ನಿಜ… ದಶಕಗಳ ಕಾಲ ಆಕೆ ಯುದ್ಧ ರಂಗ ಸಮಾನವಾದ ಹೋರಾಟದಲ್ಲಿ ಮುಂಚೂಣಿ ಸ್ಥಾನದಲ್ಲಿ ಅತ್ಯಂತ ಸ್ಥಿರವಾಗಿ ನಿಂತು ಹೋರಾಡಿದ ಫಲವಾಗಿ ಸಾವಿರಾರು ಯುವತಿಯರ ಮಾನವ ಕಳ್ಳ ಸಾಗಾಣಿಕೆಯನ್ನು ತಪ್ಪಿಸಲು ಸಾಧ್ಯವಾಯಿತು. ಅತ್ಯಂತ ಪ್ರಭಾವಶಾಲಿಗಳು ಕೂಡ ಈ ಹೋರಾಟದಲ್ಲಿ ಪಾಲ್ಗೊಳ್ಳಲು, ಹೋರಾಟಗಾರರೊಂದಿಗೆ ತಮ್ಮನ್ನು ತಾವು ಗುರುತಿಸಿಕೊಳ್ಳಲು ಹೆದರುತ್ತಿದ್ದ ಸಮಯದಲ್ಲಿ ಆಕೆ ಅಚಲವಾಗಿ ನಿಂತಳು.
ಆಕೆಯ ಸ್ಥೈರ್ಯದ ನಡೆ, ಸತತ ಪ್ರಯತ್ನ ಹಾಗೂ ಕಾರ್ಯ ತತ್ಪರತೆಯ ಪರಿಣಾಮವಾಗಿ 12 ಸಾವಿರಕ್ಕೂ ಹೆಚ್ಚು ಬಾಲಕಿಯರು ಲೈಂಗಿಕ ಶೋಷಣೆಯ ಜಾಲದಿಂದ ಬಿಡುಗಡೆಯಾದರು. ಸರಿ ಸುಮಾರು 52 ಸಾವಿರಕ್ಕೂ ಹೆಚ್ಚು ಜನ ಮಹಿಳೆಯರು ಮತ್ತು ಮಕ್ಕಳು ಮಾನವ ಕಳ್ಳ ಸಾಗಾಣಿಕೆಯ ಜಾಲದಿಂದ ಬಿಡಿಸಿಕೊಳ್ಳಲು ಕಾರಣವಾಯಿತು. ಆಕೆಯೇ ಅನುರಾಧ ಕೊಯಿರಾಲ.
ನೇಪಾಳ ದೇಶದ ಅನುರಾಧ ಕೊಯಿರಾಲ ಅವರು ‘ಮಾಟಿ ನೇಪಾಲ’ ಎಂಬ ಸಂಸ್ಥೆಯೊಂದನ್ನು ಆರಂಭಿಸಿ ಅತ್ಯಂತ ಗಂಭೀರ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿರುವ ಹೆಣ್ಣುಮಕ್ಕಳನ್ನು, ಮಹಿಳೆಯರನ್ನು ರಕ್ಷಿಸಲು ಆರಂಭಿಸಿದರು. ಹಾಗೆ ರಕ್ಷಿಸಿದ ಹೆಣ್ಣು ಮಕ್ಕಳಿಗೆ ವಸತಿಯನ್ನು ಕೂಡಾ ಒದಗಿಸಿದರು.
ಮುಂದಿನ ಹಂತದಲ್ಲಿ ಚಿಕ್ಕ ಬಾಲಕಿಯರಾದರೆ ಅವರಿಗೆ ಶಿಕ್ಷಣ ಕೊಡಿಸುವ ಜವಾಬ್ದಾರಿಯನ್ನು ನಿರ್ವಹಿಸಿದ ಅವರು ಮಹಿಳೆಯರಿಗೆ ಔದ್ಯೋಗಿಕ ಚಟುವಟಿಕೆಗಳನ್ನು ಕಲಿಯಲು ಪ್ರೋತ್ಸಾಹಿಸಿ, ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸುವ ಮೂಲಕ ಬದುಕನ್ನು ಕಟ್ಟಿಕೊಳ್ಳಲು ಪ್ರೋತ್ಸಾಹಿಸಿದರು. ಇದರ ಜೊತೆಗೆ ಮನೆಯನ್ನು ಬಿಟ್ಟು ಬಂದ, ತಪ್ಪಿಸಿಕೊಂಡು ಬಂದ ಹೆಣ್ಣು ಮಕ್ಕಳ ದುರ್ಬಲವಾದ ಮನಸ್ಥಿತಿಯನ್ನು ಹಾಗೂ ಕಳ್ಳ ಸಾಗಾಣಿಕೆಯಾಗುವ ಸಮಯದಲ್ಲಿ ಅವರು ಅನುಭವಿಸಿದ ವ್ಯಥೆಗಳ ಪರಿಣಾಮವಾಗಿ ಉಂಟಾದ ದೈಹಿಕ ಮಾನಸಿಕ ತೊಂದರೆಗಳನ್ನು ನಿವಾರಿಸಿಕೊಳ್ಳಲು ಪುನರ್ವಸತಿ ಯೋಜನೆಯ ಜೊತೆಗೆ ಸಮಾಲೋಚಕರ ತಜ್ಞ ವೈದ್ಯರ ನೆರವು ದೊರೆಯುವಂತೆ ಮಾಡಿದರು. ಅವರ ಪರವಾಗಿ ಕಾನೂನಾತ್ಮಕ ಬೆಂಬಲ ಹಾಗೂ ಪರಿಹಾರಗಳನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿದರು. ಬದುಕಿನಲ್ಲಿ ಹತಾಶೆಯನ್ನು ಅನುಭವಿಸಿದ್ದ ಹೆಣ್ಣು ಮಕ್ಕಳಿಗೆ, ಭವಿಷ್ಯವನ್ನು ಕಳೆದುಕೊಂಡ ಯುವತಿಯರಿಗೆ ಭರವಸೆಯ ದಾರಿ ತೋರಿದರು.
