ರಾಯಚೂರು/ ಸಿಂಧನೂರು :
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಿಮ್ಮ ಬದುಕಿನಲ್ಲಿ ಇಟ್ಟುಕೊಂಡಿರುವ ವೃತ್ತಿ ಆಯ್ಕೆಯ ಗುರಿಯನ್ನು ಸಾಧಿಸಲು ಈಗಿನಿಂದಲೇ ಪ್ರಯತ್ನ ಶೀಲರಾಗಬೇಕು ಎಂದು ಮುಖ್ಯಗುರು ಮಲ್ಲಪ್ಪ ಬಾದರ್ಲಿ ಹೇಳಿದರು.
ಅವರು ಶನಿವಾರದಂದು ತಾಲೂಕಿನ ಕಲಮಂಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ ‘ಪ್ರೌಢಶಾಲಾ ವಿದ್ಯಾರ್ಥಿಗಳ ವೃತ್ತಿ ಮೇಳ’ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ತಮ್ಮ ಪ್ರೌಢಶಾಲಾ ಹಂತದಿಂದಲೇ ಸರಿಯಾದ ಮಾರ್ಗದರ್ಶನವನ್ನು ಪಡೆದುಕೊಂಡು ತಾವು ಇಟ್ಟುಕೊಂಡಿರುವ ಗುರಿಯನ್ನು ಸಾಧಿಸಲು ನಿರಂತರ ಪರಿಶ್ರಮವನ್ನು ಪಡಬೇಕು. ಆಗ ಮಾತ್ರ ನಿಮ್ಮ ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ‘ಸರ್ಕಾರಿ ಉದ್ಯೋಗಗಳು’ ವಿಷಯದ ಕುರಿತು ಹಿಂದಿ ಶಿಕ್ಷಕ ರಾಮದಾಸ ಮಾತನಾಡುತ್ತಾ, ಸರ್ಕಾರಿ ಉದ್ಯೋಗವನ್ನು ಪಡೆಯಲು ಸಾಕಷ್ಟು ಶ್ರಮಪಡಬೇಕು. ಸತತ ಅಧ್ಯಯನ, ಸಾಮಾನ್ಯ ಜ್ಞಾನ, ಪ್ರಚಲಿತ ಘಟನೆಗಳನ್ನು ಗಮನಿಸುತ್ತಿರಬೇಕು. ಕೋವಿಡ್ ಕಾಲದಲ್ಲಿ ತಿಂಗಳಿಗೆ 2-3 ಲಕ್ಷ ರೂ.ಗಳ ಸಂಬಳ ಪಡೆಯುವ ಖಾಸಗಿ ವಲಯದ ವಿವಿಧ ಕಂಪನಿಗಳು ತಮ್ಮ ನೌಕರರನ್ನು ಸೇವೆಯಿಂದ ಹೊರ ಹಾಕಿದವು. ಸಣ್ಣ ಪುಟ್ಟ ಸ್ವಯಂ ಉದ್ಯೋಗ ಮಾಡುವವರೂ ಸಹ ಬೀದಿಗೆ ಬಿದ್ದರು. ಆದರೆ ಸರ್ಕಾರಿ ನೌಕರರು ಮಾತ್ರ ಯಾವುದೇ ತೊಂದರೆಗೆ ಒಳಗಾಗದೆ ಆಯಾ ಇಲಾಖೆಗಳು ವಹಿಸಿದ ಕಾರ್ಯವನ್ನು ಮಾಡುತ್ತಾ ಸೇವೆಯಲ್ಲಿ ಮುಂದುವರೆದರು. ಆಗ ಪ್ರತಿಯೊಬ್ಬರಿಗೂ ಸರ್ಕಾರಿ ನೌಕರಿಯ ಮಹತ್ವ ಏನೆಂದು ಅರ್ಥವಾಯಿತು. ಅಭ್ಯರ್ಥಿಗಳು ತಮಗೆ ಬೇಕಿರುವ ಸರ್ಕಾರಿ ಹುದ್ದೆಯನ್ನು ಪಡೆಯುಲು ಸೂಕ್ತ ಮಾರ್ಗದರ್ಶನ, ಶಿಸ್ತುಬದ್ಧವಾಗಿರುವ ಅಭ್ಯಾಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು.
