ಬಳ್ಳಾರಿ / ಕಂಪ್ಲಿ: ತಾಲೂಕಿನ ಗೋನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಗ್ಗೇನಹಳ್ಳಿ ಮತ್ತು ಮೆಟ್ರಿ ಸಮೂಹ ಸಂಪನ್ಮೂಲ ಕೇಂದ್ರದಿಂದ ಆಯೋಜಿಸಿದ್ದ ಎಫ್‌ಎಲ್‌ಎನ್ ಆಧರಿತ ಕಲಿಕಾ ಹಬ್ಬ ಗುರುವಾರ ಜರುಗಿತು.
ಎಸ್ಡಿಎಂಸಿ ಅಧ್ಯಕ್ಷ ಸರ್ಧಾರ್ ಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ದಿನಮಾನದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿದೆ. ಆದ್ದರಿಂದ ಪ್ರತಿಯೊಂದು ಮಕ್ಕಳು ಗುಣಾತ್ಮಕ ಶಿಕ್ಷಣ ಪಡೆದುಕೊಂಡು ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಬೇಕು. ಕಲಿಕಾ ಹಬ್ಬವೂ ಹಿಂದುಳಿದ ಮಕ್ಕಳನ್ನು ಗುರುತಿಸಿ, ಕಲಿಕೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಹಕಾರಿಯಾಗಿದೆ ಎಂದರು.
ಸಿಆರ್‌ಪಿ ಎ.ಎಸ್.ಭೂಮೇಶ್ವರ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಸೃಜನಾತ್ಮಕ ಗುಣ ಮತ್ತು ಕಲೆಯನ್ನು ಹೊರಗೆಳೆಯಲು ಪೂರ್ವತಯಾರಿ ನಡೆಸುವ ಹಬ್ಬವೇ ಕಲಿಕಾ ಹಬ್ಬ. ಕಲಿಕಾ ಹಬ್ಬವು ಮಕ್ಕಳಲ್ಲಿರುವ ವಿವಿಧ ಬಗೆಯ ಪ್ರತಿಭೆಯ ಸಾಮರ್ಥ್ಯವನ್ನು ಪ್ರಸ್ತುತಪಡಿಸಲು ಅವಕಾಶ ಮಾಡಿಕೊಡುತ್ತದೆ. ಜೊತೆಗೆ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಾಗುವಂತೆ ಮಾಡುತ್ತದೆ. ಕಲಿಕಾ ಹಬ್ಬ ಚಟುವಟಿಕೆ ಆಧಾರಿತವಾಗಿದೆ. ಇದರಿಂದ ಹೊಸ ಹೊಸ ಬಗೆಯ ಪಠ್ಯೇತರ ಚಟುವಟಿಕೆಯನ್ನು ಮಗು ಕಲಿಯಲು ಸಾಧ್ಯವಾಗುತ್ತದೆ. ಮಗುವಿನಲ್ಲಿ ಗುಪ್ತವಾಗಿರುವ ಜ್ಞಾನವನ್ನು ಚಟುವಟಿಕೆಯ ಮೂಲಕ ಹೊರ ತರಲು ಸಾಧ್ಯ ಎಂದರು.
ನಂತರ ನಲಿಕಲಿ ಕೊಠಡಿಯಲ್ಲಿ ಏಳು ಕಲಿಕಾ ಚಟುವಟಿಕೆಗಳನ್ನೊಳಗೊಂಡ ಕಲಿಕಾ ಹಬ್ಬ ಕಾರ್ಯಕ್ರಮಕ್ಕೆ ಚಾಲನೆ ದೊರಯಿತು. ಎಸ್ ಡಿ ಎಂ ಸಿ ಯವರು, ಮುಖ್ಯಗುರುಗಳು, ಶಿಕ್ಷಕಕರು, ಪೋಷಕರು ಮಕ್ಕಳ ಕಲಿಕಾ ಚಟುವಟಿಕೆಗಳನ್ನು ವೀಕ್ಷಿಸಿ ಸೈ ಎಂದರು. ನಂತರ ವಿಭಿನ್ನವಾಗಿ ಕಲಿಕಾ ಚಟುವಟಿಕೆಯೊಂದಿಗೆ ವಿಜೇತರಾದ ಮಕ್ಕಳಿಗೆ ಆಕರ್ಷಕ ಬಹುಮಾನ ಮತ್ತು ಪ್ರಶಸ್ತಿ ಪ್ರಮಾಣ ಪತ್ರ ವಿತರಿಸಿದರು.
ಈ ಸಂದರ್ಭದಲ್ಲಿ ಮುಖ್ಯಗುರುಗಳಾದ ಎಚ್.ಪಿ.ಸೋಮಶೇಖರ, ಮಲ್ಲಿಕಾರ್ಜುನ, ಶೇಖರ, ಮಾಲಿಕ್, ಗೋಣಿ ಬಸಪ್ಪ, ವೀರೇಶ, ರವಿಕುಮಾರ, ಮಡಿವಾಳಪ್ಪ, ಮಂಜುನಾಥ, ಉಷಾರಾಣಿ, ರೇಖಾ, ಅನುಸೂಯ, ಬಹುತ್ವ ಪ್ರತಿಷ್ಠಾನ ಎನ್‌ಜಿಒ ಸಂಸ್ಥೆಯ ಸದಸ್ಯ ಅಖಿಲೇಶ ಸೇರಿದಂತೆ ಶಿಕ್ಷಕ ವೃಂದದವರು, 19 ಶಾಲೆಗಳ ಮಕ್ಕಳು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















