ರಾಯಚೂರು/ ಸಿಂಧನೂರು : ನಗರದ ಪಿಡಬ್ಲ್ಯೂಡಿ ಕ್ಯಾಂಪಿನ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಸ್ತುತ ಸಾಲಿನ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ ‘ಪ್ರೌಢಶಾಲಾ ವಿದ್ಯಾರ್ಥಿಗಳ ವೃತ್ತಿ ಮೇಳ’ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಉಪ ಪ್ರಾಚಾರ್ಯ ರವೀಂದ್ರ ಗೌಡ ಮಾತನಾಡುತ್ತಾ, ವಿದ್ಯಾರ್ಥಿಗಳು ತಮ್ಮ ಪ್ರೌಢಶಾಲಾ ಹಂತದಿಂದಲೇ ಸರಿಯಾದ ಮಾರ್ಗದರ್ಶನವನ್ನು ಪಡೆದುಕೊಂಡು ಗುರಿಯನ್ನು ಸಾಧಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ‘ಸರ್ಕಾರಿ ಉದ್ಯೋಗಗಳು’ ವಿಷಯದ ಕುರಿತು ಆದರ್ಶ ವಿದ್ಯಾಲಯದ ಇಂಗ್ಲಿಷ್ ಭಾಷಾ ಶಿಕ್ಷಕ ಮಲ್ಲಪ್ಪ ಕೆ. ಮಾತನಾಡುತ್ತಾ, ಸರ್ಕಾರಿ ಉದ್ಯೋಗವನ್ನು ಪಡೆಯಲು ಸಾಕಷ್ಟು ಶ್ರಮಪಡಬೇಕು. ಸತತ ಅಧ್ಯಯನ, ಸಾಮಾನ್ಯ ಜ್ಞಾನ, ಪ್ರಚಲಿತ ಘಟನೆಗಳನ್ನು ಗಮನಿಸುತ್ತಿರಬೇಕು. ಅಭ್ಯರ್ಥಿಗಳು ತಮಗೆ ಬೇಕಿರುವ ಸರ್ಕಾರಿ ಹುದ್ದೆಯನ್ನು ಪಡೆಯುಲು ಸೂಕ್ತ ಮಾರ್ಗದರ್ಶನ, ಶಿಸ್ತುಬದ್ಧವಾಗಿರುವ ಅಭ್ಯಾಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಕೇವಲ ಸರ್ಕಾರಿ ಉದ್ಯೋಗಕ್ಕಾಗಿ ಕಾಯದೆ ಸ್ವಯಂ ಉದ್ಯೋಗವನ್ನು ಮಾಡಲು ಯೋಚಿಸಬೇಕು. ಎಸ್ ಎಸ್ ಎಲ್ ಸಿಯ ನಂತರ ಯಾವುದೇ ಗೊಂದಲಕ್ಕೆ ಒಳಗಾಗದೆ ನಿಮಗೆ ಇಷ್ಟವಿರುವ ಕೋರ್ಸುಗಳನ್ನು ಆಯ್ಕೆ ಮಾಡಿಕೊಂಡು ಅಧ್ಯಯನವನ್ನು ಮುಂದುವರಿಸಬೇಕು ಎಂದರು.
ಕಲಮಂಗಿ ಪ್ರೌಢಶಾಲೆಯ ಇಂಗ್ಲಿಷ್ ಭಾಷಾ ಶಿಕ್ಷಕ ವೀರೇಶ ಗೋನವಾರ ಅವರು ಮಾತನಾಡುತ್ತಾ, ವಿದ್ಯಾರ್ಥಿಗಳು ಕನಸುಗಳನ್ನು ಇಟ್ಟುಕೊಂಡು ಅಭ್ಯಾಸವನ್ನು ಮಾಡಬೇಕು. ಇಟ್ಟುಕೊಂಡಿರುವ ಛಲವನ್ನು ಸಾಧಿಸಲು ಸತತ ಪರಿಶ್ರಮ ಮತ್ತು ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡಬೇಕು. ಒಂದು ಸಾರಿ ಓದಿರುವುದನ್ನು 24 ಗಂಟೆಯೊಳಗೆ ಪುನಃ ಸ್ಮರಣೆ ಮಾಡುವುದರಿಂದ ನಾವು ಕಲಿತಿರುವುದು ಶಾಶ್ವತವಾಗಿ ನಮ್ಮ ಮನಸ್ಸಿನಲ್ಲಿ ಉಳಿಯುತ್ತದೆ. ಈ ರೀತಿಯಾಗಿ ವಿದ್ಯಾಭ್ಯಾಸವನ್ನು ಮಾಡುವುದರಿಂದ ಉತ್ತಮ ಅಂಕಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ವೈದ್ಯಕೀಯ ಕ್ಷೇತ್ರ ಕುರಿತು ಅಗಸ್ತ್ಯ ಇಂಟರ್ನ್ಯಾಷನಲ್ ಫೌಂಡೇಶನ್ ವಿಜ್ಞಾನ ಕೇಂದ್ರದ ತಾಲೂಕ ಸಂಯೋಜಕ ಶಿವಗ್ಯಾನಪ್ಪ ಅವರು ಮಾತನಾಡುತ್ತಾ, 10ನೇ ತರಗತಿಯ ನಂತರ ನಿಮಗೆ ಆಸಕ್ತಿ ಇರುವ ಕೋರ್ಸುಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಉತ್ತಮ ರೀತಿಯಲ್ಲಿ ಅಭ್ಯಾಸವನ್ನು ಮಾಡಿ ನಿಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದರು.
ಶಾಲೆಯ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದ ಮಾರ್ಗದರ್ಶಿ ಶಿಕ್ಷಕ ರಾಮದಾಸ ಅವರು ಮಾತನಾಡುತ್ತಾ, ವಿದ್ಯಾರ್ಥಿ ದೆಸೆಯಿಂದಲೇ ಛಲವನ್ನು ಇಟ್ಟುಕೊಂಡು ಅದನ್ನು ಸಾಧಿಸುವರೆಗೂ ವಿರಮಿಸುವುದಿಲ್ಲ ಎನ್ನುವ ಪಣ ತೊಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆನೀಡಿದರು.
ವೇದಿಕೆಯ ಮೇಲೆ ಶಿಕ್ಷಕರಾದ ಅಂಜನಾದೇವಿ, ಖಾಜಾಬನಿ ರೇಷ್ಮಾ ಉಪಸ್ಥಿತರಿದ್ದರು.
ವೃತ್ತಿ ಮೇಳ: ಇದೇ ಸಂದರ್ಭದಲ್ಲಿ ಆರೋಗ್ಯ, ಮಾಹಿತಿ ತಂತ್ರಜ್ಞಾನ, ಸರ್ಕಾರಿ ಉದ್ಯೋಗಳು, ಬ್ಯಾಂಕಿಂಗ್, ಕೃಷಿ ಮತ್ತು ಟೀಲರಿಂಗ್ ವಿಷಯಗಳ ಕುರಿತು ವಿದ್ಯಾರ್ಥಿಗಳು ಮಳಿಗೆಗಳನ್ನು ನಿರ್ಮಾಣ ಮಾಡಿ, ಆಯಾ ಕ್ಷೇತ್ರಗಳ ವ್ಯಾಪ್ತಿ, ಮಹತ್ವ, ಪರಿಕರಗಳ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳು ವಿವರಣೆಯನ್ನು ನೀಡಿದರು.
- ಕರುನಾಡ ಕಂದ ಪತ್ರಿಕೆ




