ವೈದ್ಯಕೀಯ ಕ್ಷೇತ್ರ ಕುರಿತು ಕಲಮಂಗಿ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿ ದೊಡ್ಡಬಸಪ್ಪ ಅವರು ಮಾತನಾಡುತ್ತಾ, ನಿಮಗೆ ಕಲಿಸಿದ ಗುರುಗಳ ಬಗ್ಗೆ ಅಭಿಮಾನ ಮತ್ತು ಗೌರವ ಭಾವನೆಗಳನ್ನು ಇಟ್ಟುಕೊಂಡು ಅವರ ಮಾರ್ಗದರ್ಶನದಲ್ಲಿ ಮುಂದುವರೆಯಬೇಕು. 10ನೇ ರತಗತಿಯ ನಂತರ ನಿಮಗೆ ಆಸಕ್ತಿ ಇರುವ ಕೋರ್ಸುಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಸಾಮರ್ಥ್ಯ ಏನೆಂಬುದು ನಿಮ್ಮ ಮನಸ್ಸಿಗೆ ಮಾತ್ರ ಗೊತ್ತಿರುತ್ತದೆ. ಅಂಕಗಳ ಜೊತೆಗೆ ಸಾಮಾನ್ಯ ಜ್ಞಾನವನ್ನು ಸಹ ಹೊಂದಿ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.
10ನೇ ತರಗತಿಯ ನಂತರ ಆರೋಗ್ಯ ಕ್ಷೇತ್ರದಲ್ಲಿ ಇರುವ ಕೋರ್ಸ್ಗಳ ಕುರಿತು ಕಲಮಂಗಿ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕರಾದ ಲಕ್ಷ್ಮೀದೇವಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ಮೊದಲು ಸದೃಢ ಆರೋಗ್ಯ ಮತ್ತು ಸದೃಢ ಮನಸ್ಸನ್ನು ಹೊಂದಬೇಕು. ಇದಕ್ಕಾಗಿ ಉತ್ತಮ ಆಹಾರ ಪದ್ಧತಿಗಳು, ದೈನಂದಿನ ವ್ಯಾಯಾಮ, ಆಟೋಟಗಳು, ವೈಯುಕ್ತಿಕ ಸ್ವಚ್ಛತೆಯ ಕಡೆಗೆ ಗಮನಹರಿಸಿಬೇಕು. ವಿದ್ಯಾರ್ಥಿಗಳ ಈ ವಯಸ್ಸು ತುಂಬಾ ಚಂಚಲವಾಗಿರುತ್ತದೆ. ಇದರ ನಿಯಂತ್ರಣಕ್ಕೆ ಯೋಗ, ಧ್ಯಾನ ಮತ್ತು ಉತ್ತಮ ಅಭಿರುಚಿಗಳನ್ನು ರೂಢಿಸಿಕೊಳ್ಳಬೇಕು. ನಿಮ್ಮ ತಂದೆ-ತಾಯಿಗಳು ನಿಮಗಾಗಿ ಸಾಕಷ್ಟು ಕಷ್ಟ ಪಡುತ್ತಿದ್ದಾರೆ. ಅವರಿಗೆ ಮತ್ತು ನಿಮಗೆ ವಿದ್ಯೆ-ಬುದ್ಧಿ ಕಲಿಸಿದ ಗುರುಗಳಿಗೆ ಋಣಿಯಾಗಿರಬೇಕು. 10ನೇ ತರಗತಿಯ ನಂತರ ಪ್ಯಾರಾಮೆಡಿಕಲ್‌ನಲ್ಲಿ ಜಿ.ಎನ್.ಎಮ್, ಎ.ಎನ್.ಎಮ್, ಡಿಎಮ್‌ಎಲ್‌ಟಿ, ಬಿ.ಎಸ್.ನರ್ಸಿಂಗ್ ಸೇರಿದಂತೆ ವೈದ್ಯಕೀಯ ಕ್ಷೇತ್ರದ ವಿವಿಧ ವಿಷಯಗಳಲ್ಲಿ ಡಿಪ್ಲೋಮಾ ಕೋರ್ಸುಗಳು ಇದ್ದು, ಇಂತಹ ವೃತ್ತಿಪರ ಕೋರ್ಸುಗಳನ್ನು ಆಯ್ಕೆ ಮಾಡಿಕೊಳ್ಳುವುದರಿಂದ ತಕ್ಷಣವೇ ಉದ್ಯೋಗವನ್ನು ಪಡೆಯಬಹುದಾಗಿದೆ ಎಂದರು.
