” ಬೀಸಿದ ಬಲೆಗೆ ಬಲಿ ಯಾರೋ ” ಎಂಬ ಪತ್ತೇದಾರಿ ಕಾದಂಬರಿಯನ್ನು ಸಹೃದಯರ ಕೈಗಿಟ್ಟ ಲೇಖಕರಾದ ರಾಮಕೃಷ್ಣ ಎನ್. ಅವರಿಗೆ ಧನ್ಯವಾದಗಳು.
ಈ ಕಾದಂಬರಿಯನ್ನು ಓದಲು ಪ್ರಾರಂಭ ಮಾಡಿದಾಗಲಿಂದ ಕೊನೆಯವರೆಗೂ ವಿಚಲಿತವಾಗದೆ ಓದಿದೆ. ಈ ಕಾದಂಬರಿಯು ಕುತೂಹಲವನ್ನು ಕೆರಳಿಸುತ್ತೆ ಮತ್ತು ಕುತೂಹಲವನ್ನು ಅಳವಡಿಸಿದ್ದಾರೆ. ಇದರ ಜೊತೆಗೆ ಬರವಣಿಗೆ ಶೈಲಿ ನಮ್ಮನ್ನು ಓದಿಸಿಕೊಂಡು ಹೋಗುತ್ತೆ. ಇಲ್ಲಿರುವ ಸರಳ ಬರವಣಿಗೆ ಶೈಲಿ ಅದ್ಭುತವಾಗಿದೆ ಮತ್ತು ಓದುಗರ ಹೃದಯ ಮುಟ್ಟುತ್ತೆ.
ತಿಪ್ಪಯ್ಯನಪಾಳ್ಯ ಎಂಬ ಹಳ್ಳಿಯ ವಾತಾವರಣದಿಂದ ಕಾದಂಬರಿ ಪ್ರಾರಂಭವಾಗುತ್ತೆ. ವನಿತಾ ಎಂಬ ಪಾತ್ರ ತುಂಬಾ ಆಶ್ಚರ್ಯ ಮೂಡಿಸುತ್ತದೆ. ವನಿತಾ ಮತ್ತು ಆಕಾಶ್ ಇವರಿಬ್ಬರ ಅನೈತಿಕ ಸಂಬಂಧವು ಸಾಕಷ್ಟು ಸಾವು ನೋವುಗಳನ್ನು ಈ ಊರಿಗೆ ತರುತ್ತೆ. ಹೆತ್ತ ಕರುಳನ್ನೇ ತಾಯಿ ಕೊಲೆ ಮಾಡುವುದು ನನಗೆ ಅರಗಿಸಿಕೊಳ್ಳಲು ಅಸಾಧ್ಯವಾಯಿತು. ಆದರೆ ಪ್ರಸ್ತುತ ಸಮಾಜದಲ್ಲಿ ಕೆಲವೆಡೆ ಇಂತಹ ಘಟನೆಗಳು ಜರುಗುತ್ತಿವೆ. ಒಂದು ಮಗುವನ್ನು ಈ ಪ್ರಪಂಚ ತಿರಸ್ಕರಿಸಿದರು ತಾಯಿ ಎಂದೂ ಯಾವ ಕಾರಣಕ್ಕೂ ಮತ್ತು ಎಂತಹ ಕಷ್ಟಗಳು ಎದುರಾದರೂ ತನ್ನ ಕಂದನ ಕೈ ಬಿಡಲ್ಲ ಎಂಬುದು ಸುಳ್ಳು ಎಂದು ತಿಳಿಯುತ್ತೆ. ಹಾಗಂತ ಈ ಬರವಣಿಗೆ ತಾಯಿ ವಿರೋಧಿಯಲ್ಲ ಬದಲಿಗೆ ಅವಳು ಮಾಡಿದ ತಪ್ಪನ್ನು ಮುಚ್ಚಿಡಲು ಮಗನನ್ನು ಕೊಲೆ ಮಾಡುತ್ತಾಳೆ. ಅದೇಗೆಂದರೆ ವಿಧಿ ಎಂಬಂತೆ ಸತ್ತಿರುವುದಾಗಿ ಜನ ತಿಳಿಯುವ ಮಟ್ಟಕ್ಕೆ ಬುದ್ದಿ ಉಪಯೋಗಿಸಿ ಕೊಲೆ ಮಾಡಿರುತ್ತಾಳೆ. ಇಷ್ಟೇ ಅಲ್ಲ ತನ್ನ ಗಂಡ, ಮತ್ತು ಅತ್ತೆಯನ್ನು ಕೊಲೆ ಮಾಡುತ್ತಾಳೆ. ಅದೇಗೆ ಅಂತ ನೀವೇ ಓದಿ ಅರ್ಥವಾಗುತ್ತೆ. ಇಷ್ಟಕ್ಕೆ ಮುಗಿಯಲ್ಲ ಊರಿನಲ್ಲಿ ದೆವ್ವ ಇದೆ ಅಂತೆಲ್ಲ ವದಂತಿ ಹಬ್ಬಿಸಿ ಊರಿನವರಿಗೆ ನರಕ ನೀಡುತ್ತಾಳೆ. ವನಿತಾ ಮತ್ತು ಆಕಾಶ್ ಪಾತ್ರದ ಮತ್ತೊಂದು ಬೇಸರದ ಸಂಗತಿ ಎಂದರೆ ; ವನಿತಾ ಅವರ ಅತ್ತೆಯನ್ನು ಕೊಲೆ ಮಾಡಿ, ತನ್ನ ದೇಹದ ಬಯಕೆ ಈಡೇರಿಸಿಕೊಳ್ಳುತ್ತಾರೆ.
