ಬಳ್ಳಾರಿ / ಕುಡತಿನಿ : ಪ್ರತಿಯೊಬ್ಬ ಮನುಷ್ಯ ಒಂದು ದಿನ ಊಟ, ಉಪಹಾರವಿಲ್ಲದೆ ಬದುಕಬಹುದು. ಆದರೆ, ಕುಡಿವ ನೀರಿಲ್ಲದೆ ಬದುಕಲಾರ. ಆದ್ದರಿಂದ ಕುಡಿವ ನೀರಿನ ಸೇವೆ ಅತ್ಯಂತ ಹಿರಿದು ಎಂದು ಸಮಾಜ ಸೇವಕ ರೂಪನಗುಡಿ ಎರ್ರಿಸ್ವಾಮಿ ಹೇಳಿದರು.
ಸೀತರಾಮ ದೇವರ ಜಾತ್ರೆ ಪ್ರಯುಕ್ತ ಹಾಗೂ ಬೇಸಿಗೆ ಹಿನ್ನಲೆಯಲ್ಲಿ ಕುಡತಿನಿ ಪಟ್ಟಣದ ದೊಡ್ಡ ಆಂಜನೇಯ ಸ್ವಾಮಿ ದೇವಸ್ಥಾನ ಬಳಿಯಲ್ಲಿ ಗೃಹಲಕ್ಷ್ಮೀ ಯೋಜನೆಯಡಿ ಬಂದಂತಹ ಹಣ ಮತ್ತು ಇನ್ನಿತರದಲ್ಲಿ ಕೂಡಿಟ್ಟ ಹಣದಿಂದ ಸ್ಥಾಪಿತವಾದ ಕುಡಿಯುವ ನೀರಿನ ಅರವಟ್ಟಿಗೆಯನ್ನು ಉದ್ಘಾಟಿಸುವ ಮೂಲಕ ಚಾಲನೆ ನೀಡಿದರು. ಈಗಾಗಲೇ ಬಿರು ಬಿಸಿಲು ಆರಂಭಗೊಂಡಿದೆ. ಇದರಿಂದ ನೀರಿನ ದಾಹ ಹೆಚ್ಚಾಗುತ್ತದೆ. ಆದ್ದರಿಂದ ಪಟ್ಟಣದ ಜನತೆಯ ಜೊತೆಗೆ ಪಟ್ಟಣಕ್ಕೆ ಆಗಮಿಸುವ ಸುತ್ತಮುತ್ತಲಿನ ಗ್ರಾಮೀಣ ಭಾಗದ ಜನರ ಕುಡಿಯುವ ನೀರಿನ ದಾಹ ನೀಗಿಸುವ ನಿಟ್ಟಿನಲ್ಲಿ ದೊಡ್ಡ ಆಂಜನೇಯ್ಯಸ್ವಾಮಿ ದೇವಸ್ಥಾನ ಮತ್ತು ಬಸ್ ನಿಲ್ದಾಣ ಬಳಿಯಲ್ಲಿ ನೀರಿನ ಅರವಟ್ಟಿಗೆಯ ವ್ಯವಸ್ಥೆ ಮಾಡಲಾಗಿದೆ. ಈ ವರ್ಷ ಈಗಾಗಲೇ ತಾಪಮಾನ ಹೆಚ್ಚಾಗಿದೆ. ಪಟ್ಟಣಕ್ಕೆ ವ್ಯಾಪಾರ ವಹಿವಾಟಿಗಾಗಿ ಬರುವ ಸಾವಿರಾರು ಪ್ರಯಾಣಿಕರು ಮತ್ತು ಸಾರ್ವಜನಿಕರ ನೀರಿನ ದಾಹ ತಣಿಸಲು ಕಳೆದ 14 ವರ್ಷದಿಂದ ಪ್ರತಿ ವರ್ಷದಂತೆ ಈ ವರ್ಷವೂ ನೀರಿನ ಅರವಟಿಗೆ ಪ್ರಾರಂಭಿಸಿದ್ದೇನೆ. ಜನರು ನೀರು ಪೋಲು ಮಾಡದೇ ಮಿತವಾಗಿ ಬಳಸಿ, ಮತ್ತೊಬ್ಬರಿಗೆ ನೀರು ಒದಗಿಸಲು ಮುಂದಾಗಬೇಕು. ಮತ್ತು ಸ್ವಚ್ಚತೆ ಕಡೆಗೆ ಹೆಚ್ಚಿನ ಆಧ್ಯತೆ ನೀಡುವ ಜೊತೆಗೆ ಗಿಡಮರಗಳನ್ನು ಬೆಳೆಸಿದರೆ, ಕಾಲ ಕಾಲಕ್ಕೆ ಸಮೃದ್ಧ ಮಳೆ, ಬೆಳೆಯಾಗಲು ಸಾಧ್ಯ ಎಂದರು.
ಮುಖಂಡ ಕೆ.ಎಂ.ಹಾಲಪ್ಪ ಮಾತನಾಡಿ, ಜನ ಸೇವೆಯೇ ಜನಾರ್ಧನ ಸೇವೆ ಎಂಬಂತೆ ಸತತ 14 ವರ್ಷದಿಂದ ಕುಡತಿನಿ ಪಟ್ಟಣದ ಜನತೆಗೆ ಕುಡಿಯುವ ನೀರಿನ ಸೇವೆ ಒದಗಿಸುತ್ತಾ ಬಂದಿದ್ದಾರೆ. ಜನರಿಗೆ ಕುಡಿಯುವ ನೀರಿನ ಅರವಟಿಗೆಗಳು ಅತಿ ಅಗತ್ಯವಾಗಿದ್ದು, ಪ್ರತಿವರ್ಷ ಸಮಾಜ ಸೇವಕ ಎರ್ರಿಸ್ವಾಮಿ ಇವರು ಅರವಟ್ಟಿಗೆ ಆರಂಭಿಸಿರುವುದು ಶ್ಲಾಘನೀಯ ಎಂದರು.
ಕುಡತಿನಿ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಕುಡಿಯುವ ನೀರಿನ ಅರವಟ್ಟಿಗೆ ಸ್ಥಾಪಿಸಿ ಉದ್ಘಾಟಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಮುಖಂಡರಾದ ಪಾವಗಂಡಿ ರಾಮಲಿಂಗಪ್ಪ, ಪೂಜಾರಿ ಬಾಲಾಜಿ ಆಚಾರಿ, ಕಡ್ಲೆ ಮಹೇಶಪ್ಪ, ವಿರುಪಾಕ್ಷಪ್ಪ, ಕೊಟ್ಟಾಲ್ ಯರ್ರಿಸ್ವಾಮಿ, ಗ್ಯಾಂಗ್ ಹನುಮಂತ, ಚಂದ್ರಪ್ಪ ಸೇರಿದಂತೆ ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















