬೆಳಿಗ್ಗೆ ಬೆಳ್ಳಿನ ರಥದಲ್ಲಿ ನಾಡದೇವಿ ಭುವನೇಶ್ವರಿ, ಸರಸ್ವತಿ ದೇವಿಯ ಭವ್ಯ ಮೆರವಣಿಗೆ ವಿವಿಧ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಅದ್ಧೂರಿಯಾಗಿ ಜರುಗಿತು. ಈ ಮೆರವಣಿಗೆಯಲ್ಲಿ ಗುರುಗಳು, ಹಳೆ ವಿದ್ಯಾರ್ಥಿಗಳು ಹೆಜ್ಜೆ ಹಾಕುವ ಮೂಲಕ ಹಳೆಯ ನೆನಪುಗಳನ್ನು ಸ್ಮರಿಸಿದರು.
ಸ್ನೇಹ ಸಮ್ಮಿಲನ : ಸರ್ಕಾರಿ ಶಾಲೆ ಆವರಣದಲ್ಲಿ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ನಡೆಯಿತು. ಅಮೇರಿಕ ಸೇರಿದಂತೆ ನಾನಾ ಭಾಗಗಳಿಂದ ಬಂದಂತಹ ಹಳೆ ವಿದ್ಯಾರ್ಥಿಗಳು ಒಂದು ಕಡೆಗೆ ಸೇರಿ ಹಳೆಯ ಸವಿ ನೆನಪುಗಳನ್ನು ಮೆಲಕು ಹಾಕಿದರು. ಇಲ್ಲಿನ ಸ್ನೇಹ ಸಮ್ಮಿಲನದಲ್ಲಿ ಭಾಗವಹಿಸಿದ ಹಳೆ ವಿದ್ಯಾರ್ಥಿಗಳು ಸಂತಸದ ಜೊತೆಗೆ ಅಭಿಪ್ರಾಯ, ಅನಿಸಿಕೆ ಹಂಚಿಕೊಂಡರು.
ಸಾಂಸ್ಕೃತಿಕ ವೈಭವ : ಮುಸ್ಸಂಜೆಯ ಮಂಜಿನಲ್ಲಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸಾಂಸ್ಕೃತಿಕ ವೈಭವ ಆಕರ್ಷಿಸುವ ಜೊತೆಗೆ ನೆರೆದಿದ್ದ ಜನರ ಕಣ್ಮನ ಸೆಳೆಯಿತು. ಶಾಲೆಯ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು. ಮಕ್ಕಳ ಮತ್ತು ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮಗಳು ಹಳೆ ವಿದ್ಯಾರ್ಥಿಗಳ ಗಮನ ಸೆಳೆದವು. ಹಳೆ ವಿದ್ಯಾರ್ಥಿಗಳ ನವತಿ ಮಹೋತ್ಸವ ಕಾರ್ಯಕ್ರಮ ಅತ್ಯದ್ಬುತವಾಗಿ ಗಮನ ಸೆಳೆಯುವ ಹಳೆ ನೆನಪುಗಳ ಸವಿ ನೆನಪಿಗೆ ಸಾಕ್ಷಿಯಾದವು.
ವರದಿ : ಜಿಲಾನಸಾಬ್ ಬಡಿಗೇರ್



















