
ಕಾವೇರಿ ಉಗಮಸ್ಥಾನದಿಂದ ಹರಿದು ಬರುವ ತಣ್ಣನೆಯ ಗಾಳಿ, ಕಾಫಿ ಹೂವಿನ ಘಮ, ಮಳೆಗಾಲದ ಇಬ್ಬನಿ – ಇದೇ ಕೊಡಗಿನ ಜೀವಾಳ. ಸೈನಿಕರನ್ನು ದೇಶಕ್ಕೆ ಧಾರೆಯೆರೆದ, ಅತಿಥಿಗಳನ್ನು ದೇವರೆಂದು ಕಂಡ ನಾಡು ಇದು. ಆದರೆ ಇವತ್ತು ಅದೇ ಮಂಜಿನ ಮುಸುಕಿನ ಹಿಂದೆ ಒಂದು ಆತಂಕ ಮನೆ ಮಾಡಿದೆ. ‘ಶಾಂತಿಯ ತವರು’ ಎಂಬ ನಮ್ಮ ಹೆಮ್ಮೆಯ ಪಟ್ಟಕ್ಕೆ ಯಾರೋ ಮಸಿ ಬಳಿಯಲು ಹೊರಟಿದ್ದಾರೆ.
ಇದು ಕೇವಲ ಅಭಿವೃದ್ಧಿಯ ಕಥೆಯಲ್ಲ, ನಮ್ಮ ಅಸ್ತಿತ್ವದ ಪ್ರಶ್ನೆ.
ಹಸಿರು ಹೊದ್ದ ಬೆಟ್ಟಕ್ಕೆ ಕಾಂಕ್ರೀಟ್ ಮುಳ್ಳು
ಹತ್ತು ವರ್ಷದ ಹಿಂದೆ ಕೊಡಗಿಗೆ ಬರುವ ಪ್ರವಾಸಿಗರನ್ನು ನಾವು ಮನೆಯ ಮಗನಂತೆ ಕಾಣುತ್ತಿದ್ದೆವು. ನಮ್ಮ ಹಿರಿಯರ ಸಂಸ್ಕೃತಿ ಕೊಡಗಿನ ಆತಿಥ್ಯದ ಕಿರೀಟವಾಗಿತ್ತು ಆದರೆ ಇವತ್ತು ಪ್ರತಿ ಬೆಟ್ಟದ ತುದಿ, ಪ್ರತಿ ಜಲಪಾತದ ಪಕ್ಕ, ಪ್ರತಿ ಕಾಫಿ ತೋಟದ ನಡುವೆ ಅಕ್ರಮ ರೆಸಾರ್ಟ್‌ಗಳದ್ದೇ ಕಾರುಬಾರು. CRZ, ಕಂದಾಯ, ಅರಣ್ಯ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ, ಗುಡ್ಡಗಳನ್ನು ಕೊರೆದು, ಜಲಮೂಲಗಳನ್ನು ಮುಚ್ಚಿ ಎದ್ದು ನಿಂತಿವೆ ಬೃಹತ್ ಕಾಂಕ್ರೀಟ್ ಕಟ್ಟಡಗಳು.
ಇದರ ಪರಿಣಾಮ ಏನು? ವಾರಾಂತ್ಯದ ರಾತ್ರಿಗಳು ಡಿಜೆ ಸದ್ದಿಗೆ ಮದ್ಯದ ಬಾಟಲಿಗಳಾಗಿ ಮಾರ್ಪಟ್ಟಿವೆ.
ಕಾಡು ಪ್ರಾಣಿಗಳ ಕಾರಿಡಾರ್‌ಗಳು ಬಂದ್ ಆಗಿವೆ.