ಶಾಲೆಯ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದ ಮಾರ್ಗದರ್ಶಿ ಶಿಕ್ಷಕ ವೀರೇಶ ಗೋನವಾರ ಅವರು ಮಾತನಾಡುತ್ತಾ ಇಂದು ಜಗತ್ತು ತುಂಬಾ ವೇಗವಾಗಿ ಓಡುತ್ತಿದೆ. ಅದರ ಜೊತೆಗೆ ನಾವು ಓಡಲೇಬೇಕು. ಒಂದು ವೇಳೆ ನಿರ್ಲಕ್ಷ್ಯ ತಾಳಿದರೆ ಹಿಂದೆಬಿದ್ದು ನಾವು ಇಟ್ಟುಕೊಂಡಿರುವ ಕನಸುಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ವಿದ್ಯಾರ್ಥಿ ದೆಸೆಯಿಂದಲೇ ಛಲವನ್ನು ಇಟ್ಟುಕೊಂಡು ಅದನ್ನು ಸಾಧಿಸುವರೆಗೂ ವಿರಮಿಸುವುದಿಲ್ಲ ಎನ್ನುವ ಪಣ ತೊಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ವಿಜ್ಞಾನ ಶಿಕ್ಷಕಿ ರೂಪಾ ಅವರು, ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಕುರಿತು ಮಾತನಾಡಿದರು. ವೇದಿಕೆಯ ಮೇಲೆ ಕನ್ನಡ ಭಾಷಾ ಶಿಕ್ಷಕ ರವಿಚಂದ್ರ, ಬಸವರಾಜ ಉಪಸ್ಥಿತರಿದ್ದರು.
ವೃತ್ತಿ ಮೇಳ:
ಇದೇ ಸಂದರ್ಭದಲ್ಲಿ ಆರೋಗ್ಯ, ಮಾಹಿತಿ ತಂತ್ರಜ್ಞಾನ, ಸರ್ಕಾರಿ ಉದ್ಯೋಗಳು, ಬ್ಯಾಂಕಿಂಗ್, ಕೃಷಿ ಮತ್ತು ಟೀಲರಿಂಗ್ ವಿಷಯಗಳ ಕುರಿತು ವಿದ್ಯಾರ್ಥಿಗಳು ಮಳಿಗೆಗಳನ್ನು ನಿರ್ಮಾಣ ಮಾಡಿ, ಆಯಾ ಕ್ಷೇತ್ರಗಳ ವ್ಯಾಪ್ತಿ, ಮಹತ್ವ, ಪರಿಕರಗಳ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳು ವಿವರಣೆಯನ್ನು ನೀಡಿದರು.
ವಿಜ್ಞಾನ ವಸ್ತು ಪ್ರದರ್ಶನ :
ಶಾಲೆಯ ಇಕೋ ಕ್ಲಬ್ ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ವಿಜ್ಞಾನ ವಸ್ತು ಪ್ರದರ್ಶನ ಮತ್ತು ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು
- ಕರುನಾಡ ಕಂದ ಪತ್ರಿಕೆ




















