ತಾಳಿಕೋಟೆ: “ಪ್ರಜೆಗಳಿಗಾಗಿ ನಿರ್ಮಾಣವಾಗುವ ಸೌಧವು ಪ್ರಜೆಗಳ ಕೈಗೆಟುಕುವಂತಿರಬೇಕೇ ಹೊರತು, ನಿರ್ಜನ ಪ್ರದೇಶದ ಪಾಲಿಗಲ್ಲ!” –
ಇದು ಕಳೆದ 46 ದಿನಗಳಿಂದ ತಾಳಿಕೋಟೆಯ ಬಸವೇಶ್ವರ ವೃತ್ತದಲ್ಲಿ ಪ್ರತಿಧ್ವನಿಸುತ್ತಿರುವ ಆಕ್ರೋಶದ ನುಡಿಗಳು.
ಮೈಲೇಶ್ವರ ಗ್ರಾಮದ ಬಳಿ ಉದ್ದೇಶಿತ ‘ಪ್ರಜಾಸೌಧ’ದ ಸ್ಥಳ ಆಯ್ಕೆಯನ್ನು ವಿರೋಧಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವು ಶನಿವಾರ 46ನೇ ದಿನಕ್ಕೆ ಕಾಲಿಟ್ಟಿದ್ದು, ಹೋರಾಟದ ಕಿಚ್ಚು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ತಾಲೂಕಿನ ಸಮಸ್ತ ಹಿರಿಯರು, ಯುವಜನತೆ ಮತ್ತು ವಿವಿಧ ಸಂಘಟನೆಗಳು ಈ ನ್ಯಾಯಯುತ ಹೋರಾಟಕ್ಕೆ ಕೈಜೋಡಿಸಿವೆ.
ನಿರ್ಜನ ಪ್ರದೇಶದಲ್ಲಿ ಸೌಧ: ಯಾರ ಲಾಭಕ್ಕಾಗಿ ಈ ಹಠ?
ಪ್ರತಿಭಟನಾಕಾರರ ಪ್ರಮುಖ ಪ್ರಶ್ನೆ ಏನೆಂದರೆ, ಪಟ್ಟಣದ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗಗಳು ಲಭ್ಯವಿದ್ದರೂ ಸಾರ್ವಜನಿಕರನ್ನು ಊರಾಚೆಯ ನಿರ್ಜನ ಪ್ರದೇಶಕ್ಕೆ ಅಲೆದಾಡಿಸುವ ಅನಿವಾರ್ಯತೆ ಏನಿದೆ?
ಹೋರಾಟ ಸಮಿತಿಯ ಪದಾಧಿಕಾರಿಗಳಾದ ರವಿ ಕಟ್ಟಿಮನಿ ಹಾಗೂ ಸಿರಸಕುಮಾರ ಹಜೇರಿ ಮಾತನಾಡಿ, “ಅಲ್ಲಿಗೆ ಹೋಗಲು ಸರಿಯಾದ ಸಾರಿಗೆ ವ್ಯವಸ್ಥೆಯಿಲ್ಲ, ಸುರಕ್ಷತೆಯೂ ಇಲ್ಲ. ವೃದ್ಧರು, ಮಹಿಳೆಯರು ಮತ್ತು ಅಂಗವಿಕಲರು ಕಿಲೋಮೀಟರ್‌ಗಟ್ಟಲೆ ದೂರದ ಕಾಡು ದಾರಿಯಲ್ಲಿ ಓಡಾಡಲು ಸಾಧ್ಯವೇ? ಇದು ಅಧಿಕಾರಿಗಳ ಮತ್ತು ಶಾಸಕರ ಹಠಮಾರಿತನಕ್ಕೆ ಸಾಕ್ಷಿ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಮೀನು ದಾನದ ಹಿಂದೆ ಅಡಗಿದೆಯೇ ಭೂ-ಮಾಫಿಯಾ?
ಸೌಧದ ನಿರ್ಮಾಣಕ್ಕಾಗಿ ಜಾಗ ದಾನ ನೀಡಿದವರ ನಡೆಯ ಬಗ್ಗೆಯೂ ಗಂಭೀರ ಅನುಮಾನಗಳು ವ್ಯಕ್ತವಾಗಿವೆ. “ದಾನ ನೀಡಿರುವುದು ದೊಡ್ಡ ಉದಾರತೆಯಲ್ಲ, ಬದಲಾಗಿ ತಮ್ಮ ಸುತ್ತಮುತ್ತಲಿನ ಭೂಮಿಯನ್ನು ವಾಣಿಜ್ಯೀಕರಣಗೊಳಿಸಿ ಕೋಟ್ಯಂತರ ರೂಪಾಯಿ ಲಾಭ ಮಾಡಿಕೊಳ್ಳುವ ಹುನ್ನಾರವಿದು. ಸಾರ್ವಜನಿಕ ಹಿತಾಸಕ್ತಿಯ ಬದಲಾಗಿ ಇಲ್ಲಿ ವೈಯಕ್ತಿಕ ಲಾಭಕ್ಕೆ ಮಣೆ ಹಾಕಲಾಗುತ್ತಿದೆ,” ಎಂಬುದು ಪ್ರತಿಭಟನಾಕಾರರ ನೇರ ಆರೋಪ.
ಸಚಿವರ ಮೌನ ಸಮ್ಮತಿಯೇ ಅಥವಾ ಅಸಹಾಯಕತೆಯೇ?
ಜಿಲ್ಲಾ ಉಸ್ತುವಾರಿ ಸಚಿವರ ನಡೆಯನ್ನು ತೀವ್ರವಾಗಿ ಖಂಡಿಸಿದ ಮುಖಂಡರು, “ಸಚಿವರು ಜಿಲ್ಲೆಯ ಜನರ ದನಿಯಾಗಬೇಕಿತ್ತು. 45 ದಿನಗಳಿಂದ ಜನರು ಬೀದಿಯಲ್ಲಿ ಕುಳಿತಿದ್ದರೂ ಸಚಿವರ ಮೌನ ಮುರಿಯದಿರುವುದು ಅವರ ಬೇಜವಾಬ್ದಾರಿತನವನ್ನು ತೋರಿಸುತ್ತದೆ,” ಎಂದು ಕಿಡಿಕಾರಿದರು.
ಈ ಸಂಧರ್ಭದಲ್ಲಿ ಹೋರಾಟ ಸಮಿತಿಯ ಅಧ್ಯಕ್ಷ ದಶರಥಸಿಂಗ್ ಮನಗೂಳಿ, ಎಸ್.ಬಿ. ಕಟ್ಟಿಮನಿ, ಆರ್ ಎಸ್ ಪಾಟೀಲ (ಕುಚಬಾಳ) ಮುತ್ತಪ್ಪ ಚಮಲಾಪುರ, , ಕಾಶೀನಾಥ ಮುರಾಳ, ಮಾಸುಮಸಾಬ ಕೆಂಭಾವಿ, ಮುರಿಗೆಪ್ಪ ಸರಶೆಟ್ಟಿ, ದತ್ತು ಹೆಬಸೂರ, ಮೈನು ಬೆಪಾರಿ, ಪರಶುರಾಮ ತಂಗಡಗಿ, ನಾಗೇಶ ಕಟ್ಟಿಮನಿ, ದೇವೇಂದ್ರ ಹಾದಿಮನಿ, ವಿಜಯಸಿಂಗ್ ಹಜೇರಿ, ರಾಮಣ್ಣ ಕಟ್ಟಮನಿ, ಸಂಜು ಬರದೇನಾಳ, ಕಳಕುಸಾ ರಂಗರೇಜ್, ಸುರೇಶ ಹಜೇರಿ, ಮಹಿಂದ್ರಕರ ಮಹೇಶ ಛಲವಾದಿ, ಪ್ರಕಾಶ್ ಹಜೇರಿ ಮುದಕಪ್ಪ ಬಡಿಗೇರ, ಸಿರಸಕುಮಾರ ಹಜೇರಿ, ಸುರೇಶ ಪುಲುಸ್, ಅಮಿತಸಿಂಗ್ ಮನಗೂಳಿ, ಮಲ್ಲು ಮೇಟಿ, ಸದ್ದಾಂ ಹುಸೇನ್ ಬೀಳಗಿ, ಸೇರಿದಂತೆ ಅನೇಕರು ಮತ್ತು ಪಟ್ಟಣದ ಗಣ್ಯರು ಉಪಸ್ಥಿತರಿದ್ದರು.
ವರದಿ ನಜೀರ್ ಚೋರಗಸ್ತಿ, ತಾಳಿಕೋಟೆ




