ಆನೆ-ಮಾನವ ಸಂಘರ್ಷ ಹೆಚ್ಚಾಗಿದೆ. ಕಾವೇರಿ ಮತ್ತು ಲಕ್ಷ್ಮಣ ತೀರ್ಥಕ್ಕೆ ಸಂಸ್ಕರಿಸದ ಕೊಳಚೆ ನೀರು ನೇರವಾಗಿ ಸೇರುತ್ತಿದೆ. ಸ್ಥಳೀಯ ಹೆಣ್ಣುಮಕ್ಕಳು ಸಂಜೆಯ ನಂತರ ನಿರ್ಭಯವಾಗಿ ಓಡಾಡದ ಸ್ಥಿತಿ ಬಂದಿದೆ. ಪ್ರವಾಸೋದ್ಯಮ ಬೇಡ ಎನ್ನುವುದಲ್ಲ ನಮ್ಮ ವಾದ. ಆದರೆ ಅದು ‘ಸುಸ್ಥಿರ’ ಆಗಿರಬೇಕು, ‘ಸಂಸ್ಕೃತಿ ನಾಶಕ’ ಆಗಬಾರದು. ಅತಿಯಾದರೆ ಅಮೃತವೂ ವಿಷ ಎಂಬುದನ್ನು ರೆಸಾರ್ಟ್ ಲಾಬಿ ಅರ್ಥ ಮಾಡಿಕೊಳ್ಳಬೇಕು.
ನಮ್ಮ ಮುತ್ತಾತರ ಬೆವರಿನ ಭೂಮಿಗೆ ಬಿತ್ತು ಮಾಫಿಯಾದ ಕರಿ ನೆರಳು
ಕೊಡಗಿನ ಒಂದು ಎಕರೆ ಜಾಗ ಅಂದರೆ ಅದು ಕೇವಲ ಆಸ್ತಿಯಲ್ಲ, ಅದು ತಲೆಮಾರಿನ ನಮ್ಮ ಅಜ್ಜಪ್ಪ ಗಳ ಭಾವನಾತ್ಮಕ ಬಂಧ. ಆದರೆ ಇವತ್ತು ಆ ಭೂಮಿಯ ಮೇಲೆ ಭೂ ಮಾಫಿಯಾದ ಗಿಡುಗ ದೃಷ್ಟಿ ಬಿದ್ದಿದೆ. ಬಾಣೆ, ಪೈಸಾರಿ, ಜಮ್ಮಾ ಭೂಮಿಗಳ ನಕಲಿ ದಾಖಲೆ ಸೃಷ್ಟಿ, ಪಾರಂಪರಿಕ ಆಸ್ತಿಯನ್ನು ಕಡಿಮೆ ಬೆಲೆಗೆ ಕಬಳಿಕೆ, ಸರ್ಕಾರಿ ಜಾಗಕ್ಕೆ ಬೇಲಿ ಹಾಕಿ ರೆಸಾರ್ಟ್‌ಗೆ ದಾರಿ ಇದು ಈಗ ಇಲ್ಲಿ ‘ಓಪನ್ ಸೀಕ್ರೆಟ್’.
ವಿಪರ್ಯಾಸ ನೋಡಿ, ನಮ್ಮೂರಿನ ರೈತ ತನ್ನ ಪುಟ್ಟ ಕಾಫಿ ತೋಟಕ್ಕೆ ಒಂದು ಲೈನ್ ಮನೆ ಕಟ್ಟಲು ಪರವಾನಗಿಗೆ ವರ್ಷಗಟ್ಟಲೆ ಅಲೆಯಬೇಕು. ಆದರೆ ಹೊರಗಿನ ಶ್ರೀಮಂತರಿಗೆ ನೂರಾರು ಎಕರೆ ಕೂಡಲೆ ಸಿಗುತ್ತದೆ, ರಾತ್ರೋರಾತ್ರಿ ರೆಸಾರ್ಟ್ ತಲೆ ಎತ್ತುತ್ತದೆ. ಇದು ಹೇಗೆ ಸಾಧ್ಯ?
‘ವ್ಯವಸ್ಥೆ’ಯಲ್ಲಿ ಎಲ್ಲೋ ಒಂದು ಕೊಂಡಿ ಕಳಚಿದೆ, ಅಥವಾ ಕಾಸಿಗೆ ಮಾರಿಕೊಂಡಿದೆ ಎಂಬುದು ಜನಸಾಮಾನ್ಯನ ದಿನನಿತ್ಯದ ಮಾತುಗಳಾಗಿದೆ.
