
ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮುಖಂಡರೊಂದಿಗೆ ವಾಗ್ವಾದಕ್ಕಿಳಿದ ಸ್ಥಳೀಯ ಮಹಿಳೆಯರು.
ಬಳ್ಳಾರಿ / ಕಂಪ್ಲಿ : ಬಡ ಮಕ್ಕಳಿಗೆ ಒಳ್ಳೆಯ ಶಿಕ್ಷಣ ದೊರೆಯಬೇಕೆಂಬ ನಿಟ್ಟಿನಲ್ಲಿ ಪಟ್ಟಣದ ಸಕ್ಕರೆ ಕಾರ್ಖಾನೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಬಳಿಯಲ್ಲಿ ಸುಮಾರು 4.50 ಕೋಟಿ ವೆಚ್ಚದ ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಶಾಲೆ ಮಂಜೂರಾಗಿದೆ. ಆದರೆ, ಇಲ್ಲಿನ ಶಾಲಾ ಆವರಣದಲ್ಲಿ ಆಜಾದ್ ಶಾಲೆ ನಿರ್ಮಾಣವಾಗಬಾರದೆಂದು ಕೆಲವರು ದೊಡ್ಡ ಷಡ್ಯಂತ್ರದೊಂದಿಗೆ ಏನು ಗೊತ್ತಿಲ್ಲದ ಅಮಾಯಕ ಜನರನ್ನು ಬಡಿದೆಬ್ಬಿಸಿ, ಆಜಾದ್ ಶಾಲೆ ನಿರ್ಮಾಣಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಪುರಸಭೆ ಮಾಜಿ ಸದಸ್ಯ ಸಿ.ಆರ್.ಹನುಮಂತ ಆರೋಪಿಸಿದರು.
ಪಟ್ಟಣದ ಶುಗರ್ ಫ್ಯಾಕ್ಟರಿ ಬಳಿಯ ಸರ್ಕಾರಿ ಶಾಲಾ ಆವರಣದಲ್ಲಿ ಮುಂಜೂರಾದ ಆಜಾದ್ ಶಾಲಾ ಕಟ್ಟಡ ನಿಮಾಣದ ಸ್ಥಳಕ್ಕೆ ಬುಧವಾರ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಸ್ಥಳೀಯವಾಗಿ ಕೆಲವರು ರಾಜಕೀಯ ಮತ್ತು ದೌರ್ಜನ್ಯ ಮಾಡುತ್ತಿದ್ದಾರೆ. ಇಲ್ಲಿ ಉದ್ದೇಶ ಪೂರ್ವಕವಾಗಿ ಆಜಾದ್ ಶಾಲೆ ತಡೆಯುವ ಹುನ್ನಾರ ನಡೆಸಿದ್ದಾರೆ. ಕೆಲ ವಿರೋಧ ಪಕ್ಷದ ನಾಯಕರು ಮುಗ್ದಜನರ ತಲೆಗೆ ಇಲ್ಲಸಲ್ಲದ ಸುಳ್ಳು ಮಾಹಿತಿ ತುಂಬಿ, ಹೋರಾಟಕ್ಕೆ ಇಳಿಸಿದ್ದಾರೆ. ಇಲ್ಲಿನ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಇಲ್ಲಿನ ಆಜಾದ್ ಶಾಲೆಗೆ ಸ್ಥಳೀಯ ಜನರು ವಿರೋಧ ವ್ಯಕ್ತಪಡಿಸುತ್ತಿದ್ದು, ಕೂಡಲೇ ಸ್ಥಳಕ್ಕೆ ಹೋಗಿ ಅಲ್ಲಿನ ಸಮಸ್ಯೆಯನ್ನು ಕೂಲಂಕುಶವಾಗಿ ಸಂಗ್ರಹಿಸಿ, ಮಾಹಿತಿ ನೀಡುವಂತೆ ಶಾಸಕ ಗಣೇಶ ಅವರ ನಿರ್ದೇಶನದ ಮೇರೆಗೆ ಕಂಪ್ಲಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಎಲ್ಲಾ ಸಮಾಜದ ಮುಖಂಡರು, ಕಾರ್ಯಕರ್ತರು