ವನಿತಾ ಪ್ರಾರಂಭದಲ್ಲೇ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಿದ್ದರೆ ಅವರ ಮನೆಯವರು ಕ್ಷಮಿಸಿಬಿಡುತ್ತಿದ್ದರೇನೋ ಕ್ಷಮಿಸದಷ್ಟು ಕ್ರೂರ ಮನಸ್ಸಿನವರಾದರೂ ಆ ಮನೆಯಲ್ಲಿ ಇರಲಿಲ್ಲ ಬಿಡಿ. ವನಿತಾ ತನ್ನ ತಪ್ಪನ್ನು ತಿದ್ದಿಕೊಳ್ಳದೆ ಪುನಃ ಪುನಃ ತಪ್ಪು ಮಾಡುತ್ತ ಕೊನೆಗೆ ತಾನೇ ತನ್ನ ಕೈಯಾರೆ ಸಾವಿನ ಕುಣಿಕೆಗೆ ಕತ್ತು ನೀಡುತ್ತಾಳೆ. ಬಹುತೇಕ ನಮ್ಮ ಜನ ಹಾಗೆ ಒಂದು ತಪ್ಪು ಮಾಡಿರುವ ಅರಿವಿದ್ದರೂ ತಿದ್ದಿಕೊಳ್ಳದೆ ಮತ್ತೆ ಮತ್ತೆ ತಪ್ಪುಗಳನ್ನು ಮಾಡುತ್ತಿರುತ್ತಾರೆ. ಹೀಗೆ ಸಾಗುವುದರಿಂದ ಪ್ರಾರಂಭದಲ್ಲಿ ಜೀವನ ಚೆನ್ನಾಗಿರುತ್ತೆ, ಆದ್ರೆ ಬದುಕಿನ ಒಂದು ಹಂತ ಮುಗಿದ ನಂತರ ತುಂಬಾ ಪಶ್ಚತ್ತಾಪ ಪಡಬೇಕಾಗುತ್ತೆ. ಆತ್ಮಸಾಕ್ಷಿ ವಿಚಾರ ಅಂತ ಬಂದಾಗ ಅವರ ಒಳ ಮನಸ್ಸು ವಿರೋಧಿಸಿ ಹೇಳುತ್ತೆ; ನೀನು ಮಾಡಿದ್ದು ತಪ್ಪು ಅಂತ. ಇಂತಹ ಸಂದರ್ಭದಲ್ಲಿ ನೆಮ್ಮದಿ ಇಲ್ಲದೆ ಪ್ರತಿದಿನ ಕೊರಗಿ ಕೊರಗಿ ಜೀವನ ಸಾಗಿಸಬೇಕಾಗುತ್ತೆ. ಇದನ್ನು ಲೇಖಕರು ಸಹೃದಯಿ ಮನಸ್ಸಿಗೆ ಮುಟ್ಟುವಂತೆ ಹೇಳಿದ್ದಾರೆ.
ಒಡಹುಟ್ಟಿದವರು ಬರಿ ಆಸ್ತಿಯನ್ನು ಹಂಚಿಕೊಳ್ಳಲು ಸೀಮಿತವಲ್ಲ. ಒಡಹುಟ್ಟಿದವರ ಸಮಸ್ಯೆಗಳನ್ನು ಹಂಚಿಕೊಳ್ಳುತ್ತಾರೆ ಎನ್ನುವುದಕ್ಕೆ ವೀರೇಶ್ ಮತ್ತು ವರದ ಉತ್ತಮ ಉದಾಹರಣೆಯಾಗಿದ್ದಾರೆ. ಹೆಣ್ಣಿಗೆ ಬಯಕೆಗಳಿರಬೇಕು ಆದ್ರೆ ಅತಿಯಾದ ಬಯಕೆಗಳಿರಬಾರದು ಅದಲ್ಲೂ ತನ್ನ ತನವನ್ನೇ ಮರೆತು ಬದುಕುವಷ್ಟು ಬೇಡ. ನಮ್ಮ ಬಯಕೆಗಳಿಂದ ಮತ್ತೊಬ್ಬರಿಗೆ ತೊಂದರೆಯಾಗುವುದಾರೆ ಖಂಡಿತ ಬೇಡ. ನಾವು ನಮ್ಮ ಬದುಕನ್ನು ಬದುಕಬೇಕೆ ವಿನಃ ಮತ್ತೊಬ್ಬರ ಬದುಕಿಗೆ ತೊಂದರೆ ನೀಡಬಾರದು ಎನ್ನುವುದಕ್ಕೆ ಲತಾ ಪಾತ್ರವು ನಿದರ್ಶನ. ಅವಳು ಮಾಡಿದ ಮೋಸ, ಪಾಪ ಕಾರ್ಯಕ್ಕೆ ತಾನೇ ಆತ್ಮಹತ್ಯೆ ಮಾಡಿಕೊಂಡು ಬಿಡುತ್ತಾಳೆ. ಅವಳೆನೋ ಆತ್ಮಹತ್ಯೆ ಮಾಡಿಕೊಂಡು ಸತ್ತಳು ಆದ್ರೆ ಅಂಜನ್ ಹುಚ್ಚನಾಗಿ ಬಿಡುತ್ತಾನೆ. ಇದಕ್ಕೆ ಕಾರಣ ಅವಳೇ ಆಗಿರುತ್ತಾಳೆ. ಲತಾಳಿಗೆ ತಾನು ಮಾಡಿದ್ದು ತಪ್ಪು ಎಂದು ಅರಿವಾಗುವಷ್ಟರಲ್ಲಿ ಕಾಲ ಸರಿದು ಅಂಜನ್ ಹುಚ್ಚನಾಗಿ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಾಗಿರುತ್ತಾನೆ. ಈ ಸಂದರ್ಭದ ಓದುಗರಲ್ಲಿ ಕಣ್ಣೀರು ತರುತ್ತೆ. ಮದುವೆಯಾಗಿ ವಿಚ್ಛೆದನದ ವಿಷಯ ಬಂದಾಗ ನ್ಯಾಯಾಲಯದಲ್ಲಿ ಅಂಜನ್ ಕೇಳುವ ಪ್ರಶ್ನೆಗಳಿಗೆ ನ್ಯಾಯಾಲಯದಲ್ಲಿ ಮಾತ್ರವಲ್ಲದೆ ನಮ್ಮ ಬಳಿಯೂ ಉತ್ತರ ಇಲ್ಲ.
ಪ್ರಸ್ತುತ ಸಮಾಜಕ್ಕೆ ” ಅನೈತಿಕತ ಸಂಬಂಧ ಎನ್ನುವುದು ಒಂದು ಪಿಡುಗು. ” ಗಂಡಿಗೆ ಆಗಲಿ, ಹೆಣ್ಣಿಗೆ ಆಗಲಿ ಅನೈತಿಕತೆ ಎಂಬುದು ಮಾರಕ. ನೆಮ್ಮದಿಯ ಬದುಕಿಗೆ ಹಳ್ಳಿ ಜೀವನ ಉತ್ತಮ. ಅದರಲ್ಲೂ ನಿಸರ್ಗದ ಜೊತೆಗೆ ಬದುಕುವ ಬದುಕು ಸಾರ್ಥಕ ಎಂದು ತಿಳಿಸುತ್ತೇನೆ. ನಗರದಲ್ಲಿ ಕೆಲಸ ಮತ್ತು ಮನೆ ಇದ್ದರು ಎಲ್ಲವೂ ಬಿಟ್ಟು ಹಳ್ಳಿಗೆ ಬಂದು ಜೀವಿಸಲು ಧೈರ್ಯ ಇರಬೇಕು ಬಿಡಿ. ಅದರಲ್ಲು ಕೃಷಿ ಮಾಡಿ ಜೀವನ ಸಾಗಿಸುವುದಾದರೆ ಬಂಡತನ ಬೇಕು. ಇದಕ್ಕೆ ಕರಿಯಪ್ಪನ ಮಗ ಮತ್ತು ಸೊಸೆ ಆದರ್ಶ. ಸಮಾಜದಲ್ಲಿ ಇರುವ ಅಧರ್ಮ, ಮೌಢ್ಯ, ದ್ರೋಹ ಮತ್ತು ಅನೈತಿಕತೆ, ಬಡತನ, ಅತಿಯಾದ ನಗರಿಕರಣ ಮತ್ತಿತರ ಪಿಡುಗುಗಳ ಬಗ್ಗೆ ಲೇಖಕರು ಕಾದಂಬರಿಯ ಮೂಲಕ ನಮ್ಮ ಮುಂದಿಟ್ಟಿದ್ದಾರೆ. ಸಹೃದಯಿ ಮನಸ್ಸುಗಳು ಓದಿ ಅರ್ಥ ಮಾಡಿಕೊಂಡರೆ ಬರಹಗಾರರಿಗೆ ಇದೆ ಶ್ರೇಯಸ್ಸು.
ಪುಸ್ತಕಕ್ಕಾಗಿ ಸಂಪರ್ಕ ಮಾಡಿ ಕದಂಬ ಪ್ರಕಾಶನ – 7795506693
ಲೇಖಕರಾದ ರಾಮಕೃಷ್ಣ. ಎನ್ ಅವರ ಜೊತೆಗೆ ಮಾತನಾಡುವುದಿದ್ದರೆ 7996838311 ಸಂಪರ್ಕ ಮಾಡಿ.
- ವಿಮರ್ಶಕರು ಹನುಮಂತ (ಚಬ್ಬಿ)




















