ಆಚಾರ -ವಿಚಾರ-ಸಂಸ್ಕೃತಿ -ಸಂಪ್ರದಾಯ,
ಹಬ್ಬ – ಹರಿದಿನ ನಿತ್ಯ ಸತ್ಯ,
ಶುಭವ ಹೊತ್ತು ತರುವ ಸೊಬಗಿನ ಸೂರ್ಯೋದಯ,
ಸಂಪದ್ಭರಿತ ವಸಂತ ಋತುವಿನಿಂದ ಕಂಗೊಳಿಸುತಿರುವ ಸೃಷ್ಟಿಯ ಕಾವ್ಯ ಅತೀ ಭವ್ಯ…
ಮಾವು-ಬೇವಿನ ಹೊಸ ಚಿಗುರಿನ ದೃಶ್ಯ,
ಪ್ರಕೃತಿಯ ರಮಣೀಯ ಸೊಬಗಿನ ವಿಸ್ಮಯ,
ಮಾಮರ-ಕೋಗಿಲೆಯ ಸಂಬಂಧಗಳ ಬೆಸುಗೆಯ ಸಾಮಿಪ್ಯ,
ಕಿವಿಗಿಂಪಾಗಿ ಕೇಳಿಸುವ ಕೋಗಿಲೆಯ ಸ್ವರ ಅತೀ ಮಾಧುರ್ಯ…
ಹಸಿರು ಮಾವಿನೆಲೆಯ ತೋರಣ,
ಮನೆಯ ಬಾಗಿಲಲ್ಲಿ ರಂಗವಲ್ಲಿಗಳ ಚಿತ್ರಣ,
ಬಗೆ-ಬಗೆಯ ಹೂ ಮಾಲೆಗಳ ಹೊಂಬಣ್ಣ,
ಹೊಸ ಬಗೆಯ ರಂಗು-ರಂಗಿನ ಉಡುಗೆ ತೊಡುಗೆಗಳ ಶೃಂಗಾರದ ಸೌಂದರ್ಯ..
ಬೇವು-ಬೆಲ್ಲದ ಮಿಶ್ರಣ,
ಮೃಷ್ಟಾನ್ನ ಭೋಜನದ ಹೂರಣ,
ಮೊಗವು ಖುಷಿಯ ಹಂಚುವ ತಾಣ,
ನೋವ ಮರೆಯೋಣ,
ಹೊಸ ನಗುಭರಿತ ನಲಿವಿನ ಬದುಕನ್ನು ಸ್ವಾಗತಿಸೋಣ,
ಕೂಡಿ ಬೆರೆತು-ಅರಿತು ಬಾಳೋಣ,
ಪ್ರೀತಿಯ ಹಂಚುತ ಸಾಗೋಣ…
ಹೊಸ ವರುಷ-ಹೊಸ ಹರುಷ, ಸವಿಯ ಉಣಬಡಿಸುವ ಯುಗಾದಿಯು ಬೆಸೆಯುವುದು ಸಂಬಂಧಗಳ ಸ್ಪರ್ಶ…
- ಶಾಂತಾರಾಮ ಹೊಸ್ಕೆರೆ,
ಶಿರಸಿ, ಉತ್ತರ ಕನ್ನಡ..

















