ಬೆಂಗಳೂರು: ಅಥಣಿ ಮತಕ್ಷೇತ್ರದ ಪೂರ್ವ ಭಾಗದ ರೈತರ ಬಹುಕಾಲದ ನಿರೀಕ್ಷೆಯಾಗಿರುವ ‘ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ’ಗೆ ಹೊಸ ಚೈತನ್ಯ ನೀಡುವ ಉದ್ದೇಶದಿಂದ ಬೆಂಗಳೂರಿನ ಕರ್ನಾಟಕ ನೀರಾವರಿ ನಿಗಮ ನಿಯಮಿತ (KNNL) ಕಚೇರಿಯಲ್ಲಿ ಮಹತ್ವದ ಸಭೆ ಜರುಗಿತು.
ಅಥಣಿ ಶಾಸಕ ಲಕ್ಷ್ಮಣ್ ಸವದಿ ಅವರು ಸಭೆಯಲ್ಲಿ ಅಧಿಕಾರಿಗಳೊಂದಿಗೆ ಯೋಜನೆಯ ಪ್ರಗತಿ, ಸದ್ಯದ ಸ್ಥಿತಿ ಹಾಗೂ ಮುಂದಿನ ಹಂತಗಳ ಕುರಿತು ಸಮಗ್ರವಾಗಿ ಚರ್ಚಿಸಿದರು.
ಕಾಮಗಾರಿಯಲ್ಲಿ ಯಾವುದೇ ತಡವಾಗದಂತೆ, ಗುಣಮಟ್ಟ ಕಾಪಾಡಿಕೊಂಡು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.
ಈ ಯೋಜನೆ ಪೂರ್ಣಗೊಂಡರೆ ಕ್ಷೇತ್ರದ ಪೂರ್ವ ಭಾಗದ ಸಾವಿರಾರು ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಇದರಿಂದ ರೈತರ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ಸಿಗುವುದರ ಜೊತೆಗೆ ಆರ್ಥಿಕ ಸ್ಥಿತಿ ಸುಧಾರಿಸುವ ನಿರೀಕ್ಷೆಯಿದೆ. ಯೋಜನೆಗೆ ಅಗತ್ಯವಿರುವ ಎಲ್ಲಾ ತಾಂತ್ರಿಕ ಹಾಗೂ ಆಡಳಿತಾತ್ಮಕ ಬೆಂಬಲವನ್ನು ನೀಡಲು ತಾವು ಸಿದ್ಧರಾಗಿದ್ದೇವೆ ಎಂದು ಶಾಸಕರು ತಿಳಿಸಿದ್ದಾರೆ.
ಸಭೆಯಲ್ಲಿ ನೀರಾವರಿ ನಿಗಮದ ಹಿರಿಯ ಅಧಿಕಾರಿಗಳು ಹಾಗೂ ತಾಂತ್ರಿಕ ಸಿಬ್ಬಂದಿ ಭಾಗವಹಿಸಿದ್ದರು.
ವರದಿ ವಿಠ್ಠಲ ಖೋಕಾಟೆ




