ಇದು ಕೇವಲ ಕ್ರಿಯಾಶೀಲತೆಯಲ್ಲ ಇದೊಂದು ಧೈರ್ಯಶಾಲಿಯಾದ ದಿಟ್ಟವಾದ ಪ್ರಕ್ರಿಯೆ…ಹೆಜ್ಜೆ
ಇಡೀ ಜಗತ್ತು ನೆಮ್ಮದಿಯ ನಿದ್ರೆಯಲ್ಲಿ ಜಾರಿದಾಗ ಅನುರಾಧ ಕೆಂಪು ದೀಪದ ಜಿಲ್ಲೆಗಳಲ್ಲಿ ಗಡಿ ಭಾಗಗಳಲ್ಲಿ ಅತ್ಯಂತ ಅಪಾಯಕಾರಿ ನೆಟ್ವರ್ಕ್ ಗಳ ಮಧ್ಯದಲ್ಲಿ ಕಾರ್ಯ ನಿರ್ವಹಿಸುತ್ತಾ ತನ್ನ ನೇಪಾಳ ದೇಶದ ಹೆಣ್ಣು ಮಕ್ಕಳನ್ನು ಮರಳಿ ಮನೆಗೆ ಕರೆ ತರುವ ಪ್ರಯತ್ನದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡರು.
ಅಂತರಾಷ್ಟ್ರೀಯ ಮಾನ್ಯತೆಯನ್ನು ಪಡೆದಿರುವ ಆಕೆಯ ಈ ಕಾರ್ಯಕ್ಕೆ ಸಾಕಷ್ಟು ಪ್ರತಿಷ್ಠಿತ ಪ್ರಶಸ್ತಿಗಳು ಪುರಸ್ಕಾರಗಳು ಒದಗಿವೆ ಆದರೆ ಆಕೆಗೆ ನಿಜವಾಗಿಯೂ ದೊರೆತ ಪ್ರಶಸ್ತಿ ಯಾವುದು ಗೊತ್ತೇ ?
ಸಾವಿರಾರು ಜನ ಹೆಣ್ಣು ಮಕ್ಕಳ ಬದುಕು ಪುನರ್ ನಿರ್ಮಾಣವಾಗಿದ್ದು ಅವರ ಭವಿಷ್ಯವನ್ನು ಕಾಪಿಟ್ಟದ್ದು ಹಾಗೂ ಕಳೆದು ಹೋದ ಅವರ ಧ್ವನಿಯನ್ನು ಅವರಿಗೆ ಮರಳಿಸಿ ಕೊಟ್ಟ ಅನುರಾಧ ಕೊಯಿರಾಲ ಅವರ ಶ್ಲಾಘನೀಯ ಕ್ರಮಕ್ಕೆ ಸಂತ್ರಸ್ತರ ನೆಮ್ಮದಿಯ ನಿಟ್ಟುಸಿರು ಆಕೆಯ ಪಾಲಿನ ನಿಜವಾದ ಪ್ರಶಸ್ತಿಯಾಗಿದೆ.
ಇಂತಹ ವ್ಯಕ್ತಿಯ ಸಾಧನೆಗೆ ಕೇವಲ ಗೌರವಿಸಿದರೆ ಸಾಲದು, ಆಕೆಗೆ ಜಾಗತಿಕ ಮನ್ನಣೆ ಕೂಡ ದೊರೆಯಲೇಬೇಕು. 21ನೇ ಶತಮಾನದಲ್ಲಿಯೂ ಮಹಿಳೆಯರ ಶೋಷಣೆ ಜಾರಿಯಲ್ಲಿರುವಾಗ ಅನುರಾಧ ಅಂಥವರು ನಮಗೆ ಮಾನವೀಯತೆ ಇನ್ನೂ ಸಾಕಷ್ಟು ಜನರಲ್ಲಿ ಇದ್ದು ಇಂತಹ ಶೋಷಣೆಯ ವಿರುದ್ಧ ಹೋರಾಡಲು ಸದಾ ಸಿದ್ಧವಾಗಿರುತ್ತದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ತನ್ನವರಿಗಾಗುವ ಅನ್ನಾಯದ ವಿರುದ್ಧ ಸೊಲ್ಲೆತ್ತಿದ ಸಹಾನುಭೂತಿಯನ್ನು ಚಳುವಳಿಯನ್ನಾಗಿಸಿದ ಆ ದಿಟ್ಟ ಮಹಿಳೆಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಮಯದಲ್ಲಿ ಒಂದು ದೊಡ್ಡ ಸಲಾಂ.
- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ ಗದಗ.



















