ಕಲಬುರಗಿ: ಮುಂಬರುವ ಬಜೆಟ್ ಅಧಿವೇಶನದಲ್ಲಿ ಎಲ್ಲಾ ರಂಗಗಳಲ್ಲಿಯೂ ಸಂಪೂರ್ಣ ಒಳಮೀಸಲಾತಿ ಮಾಡಬೇಕು ಎಂದು ಮಾದಿಗ ಸಮಾಜದ ಮುಖಂಡ ಹಾಗೂ ಡೊಂಗರಗಾಂವ ಗ್ರಾಮ ಪಂಚಾಯತ ಅಧ್ಯಕ್ಷ ಅನೀಲಕುಮಾರ ಪಿ. ಬೆಳಕೇರಿ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು,
ಮಾದಿಗ ಸಮುದಾಯ ಕಳೆದ 35 ವರ್ಷಗಳ ನಿರಂತರ ಹೋರಾಟದ ಫಲವಾಗಿ ಸುಪ್ರಿಂಕೋರ್ಟಿನ 7 ನ್ಯಾಯಾಧೀಶರ ಪೀಠದ ತೀರ್ಪಿನಂತೆ, ರಾಜ್ಯ ಸರಕಾರ ನ್ಯಾ.ನಾಗಮೋಹನ್‌ದಾಸ್ ಅವರ ಸಮಿತಿ ವರದಿಯನ್ನು ಆಧರಿಸಿ ಒಳಮೀಸಲಾತಿಯನ್ನು ಘೋಷಣೆ ಮಾಡಿದೆ. ನಾವು ಯಾರ ಪಾಲನ್ನು ಕೇಳುತ್ತಿಲ್ಲ ನಮ್ಮ ಪಾಲಿನ ಹಕ್ಕನ್ನು ಎಲ್ಲಾ ರಂಗದಲ್ಲಿಯೂ ನೀಡಿ ಎಂದು ಕೇಳುತ್ತಿದ್ದೇವೆ. ಇದು ನಮ್ಮ ನ್ಯಾಯ ಸಮ್ಮತ ಬೇಡಿಕೆಯಾಗಿದೆ. ಮಾದಿಗರು ಮತ್ತು ಹೊಲೆಯರ ಮೇಲೆ ರಾಜ್ಯ ಸರಕಾರ ಪರಸ್ಪರ ದೋಷಾರೋಪಣೆ ಮಾಡುವುದರನ್ನು ಬಿಟ್ಟು, ಸುಪ್ರಿಂಕೋರ್ಟಿನ ತೀರ್ಪಿನ ಅನ್ವಯ ಪರಿಶಿಷ್ಟ ಜಾತಿ ಪಟ್ಟಿಯಲ್ಲಿನ ಎಲ್ಲಾ 101 ಜಾತಿಗಳಿಗೂ ಸಾಮಾಜಿಕ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ಬಜೆಟ್ ಅಧಿವೇಶನದಲ್ಲಿ ಸಂಪೂರ್ಣ ಒಳಮೀಸಲಾತಿಗೆ ಜಾರಿಗೆ ಆಗ್ರಹಿಸಬೇಕು. ನಮ್ಮ ತಾಳ್ಮೆ ಪರೀಕ್ಷೆ ಮಾಡಲು ಸರ್ಕಾರ ಹೋಗಬಾರದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಕಳೆದ 35 ವರ್ಷಗಳ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಾ ಬಂದ ಪರಿಣಾಮ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಚುನಾವಣಾ ಪ್ರಾಣಾಳಿಕೆಯಲ್ಲಿ ಈ ವಿಷಯ ಸೇರಿಸಿ, ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿವೆ ಎಂದರು. ಸುಪ್ರಿಂಕೋರ್ಟಿನ ಆದೇಶದ ಅನ್ವಯ ನ್ಯಾ.ನಾಗಮೋಹನ್‌ದಾಸ್ ಸಮಿತಿ ರಚಿಸಿ, ಅದರ ವರದಿಯನ್ನು ಪಡೆದುಕೊಂಡು, ಪರಿಶಿಷ್ಟ ಜಾತಿಗಳನ್ನು ಜನಸಂಖ್ಯೆ ಮತ್ತು ಹಿಂದುಳಿದಿರುವಿಕೆಯ ಆಧಾರದಲ್ಲಿ ಮಾಡಿದ ವರ್ಗೀಕರಣವನ್ನು ಒಪ್ಪಿಕೊಂಡಿರುವ ಸರ್ಕಾರ ಅದನ್ನು ಜಾರಿಗೆ ತರಲು ಮೀನಾಮೇಷ ಎಣಿಸುತ್ತಿದೆ ಎಂದು ಅವರು ಆರೋಪಿಸಿದ್ದರು.
ಬೊಮ್ಮಾಯಿ ಸರ್ಕಾರ ಹೆಚ್ಚು ಮಾಡಿದ ಮೀಸಲಾತಿ ಪ್ರಮಾಣ ಹಾಗೂ ಒಳ ಮೀಸಲಾತಿಯನ್ನು ಸಂವಿಧಾನದ 9ನೇ ಶೆಡ್ಯೂಲ್ ಗೆ ಸೇರಿಸುವುದು. ಶಾಶ್ವತ ಆಯೋಗ ರಚನೆ ಮುಂತಾದ ವಿಚಾರಗಳನ್ನು ಸರ್ಕಾರ ಬಜೆಟ್ ಅಧಿವೇಶನದಲ್ಲಿ ಜಾರಿಗೆ ತರುವ ಭರವಸೆ ನೀಡಬೇಕು. ಒಳಮೀಸಲಾತಿ ವಿಷಯ ಇಟ್ಟುಕೊಂಡು 2028 ರ ಚುನಾವಣೆಯ ಗೆಲುವಿನ ಕನಸು ಕಾಣುವುದನ್ನು ಬಿಟ್ಟು, ಸಾಮಾಜಿಕ ನ್ಯಾಯಕ್ಕಾಗಿ ಹಾತೊರೆಯುತ್ತಿರುವ ಸಮುದಾಯಕ್ಕೆ ನ್ಯಾಯ ಒದಗಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
- ಕರುನಾಡ ಕಂದ ಪತ್ರಿಕೆ



















