
ಶಿಗ್ಗಾಂವಿ ಮಾದರಿಯ ಪ್ರಚಾರ ಬಾಗಲಕೋಟೆಯಲ್ಲಿ ಮರುಕಳಿಸಿ ಕಾಂಗ್ರೆಸ್‌ಗೆ ಜಯದ ದಾರಿ – ಸಚಿವ ಸತೀಶ್ ಜಾರಕಿಹೊಳಿ ಸೂಕ್ಷ್ಮ ಯೋಜನೆ ಫಲಿತಾಂಶ.
ಬೆಳಗಾವಿ: ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಭರ್ಜರಿ ಜಯ ಸಾಧಿಸಿರುವುದು ಪಕ್ಷದ ಸಂಘಟನಾ ಬಲ ಮತ್ತು ಸಮನ್ವಯತಂತ್ರದ ಸ್ಪಷ್ಟ ಉದಾಹರಣೆಯಾಗಿದೆ.
ಈ ಗೆಲುವಿನ ಹಿಂದೆ ಸಚಿವ ಸತೀಶ್ ಜಾರಕಿಹೊಳಿ ಅವರ ನಿಖರ ಕಾರ್ಯತಂತ್ರ ಮತ್ತು ಅಹಿಂದ ಮತಗಳ ಸಮಗ್ರ ಒಗ್ಗೂಡಿಸುವಿಕೆಗೆ ಪ್ರಮುಖ ಪಾತ್ರವಿದೆ ಎನ್ನಲಾಗಿದೆ.
ಈ ಚುನಾವಣೆ ಕೇವಲ ರಾಜಕೀಯ ಸ್ಪರ್ಧೆಯಷ್ಟೇ ಆಗಿರದೆ, ಜಾರಕಿಹೊಳಿ ಕುಟುಂಬದ ಮುಂದಿನ ತಲೆಮಾರಿನ ರಾಜಕೀಯ ಪಥದ ಸೂಚನೆಯಾಗಿ ಪರಿಣಮಿಸಿತು. ಸಚಿವ ಸತೀಶ್ ಜಾರಕಿಹೊಳಿ ತಂತ್ರ ರೂಪಿಸಿ ಹಿರಿಯ ನಾಯಕರೊಂದಿಗೆ ಸಮಾಲೋಚನೆ ನಡೆಸುತ್ತಿದ್ದರೆ, ಅವರ ಪುತ್ರ ಹಾಗೂ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ ಯುವಜನತೆಯನ್ನು ಸೆಳೆಯುವ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದರು.
ರಾಹುಲ್ ಜಾರಕಿಹೊಳಿ ತಂಡಗಳನ್ನು ರಚಿಸಿಕೊಂಡು ಹಳ್ಳಿ-ಹಳ್ಳಿಗೆ ಭೇಟಿ ನೀಡಿ ಮನೆಮನೆಗೆ ತೆರಳಿ ಮತದಾರರ ಸಮಸ್ಯೆಗಳನ್ನು ಆಲಿಸಿದರು. ಯುವಕರನ್ನು ಸಂಘಟಿಸುವ ಮೂಲಕ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ವಾತಾವರಣ ನಿರ್ಮಿಸಲು ಶ್ರಮಿಸಿದರು. “ಪಕ್ಷ ಸಂಘಟನೆ ಮತ್ತು ಜನಸಂಪರ್ಕವೇ ಮುಖ್ಯ ಗುರಿ” ಎಂಬ ಸಂದೇಶದೊಂದಿಗೆ ಅವರು ನಿರಂತರವಾಗಿ ಕಾರ್ಯ ನಿರ್ವಹಿಸಿದರು.
ತೆರೆಯ ಹಿಂದೆ ನಡೆದ ಸಮನ್ವಯ:
ಸತೀಶ್ ಜಾರಕಿಹೊಳಿ ಗೋಕಾಕ್ ಸೇರಿದಂತೆ ಹಲವು ಕಡೆ ಆಕಾಂಕ್ಷಿಗಳೊಂದಿಗೆ ಸಂಧಾನ ಸಭೆ ನಡೆಸುತ್ತಿದ್ದರೆ, ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸುವ ಜವಾಬ್ದಾರಿ ರಾಹುಲ್ ಹೊತ್ತಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಹಿರಿಯ ನಾಯಕರ ಸಮ್ಮುಖದಲ್ಲಿಯೂ ಯುವ ಘಟಕದ ಕಾರ್ಯತಂತ್ರ ರೂಪಿಸಲಾಯಿತು.