ಆಗಮಿಸಿ, ಇಲ್ಲಿನ ಸ್ಥಿತಿಗತಿ ಬಗ್ಗೆ ವಿಚಾರಿಸಲಾಗಿ, ಇಲ್ಲಿನ ಮನೆಗಳನ್ನು ಒಡೆಯಲು ಬಂದಿದ್ದಾರೆಂದು ಸ್ಥಳೀಯ ಜನರು ಭಾವಿಸುತ್ತಿದ್ದಾರೆ. ಇದರಿಂದ ಗೊಂದಲ ಸೃಷ್ಠಿಯಾಗಿದೆ. ಇಲ್ಲಿನ ಜನರಿಗೆ ಏನು ಗೊತ್ತಿಲ್ಲ. ಆದರೆ, ಕೆಲವರು ವಿಷಬೀಜ ಬಿತ್ತಿದ್ದಾರೆ. ಇಲ್ಲಿನ ಅನುದಾನಿತ ವಿಜಯಪ್ರೌಢ ಶಾಲೆಯ ವಿಜಯಕುಮಾರ ಅವರ ಪಿತೂರಿ ದೊಡ್ಡದಿದೆ. ಈ ಘಟನೆಗೆ ಮೂಲ ಕಾರಣ ವಿಜಯಕುಮಾರ ಆಗಿದ್ದಾರೆ. ಶಾಲಾ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡುವುದಿಲ್ಲ. ಆದ್ದರಿಂದ ಇಲ್ಲಿನ ಸ್ಥಿತಿಗತಿ ಹಾಗೂ ವಿಚಾರಗಳನ್ನು ಮಾನ್ಯ ಶಾಸಕರ ಗಮನಕ್ಕೆ ತರಲಾಗುವುದು. ಮುಂದಿನ ದಿನದಲ್ಲಿ ಶಾಸಕರು ಸಭೆ ನಡೆಸಿ, ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.
ನಂತರ ಎಪಿಎಂಸಿ ಅಧ್ಯಕ್ಷ ಎನ್.ಹಬೀಬ್ ರೆಹಮಾನ್ ಮಾತನಾಡಿ, ಇಲ್ಲಿ ಮೌಲಾನಾ ಆಜಾದ್ ಶಾಲೆಯಾದರೆ, ಮುಸ್ಲಿಂ, ಬೌದ್ಧ, ಶಿಖ್, ಜೈನ್ ಸಮಾಜದ ಶೇ.75ರಷ್ಟು ಮಕ್ಕಳಿಗೆ ಉನ್ನತ ಮಟ್ಟದ ಶಿಕ್ಷಣ ದೊರಕಲಿದೆ. ಮತ್ತು ಎಸ್ಸಿ, ಎಸ್ಟಿ, ಒಬಿಸಿಯವರಿಗೆ ಶೇ.25% ರಷ್ಟು ಶಿಕ್ಷಣಕ್ಕೆ ಅವಕಾಶ ಸಿಗಲಿದೆ. ಆದರೆ, ಕೆಲವರು ಆಜಾದ್ ಶಾಲೆ ಬೇಡವೆಂದು ಜನರಲ್ಲಿ ಮಂಕುಬೂದಿ ಹಚ್ಚುತ್ತಿದ್ದಾರೆ. ಇಲ್ಲಿ ಸಣ್ಣ ಮಕ್ಕಳ ವಿದ್ಯಾಭ್ಯಾಸದಲ್ಲಿ ವಿಷಬೀಜ ಬಿತ್ತುತ್ತಿದ್ದಾರೆ. ಶಾಲಾ ಶಿಕ್ಷಕರು ರಾಜಕೀಯ ಮಾಡಬಾರದು. ಪರೀಕ್ಷಾ ದಿನದಂದು ಮಕ್ಕಳನ್ನು ಹೋರಾಟಕ್ಕೆ ಬಿಟ್ಟಿರುವ ಶಿಕ್ಷಕರ ವಿರುದ್ಧ ಸೂಕ್ತಕ್ರಮವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಮುಖಂಡರಾದ ಬಿ.ಸಿದ್ದಪ್ಪ, ಎಂ.ಉಸ್ಮಾನ್, ಲೊಡ್ಡು ಹೊನ್ನೂರವಲಿ, ಪೇಂಟರ್ ಮಸ್ತಾನ್, ಜಾಫರ್, ಆರ್.ಪಿ.ಶಶಿಕುಮಾರ, ಅಕ್ಕಿ ಜಿಲಾನ್, ಹೊನ್ನೂರಸಾಬ್, ನಬೀ, ಹೊನ್ನಳ್ಳಿ ಶ್ರೀದೇವಿ ಸೇರಿದಂತೆ ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















