
ಮೈಸೂರಿನಲ್ಲಿರುವ ಐತಿಹಾಸಿಕ ಲಿಂಗಾಂಬುಧಿ ಸರೋವರವು ಸುಮಾರು 260 ಎಕರೆ ವಿಸ್ತೀರ್ಣದಲ್ಲಿದ್ದು, ಆರಂಭದಲ್ಲಿ ಕೃಷಿ ನೀರಾವರಿ ಮತ್ತು ಕುಡಿಯುವ ನೀರಿಗಾಗಿ ಇದನ್ನು ಬಳಸಲಾಗುತ್ತಿತ್ತು. ಪ್ರಸ್ತುತ, ಇದು ಅಪರೂಪದ ವಲಸೆ ಪಕ್ಷಿಗಳಿಗೆ ಆಶ್ರಯ ತಾಣವಾಗಿದ್ದು, ಇದರ ಸುತ್ತಮುತ್ತ ಮೈಸೂರಿನ ಮೊದಲ ಬೊಟಾನಿಕಲ್ ಗಾರ್ಡನ್ (ಸಸ್ಯೋದ್ಯಾನ) ಅಭಿವೃದ್ಧಿಪಡಿಸಲಾಗಿದೆ.
ಅರಣ್ಯ ಇಲಾಖೆಯ ನಿರ್ವಹಣೆಯಲ್ಲಿರುವ ಜಲನಿಧಿಗೆ ಪಾಲಿಕೆಯ ಉಸ್ತುವಾರಿಯ ಬಡಾವಣೆಗಳಿಂದ ರಾಜಕಾಲುವೆ ಮೂಲಕ ಕೊಳಚೆ ನೀರು, ಪ್ಲಾಸ್ಟಿಕ್ ಬಾಟಲಿಗಳ ರಾಶಿ ನಿತ್ಯ ಸೇರುತ್ತಿದೆ.
ದಟ್ಟಗಳ್ಳಿ, ಕನಕದಾಸ ನಗರ ಸೇರಿದಂತೆ ವಿವಿಧ ಬಡಾವಣೆಗಳಿಂದ ಬರುವ ಒಳಚರಂಡಿ ಪೈಪ್, ಸುಪ್ರೀಂ ಪಬ್ಲಿಕ್ ಶಾಲೆಯ ಬಳಿಯ ಉದ್ಯಾನದ ಪಕ್ಕದಲ್ಲಿನ ರಾಜಕಾಲುವೆ ಮಧ್ಯೆ ಹಾದು ಹೋಗಿದೆ. ಪೈಪ್ ಒಡೆದು ನೀರು ಉಕ್ಕುತ್ತಿದ್ದು, ಚೆಕ್ ಡ್ಯಾಂನಂತೆ ಕೊಳಚೆ ನೀರು ನಿಂತಿದೆ. ಅದರಿಂದ ಅಕ್ಕಪಕ್ಕದಲ್ಲೇ ಇರುವ ಶಾಲೆಗಳ ಮಕ್ಕಳು, ಸ್ಥಳೀಯ ನಿವಾಸಿಗಳು ಹೈರಾಣಾಗಿದ್ದಾರೆ.
ಸ್ಥಳೀಯ ನಾಗರಿಕರು ಮತ್ತು ಪರಿಸರ ಪ್ರೇಮಿಗಳ ಪ್ರಯತ್ನದಿಂದಾಗಿ ಈ ಕೆರೆ ಮತ್ತು ಅದರ ಸುತ್ತಮುತ್ತಲಿನ ಹಸಿರನ್ನು ಉಳಿಸಿಕೊಳ್ಳಲಾಗಿದೆ ಆದರೆ ಜೀವವೈವಿಧ್ಯದ ಆಗರವಾದ ‘ಲಿಂಗಾಂಬುಧಿ’ ಕೆರೆ ಮರಣ ಶಯ್ಯೆಯತ್ತ ಸಾಗಿದೆ.
‘ಒಂದೆಡೆ ಒತ್ತುವರಿಯಿಂದ ಕೆರೆಯ ಬಫರ್ ವಲಯವು ನಲುಗಿದೆ. ರಾಜಕಾಲುವೆಗೆ ಹೊಂದಿಕೊಂಡಿರುವ ಉದ್ಯಾನಗಳು ಸೊರಗಿವೆ. ಸಹಿಸಲಸಾಧ್ಯ ದುರ್ವಾಸನೆಯು ಇಡೀ ಬಡಾವಣೆಯನ್ನು ತುಂಬಿದ್ದು, ನಿವಾಸಿಗಳಿಗೆ ಉಸಿರಾಟವೇ ಕಷ್ಟವಾಗಿದೆ. ಜೊತೆಗೆ ಸೊಳ್ಳೆಗಳ ಕಾಟ ಹೆಚ್ಚಿದ್ದು, ಜನರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ’ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.
ಐಯುಸಿಎನ್ ಕೆಂಪು ಪಟ್ಟಿಯಲ್ಲಿರುವ ಅಳಿವಿನಂಚಿನ ಬಾನಾಡಿಗಳೂ ಸೇರಿದಂತೆ ಮಧ್ಯ ಏಷ್ಯಾದಿಂದ ಇಲ್ಲಿಗೆ ಬರುವ ವಲಸೆ ಹಕ್ಕಿಗಳು, 210 ವಿವಿಧ ಜಾತಿಯ ಹಕ್ಕಿಗಳು, 44 ಜೌಗು ಹಕ್ಕಿಗಳು ಹಾಗೂ 18 ವಲಸೆ ಹಕ್ಕಿಗಳಿಗೆ ಕೊಳಚೆ ನೀರು ಸಂಚಕಾರವಾಗಿ ಪರಿಣಮಿಸಿದೆ.