ಸಿ. ಎಂ. ಸಿದ್ದರಾಮಯ್ಯರ ಸಕ್ರಿಯ ಪಾತ್ರ:
ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಬಾಗಲಕೋಟೆಯಲ್ಲಿ ಹಲವು ದಿನಗಳ ಕಾಲ ಪ್ರಚಾರ ನಡೆಸಿದರು. ಹಳ್ಳಿ-ಹಳ್ಳಿಗೆ ಭೇಟಿ ನೀಡಿ ರೋಡ್ ಶೋ ಹಾಗೂ ಸಭೆಗಳ ಮೂಲಕ ಮತದಾರರನ್ನು ಸೆಳೆದರು. ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ವಿಶೇಷವಾಗಿ ಮಹಿಳೆಯರು ಮತ್ತು ಹಿಂದುಳಿದ ವರ್ಗಗಳಲ್ಲಿ ವಿಶ್ವಾಸ ಮೂಡಿಸಿದವು.
ಅಹಿಂದ ಸಮೀಕರಣವೇ ಗೆಲುವಿನ ಕುಂಜಿ:
ಶಿಗ್ಗಾಂವಿ ಉಪಚುನಾವಣೆಯ ಮಾದರಿಯನ್ನು ಅನುಸರಿಸಿ ಸತೀಶ್ ಜಾರಕಿಹೊಳಿ ಅಹಿಂದ ಮತಗಳ ಒಗ್ಗೂಡಿಸುವಿಕೆಗೆ ವಿಶೇಷ ಒತ್ತು ನೀಡಿದರು. ಸುಮಾರು ಎರಡು ವಾರಗಳ ಕಾಲ ಕ್ಷೇತ್ರದಲ್ಲಿ ತಂಗಿ ಬೂತ್ ಮಟ್ಟದ ಕಾರ್ಯಕರ್ತರನ್ನು ಸಜ್ಜುಗೊಳಿಸಿ ಮತದಾರರನ್ನು ಕಾಂಗ್ರೆಸ್ ಪರವಾಗಿ ಒಲಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಸಿದ್ದರಾಮಯ್ಯ-ಜಾರಕಿಹೊಳಿ ಜೋಡಿ ಅಹಿಂದ ಮತದಾರರ ಮೇಲೆ ಪ್ರಭಾವ ಬೀರುವಲ್ಲಿ ಪರಿಣಾಮಕಾರಿ ಆಯಿತು.
ಜಾರಕಿಹೊಳಿ ಪ್ರಭಾವ ಹೆಚ್ಚಿಸಿದ ಜಯ:
ಟಿಕೆಟ್ ಘೋಷಣೆಯ ನಂತರ ಉಂಟಾದ ಅಸಮಾಧಾನವನ್ನು ಸಮರ್ಥವಾಗಿ ನಿಭಾಯಿಸಿ ಎಲ್ಲರನ್ನು ಒಗ್ಗೂಡಿಸಿದ ಜಾರಕಿಹೊಳಿ ಅವರ ರಾಜಕೀಯ ನೈಪುಣ್ಯ ಈ ಗೆಲುವಿನಲ್ಲಿ ಸ್ಪಷ್ಟವಾಗಿ ತೋರಿತು. ಈ ಜಯದಿಂದ ಅವರ ಪ್ರಭಾವ ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ಬಲಗೊಂಡಿದ್ದು, ಮುಂದಿನ ದಿನಗಳಲ್ಲಿ ಪಕ್ಷದ ನಿರ್ಧಾರಗಳಲ್ಲಿ ಹೆಚ್ಚಿನ ಪಾತ್ರ ವಹಿಸುವ ಸಾಧ್ಯತೆ ಇದೆ.
ಒಟ್ಟಿನಲ್ಲಿ, ಬಾಗಲಕೋಟೆ ಉಪಚುನಾವಣೆಯ ಫಲಿತಾಂಶ ಕಾಂಗ್ರೆಸ್‌ಗೆ ಮಾತ್ರವಲ್ಲ, ಸತೀಶ್ ಜಾರಕಿಹೊಳಿ ಅವರ ನಾಯಕತ್ವಕ್ಕೆ ಮತ್ತೊಂದು ಮೈಲಿಗಲ್ಲಾಗಿದೆ.
ವರದಿ ವಿಠ್ಠಲ ಖೋಕಾಟೆ




















