ಬೆಳಗಾವಿ: ಅಥಣಿ ಪಟ್ಟಣದಲ್ಲಿ ರಾಜಕೀಯ ಚಟುವಟಿಕೆಗಳು ಜೋರಾಗಿರುವ ನಡುವೆ, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಮಹತ್ವದ ಹೇಳಿಕೆ ನೀಡಿದ್ದಾರೆ.
ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಶಾಸಕ ಲಕ್ಷ್ಮಣ ಸವದಿ ಯಾವ ಕಾರಣಕ್ಕೂ ಮತ್ತೆ ಬಿಜೆಪಿಗೆ ವಾಪಸ್ ಆಗುವುದಿಲ್ಲ. ಒಂದು ವೇಳೆ ಅವರು ಬರಲು ಯತ್ನಿಸಿದರೂ ಸಹ, ಪಕ್ಷಕ್ಕೆ ಅವರನ್ನು ಸೇರಿಸಿಕೊಳ್ಳುವುದಿಲ್ಲ ಎಂದು ಜಾರಕಿಹೊಳಿ ಸ್ಪಷ್ಟಪಡಿಸಿದರು.
ಮಂಗಳವಾರ ಬಿಜೆಪಿ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಲಕ್ಷ್ಮಣ ಸವದಿ ಅವರು ಬಿಜೆಪಿ ಬಿಟ್ಟ ಬಳಿಕ ಪಕ್ಷದ ವಿರುದ್ಧ ಮತ್ತು ಮತಕ್ಷೇತ್ರದ ಜನರ ವಿರುದ್ಧ ಮಾತನಾಡಿದ ಭಾಷಣಗಳನ್ನು ಎಲ್‌ಇಡಿ ಪರದೆಯ ಮೂಲಕ ಜನರಿಗೆ ತೋರಿಸಲಾಗುತ್ತದೆ ಎಂದು ಹೇಳಿದರು.
ಇನ್ನೂ ಮುಂದೆ, “ಸವದಿ ಬಿಜೆಪಿಗೆ ಮರಳುತ್ತಿದ್ದಾರೆ” ಎಂಬ ಸುದ್ದಿ ಕ್ಷೇತ್ರದಲ್ಲಿ ಉದ್ದೇಶಪೂರ್ವಕವಾಗಿ ಹರಡಲಾಗುತ್ತಿದೆ. ಇದು ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸುವ ತಂತ್ರವಾಗಿದ್ದು, ಇದರ ಹಿಂದೆ ಸವದಿ ಹಾಗೂ ಅವರ ಬೆಂಬಲಿಗರ ಕೈವಾಡ ಇದೆ ಎಂದು ಆರೋಪಿಸಿದರು.!
ಇಂತಹ ಪ್ರಚಾರಗಳಿಗೆ ತಲೆಬಾಗದೆ, ಬಿಜೆಪಿ ಕಾರ್ಯಕರ್ತರು ಒಗ್ಗಟ್ಟಾಗಿ ಸಂಘಟಿತರಾಗಿ ಕೆಲಸ ಮಾಡಬೇಕು ಎಂದು ಅವರು ಕರೆ ನೀಡಿದರು.
2028ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಈಗಿನಿಂದಲೇ ಪಕ್ಷದ ಬಲವರ್ಧನೆಗೆ ಮುಂದಾಗಿದ್ದೇವೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಗೆಲುವೆ ನಮ್ಮ ಏಕೈಕ ಗುರಿ ಎಂದು ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
ವರದಿ ವಿಠ್ಠಲ ಖೋಕಾಟೆ




