ಕಂದಾಯ ಇಲಾಖೆಯ ಫೈಲ್‌ಗಳು, ಗ್ರಾಮ ಪಂಚಾಯಿತಿಯ NOC ಗಳು, ಇಲಾಖೆಯ ಮೌನ , ಎಲ್ಲವೂ ಒಂದು ಅನುಮಾನದ ಹುತ್ತವನ್ನೇ ಸೃಷ್ಟಿಸಿದೆ.
ಕೊಡಗು ಎಚ್ಚೆತ್ತುಕೊಳ್ಳುವ ಕಾಲ
ಕೊಡಗಿನ ಜನ ಶಾಂತಿಪ್ರಿಯರು, ಆದರೆ ಅಸಹಾಯಕರಲ್ಲ. ಇತಿಹಾಸದಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪನಿಂದ ಹಿಡಿದು ಜನರಲ್ ತಿಮ್ಮಯ್ಯನವರ ತನಕ ದೇಶಕ್ಕೆ ಕೆಚ್ಚೆದೆಯ ಸೈನಿಕರನ್ನು ಕೊಟ್ಟ ನಾಡು ಇದು. ನಮ್ಮ ನೆಲ, ಜಲ, ನೆಲದ ಸಂಸ್ಕೃತಿ ಮೇಲೆ ಯಾರೇ ದಾಳಿ ಮಾಡಿದರೂ ನಾವು ತಿರುಗಿ ಬೀಳುತ್ತೇವೆ.
ಅಕ್ರಮ ರೆಸಾರ್ಟ್‌ಗಳ ಸರ್ವೇ ಮಾಡಿ ತಕ್ಷಣ ಬೀಗ ಹಾಕಿ
ನಿಯಮ ಮೀರಿದವರಿಗೆ ದಾಕ್ಷಿಣ್ಯ ಬೇಡ. ಕಾವೇರಿ ನದಿ ಪಾತ್ರದ 500 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆ ನಡೆಯದಂತೆ ನೋಡಿಕೊಳ್ಳಿ.
ಇಲ್ಲಿನ ಭೂಮಿ, ಪ್ರಕೃತಿ, ಸಂಸ್ಕೃತಿಗೆ ಧಕ್ಕೆ ಆಗದಂತೆ ಪ್ರವಾಸೋದ್ಯಮ ನಡೆಸಲು ಸ್ಥಳೀಯರನ್ನೊಳಗೊಂಡ ಪ್ರಾಧಿಕಾರ ರಚಿಸುವಂತಾಗಲಿ.
ಕೊಡಗು ಕೇವಲ ಒಂದು ಜಿಲ್ಲೆಯಲ್ಲ, ಅದು ಕರ್ನಾಟಕದ ಶ್ವಾಸಕೋಶ, ಕಾವೇರಿಯ ತೊಟ್ಟಿಲು. ಈ ತೊಟ್ಟಿಲಿಗೆ ಕೈ ಹಾಕಿದರೆ ಇಡೀ ರಾಜ್ಯದ ಸ್ವಾಸ್ಥ್ಯವೇ ಕೆಡುತ್ತದೆ. ನಮ್ಮ ಮುಂದಿನ ಪೀಳಿಗೆಗೆ ನಾವು ಬಿಟ್ಟು ಹೋಗಬೇಕಾಗಿರುವುದು ಕಾಂಕ್ರೀಟ್ ಕಾಡುಗಳಲ್ಲ, ಮಂಜು ಮುಸುಕಿದ ಹಸಿರು ಬೆಟ್ಟಗಳು.
ಕೊಡಗಿನ ಶಾಂತಿಯನ್ನು ಕದಡಿದರೆ, ಕೊಡಗಿನ ಸಹನೆಯೂ ಕರಗುತ್ತದೆ.
ನಮ್ಮ ನೆಲ, ನಮ್ಮ ಹಕ್ಕು, ನಮ್ಮ ಉಸಿರು …ಉಳಿಸಿ ಕೊಡಗನ್ನು ಉಳಿಯಲಿ ಕರ್ನಾಟಕ.
- ವಿಷ್ಣು ನಾಚಪ್ಪ



















