ಗಂಗಾವತಿ : ತಾಲೂಕಿನ ಹಣವಾಳ ಗ್ರಾಮದಲ್ಲಿ ಶ್ರೀ ಹಡಪದ ಅಪ್ಪಣ್ಣ ಸಮಾಜದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಸೋಮವಾರ ಶಂಕುಸ್ಥಾಪನೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ಕನಕಗಿರಿ ಕ್ಷೇತ್ರದ ಶಾಸಕ ಶಿವರಾಜ್ ಎಸ್. ತಂಗಡಗಿ ಅವರು ಸಮುದಾಯ ಭವನದ ಶಂಕುಸ್ಥಾಪನೆ ನೆರವೇರಿಸಿ, ಗಿಡಕ್ಕೆ ನೀರು ಹಾಕುವ ಮೂಲಕ ಕಾಮಗಾರಿಗೆ ಅಧಿಕೃತ ಚಾಲನೆ ನೀಡಿದರು.
ನಂತರ ಮಾತನಾಡಿ, ಸಮುದಾಯ ಭವನವು ಸಮಾಜದ ಸಂಘಟನೆ ಮತ್ತು ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಲಿದ್ದು, ವಿವಿಧ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ಕೇಂದ್ರವಾಗಲಿದೆ. ಸಮಾಜದ ಜನರ ಬಹುಕಾಲದ ಬೇಡಿಕೆ ಈಡೇರಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಅಮರೇಶ್ ಗೋನಾಳ, ತಾಲ್ಲೂಕು ಪಂಚಾಯಿತಿ ಸದಸ್ಯ ಸಿದ್ದನಗೌಡ ಬೆಳಗೌಡ್ರು, ಕನಕಗಿರಿ ಪಟ್ಟಣ ಪಂಚಾಯಿತಿ ಸದಸ್ಯ ಹನುಮೇಶ, ಹಣವಾಳ ಅಧ್ಯಕ್ಷ ಅನ್ನಪ್ಪ, ಗಂಗಾವತಿ ತಾಲೂಕು ಘಟಕದ ಅಧ್ಯಕ್ಷ ನಿರುಪಾದಿ ಹಾಗೂ ಕನಕಗಿರಿ ಯುವ ಘಟಕದ ಅಧ್ಯಕ್ಷ ಬಸವರಾಜ್ ಶರಣಪ್ಪ ದೇವರಮನೆ ಜಮಾಪುರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಹಣವಾಳ, ಕನಕಗಿರಿ, ಗಂಗಾವತಿ, ಕಾರಟಗಿ, ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಹಡಪದ ಸಮಾಜದ ಮುಖಂಡರು, ವಿವಿಧ ಸಮಾಜಗಳ ಹಿರಿಯರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿದರು. ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆದ ಶಂಕುಸ್ಥಾಪನೆ ಕಾರ್ಯಕ್ರಮವು ಸಂಭ್ರಮದ ವಾತಾವರಣದಲ್ಲಿ ನಡೆಯಿತು. ಸಮಾಜದ ಮುಖಂಡರು ಹಾಗೂ ಗ್ರಾಮಸ್ಥರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ, ಸಮುದಾಯ ಭವನ ನಿರ್ಮಾಣ ಕಾರ್ಯ ಶೀಘ್ರ ಪೂರ್ಣಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು.
- ಕರುನಾಡ ಕಂದ ಸುದ್ದಿ




