ಇಲ್ಲಿನ ದ್ವೀಪಗಳು, ತೀರದಲ್ಲಿ 3 ಸಾವಿರ ಹಕ್ಕಿಗಳು ನೆಲೆಸಿದ್ದು, 54 ಜಾತಿಯ ಬಣ್ಣದ ಚಿಟ್ಟೆಗಳನ್ನು ಹೊಂದಿರುವ ಜೀವ ಪರಿಸರ ವ್ಯವಸ್ಥೆಯು ಅವಸಾನದತ್ತ ಸಾಗಿದೆ. ಕೊಳಚೆ ನೀರಿನಿಂದ ಕೆರೆಯನ್ನು ‘ಕತ್ತೆಕಿವಿ’ (ವಾಟರ್ ಹಯಸಿಂತ್) ಆವರಿಸುತ್ತಿದ್ದು, ಕೆರೆಯ ಜೀವ ವೈವಿಧ್ಯವನ್ನೇ ನುಂಗಲು ಸಜ್ಜಾಗಿದೆ.
ತೆರಿಗೆ ಏಕೆ ಕಟ್ಟಬೇಕು ?
‘ಇಲ್ಲಿನ ಪ್ರತಿ ಮನೆಯವರೂ ಪಾಲಿಕೆಗೆ ವಾರ್ಷಿಕ ₹ 12 ಸಾವಿರ ತೆರಿಗೆ ಕಟ್ಟುತ್ತಿದ್ದಾರೆ ಆದರೆ ನೆಮ್ಮದಿ ಇಲ್ಲದಾಗಿದೆ. ತೆರಿಗೆ ವಸೂಲಿ ಮಾಡುವುದೇಕೆ? ಈ ಬಗ್ಗೆ ಎಲ್ಲಾ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ’ ಎಂದು ಇಲ್ಲಿನ ನಿವಾಸಿಯಾದ ನೌಕಾಪಡೆ ನಿವೃತ್ತ ಅಧಿಕಾರಿ ಕೆ.ವಿ.ರಂಜಿತ್ ಬೇಸರ ವ್ಯಕ್ತಪಡಿಸಿದರು.
‘ಈ ಹಿಂದೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣಕ್ಕೂ ದೂರು ಸಲ್ಲಿಸಿದ್ದೆವು. ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರು, ಅರಣ್ಯ ಇಲಾಖೆಯ ಡಿಸಿಎಫ್ ಸೇರಿದಂತೆ ಎಲ್ಲರಿಗೂ ಪ್ರತಿ ವರ್ಷವೂ ನಿರಂತರವಾಗಿ ಪತ್ರ ಬರೆದಿದ್ದರೂ, ಇತ್ತ ಕಡೆ ತಿರುಗಿಯೋ ನೋಡಿಲ್ಲ. ವ್ಯವಸ್ಥೆ ಜಡ್ಡುಗಟ್ಟಿದೆ. ಹಸಿರು ಅಭಿಯಾನ, ಸ್ವಚ್ಛ ಮೈಸೂರು ಜಾಗೃತಿ ಪ್ರಚಾರಕ್ಕಷ್ಟೇ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲಿಂಗಾಂಬುಧಿ ಕೆರೆಯ ಪ್ರಮುಖ ಇತಿಹಾಸ ಮತ್ತು ಪ್ರಮುಖ ಅಂಶಗಳು:
ಸ್ಥಾಪನೆ: ಇದನ್ನು 1828 ರಲ್ಲಿ ಮೈಸೂರು ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ನಿರ್ಮಿಸಿದರು. ಇದು ಮೈಸೂರಿನ ಅತಿ ಹಳೆಯ ಕೆರೆಗಳಲ್ಲಿ ಒಂದಾಗಿದೆ.
ಸ್ಥಳ: ಮೈಸೂರು ನಗರದ ನೈಋತ್ಯ ದಿಕ್ಕಿನಲ್ಲಿ, ನಗರ ಕೇಂದ್ರದಿಂದ ಸುಮಾರು 7 ಕಿ.ಮೀ ದೂರದಲ್ಲಿ, ಶ್ರೀರಾಂಪುರ ಪ್ರದೇಶದ ಬಳಿ ಇದೆ.
ಪರಿಸರ ವ್ಯವಸ್ಥೆ: ಈ ಕೆರೆಯು 250 ಕ್ಕೂ ಹೆಚ್ಚು ಜಾತಿಯ ಪಕ್ಷಿಗಳನ್ನು ಹೊಂದಿದೆ, ಇದರಲ್ಲಿ ಪೆಲಿಕಾನ್‌ಗಳು ಸೇರಿದಂತೆ ಅನೇಕ ವಲಸೆ ಹಕ್ಕಿಗಳು ಸೇರಿವೆ.
ಬೊಟಾನಿಕಲ್ ಗಾರ್ಡನ್ (ಸಸ್ಯೋದ್ಯಾನ): ಇಲ್ಲಿನ ಪರಿಸರವನ್ನು ಸುಧಾರಿಸಲು ಮತ್ತು ಅಳಿವಿನಂಚಿನಲ್ಲಿರುವ ಸಸ್ಯಗಳನ್ನು ರಕ್ಷಿಸಲು, ಅರಣ್ಯ ಇಲಾಖೆಯು ಕೆರೆಯ ದಂಡೆಯ ಮೇಲೆ ಸಸ್ಯೋದ್ಯಾನವನ್ನು ನಿರ್ಮಿಸಿದೆ.
ವರದಿ ಜೆ. ಪ್ರದೀಪ್



















