ಬಳ್ಳಾರಿ / ಕಂಪ್ಲಿ : ಕಲಿಕಾ ಹಬ್ಬಗಳು ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತಂದು, ಕಲಿಕೆಯ ಮಟ್ಟವನ್ನು ಹೆಚ್ಚಿಸುತ್ತವೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಅಯೋಧ್ಯ ವೆಂಕಟೇಶ ಹೇಳಿದರು.
ಸ್ಥಳೀಯ 8ನೇ ವಾರ್ಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8ನೇ ವಾರ್ಡ್ ಸಮೂಹ ಸಂಪನ್ಮೂಲ ಕೇಂದ್ರದಿಂದ ಗುರುವಾರ ಆಯೋಜಿಸಿದ್ದ ಎಫ್‌ಎಲ್‌ಎನ್ ಆಧರಿತ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ಪ್ರಶ್ನಿಸುವ ಮನೋಭಾವ, ಆತ್ಮವಿಶ್ವಾಸ ಮತ್ತು ಸಕ್ರಿಯ ಕಲಿಕೆ ಬೆಳೆಸುವುದೇ ಕಲಿಕಾ ಹಬ್ಬದ ಮುಖ್ಯ ಉದ್ದೇಶ ಎಂದರು.
ನಂತರ ಸಮೂಹ ಸಂಪನ್ಮೂಲ ವ್ಯಕ್ತಿ (ಸಿಆರ್‌ಪಿ) ಎ.ಗಂಗಾಧರ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆ ಹಾಗೂ ಕಲಿಕೆಯ ಮೇಲಿನ ಆಸಕ್ತಿ ಹೆಚ್ಚಿಸಲು ಎಫ್‌ಎಲ್‌ಎನ್ ಕಲಿಕಾ ಹಬ್ಬಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಹಿಂದುಳಿದ ಮಕ್ಕಳ ಕಲಿಕಾ ಮಟ್ಟವನ್ನು ಹೆಚ್ಚಿಸುವ ಜೊತೆಗೆ ಅವರಲ್ಲಿರುವ ಪ್ರತಿಭೆಗಳನ್ನು ಹೊರತರುವ ನಿಟ್ಟಿನಲ್ಲಿ ಸಹಕಾರಿಯಾಗಲಿದೆ ಎಂದರು.
ಇಲ್ಲಿನ ಕಲಿಕಾ ಹಬ್ಬದ ಏಳು ಕಲಿಕಾ ಚಟುವಟಿಕೆಗಳಲ್ಲಿ 8 ಶಾಲೆಗಳ 64 ಮಕ್ಕಳು ಭಾಗವಹಿಸಿದ್ದರು. 14 ಜನ ನಿರ್ಣಾಯಕರಾಗಿ ಕೆಲಸ ನಿರ್ವಹಿಸಿದರು. ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಬಿ.ಸಿದ್ದಪ್ಪ, ಮುಖಂಡರಾದ ನಡವಿ ಮಲ್ಲಿಕಾರ್ಜುನ, ಈರಣ್ಣ, ಇಸಿಒ ರೇವಣ್ಣ, ಎನ್‌ಪಿಎಸ್ ರಾಜ್ಯಾಧ್ಯಕ್ಷ ನಾಗನಗೌಡ ಎಂ.ಎ, ಸಿಆರ್‌ಪಿ ರೇಣುಕಾರಾಧ್ಯ, ವಿಕಲಚೇತನ ಸಂಘದ ಅಧ್ಯಕ್ಷ ಜೋಗಿ ರುದ್ರಪ್ಪ, ಮುಖ್ಯಶಿಕ್ಷಕಿ ಸುಮಿತ್ರ, ಸಾವಿತ್ರಿ ಬಾಯಿಪುಲೆ ಅಧ್ಯಕ್ಷೆ ಸುನಿತಾ ಪೂಜಾರಿ, ಕಂಪ್ಲಿ-ಕೋಟೆಯ ಸ.ಹಿ.ಪ್ರಾ ಶಾಲೆಯ ಮುಖ್ಯಗುರು ಹೊಸಗೇರಪ್ಪ, ಸಹ ಶಿಕ್ಷಕರಾದ ಪರಶುರಾಮ, ಪಂಪಾಪತಿ ಸೇರಿದಂತೆ ಶಿಕ್ಷಕ ವೃಂದದವರು ಹಾಗೂ ಮಕ್ಕಳು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















