ಬಳ್ಳಾರಿ / ಕಂಪ್ಲಿ : ಸ್ಥಳೀಯ 2ನೇ ವಾರ್ಡಿನ ಲಕ್ಷ್ಮೀ ಟಾಕೀಸ್ ಬಳಿಯಲ್ಲಿರುವ ಹಜರತ್ ಸೈಯದ್ ಷಾ ಖ್ವಾಜಾ ಪಿರ್ ಮಹ್ಮದ್ ಹುಸೇನಿ(ಅಲ್ ಮಾರುಫ್) ದರ್ಗಾದಲ್ಲಿ ಖ್ವಾಜಾಮೀನ್ ಸಾಹೇಬ್ ಉರುಸ್ ಸಡಗರ ಸಂಭ್ರಮದ ಜೊತೆಗೆ ಶ್ರದ್ಧಾಭಕ್ತಿಯಿಂದ ಜರುಗಿತು.
ಇಲ್ಲಿನ ದರ್ಗಾದಲ್ಲಿ ಸೋಮವಾರ ಉರುಸ್ ವಿಜೃಂಭಣೆಯಿಂದ ಆಚರಿಸಲಾಯಿತು. ಉರುಸ್ ನಿಮಿತ್ಯ ದರ್ಗಾದಲ್ಲಿ ಹೂ, ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಭಾನುವಾರಂದು ಗಂಧ ಶ್ರದ್ಧೆಯಿಂದ ನೆರವೇರಿತು. ಶಾಸಕ ಜೆ.ಎನ್.ಗಣೇಶ್ ಉರುಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪ್ರಾರ್ಥನೆ ಸಲ್ಲಿಸಿದ ನಂತರ ಮಾತನಾಡಿ, ಉರುಸು ಧಾರ್ಮಿಕ ಕಾರ್ಯಕ್ರಮಗಳಿಂದ ನಾಡಿನಲ್ಲಿ ಮಳೆ, ಬೆಳೆಗಳು ಉತ್ತಮವಾಗಿ ಆಗಿ ಅನ್ನದಾತರು ಸೇರಿದಂತೆ ಎಲ್ಲಾ ಸಮುದಾಯಗಳಿಗೂ ಒಳ್ಳೆಯದಾಗಲಿ ಹಾಗೂ ಪ್ರತಿಯೊಬ್ಬರೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಮಾನಸಿಕ ಶಾಂತಿ, ನೆಮ್ಮದಿಯನ್ನು ಪಡೆಯಲು ಸಾಧ್ಯ ಎಂದರು.
ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಧರ್ಮಗುರು ಸೈಯದ್ ಷಾ ಖಾಜಾ ಮೈನುದ್ದೀನ್ ಖಾದ್ರಿ, ದರ್ಗಾ ಕಮಿಟಿ ಅಧ್ಯಕ್ಷ ಹುಸೇನ್ ಬಾಷಾ, ಗೌರವಾಧ್ಯಕ್ಷ ನ್ಯಾಮತ್ ಸಾಬ್, ಅಂಜುಮನ್ ಕಮಿಟಿ ಅಧ್ಯಕ್ಷ ಅಬ್ದುಲ್ ಕರಿಮ್ ಲಡ್ಡು, ಕಾರ್ಯದರ್ಶಿ ಯು.ಜಹಿರುದ್ಧೀನ್, ಖಜಾಂಚಿ ಎ.ಮೌಲಾಹುಸೇನ್, ಸದಸ್ಯರಾದ ಮಸ್ತಾನ್ ವಲಿ, ಮುಖಂಡರಾದ ಹೊಸಕೋಟೆ ಜಗದೀಶ, ವಾಸೀಂ, ಅಕ್ಕಿ ಜಿಲಾನ್ ಸೇರಿದಂತೆ ಸಮಾಜದ ಭಕ್ತರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















