ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಆ ಒಂದು ಕ್ಷಣ…

ನಮ್ಮ ಇಡೀ ಜೀವನದ ದಿಕ್ಕನ್ನೇ ಬದಲಾಯಿಸಲು ವರ್ಷಗಳು ಬೇಕಾಗುವುದಿಲ್ಲ ಕೇವಲ ಆ ಒಂದು ಕ್ಷಣ ಸಾಕು. ಮಾನವನ ಇತಿಹಾಸ ಸಾಧನೆ ಮತ್ತು ವೈಯಕ್ತಿಕ ಬೆಳವಣಿಗೆಯನ್ನು ಗಮನಿಸಿದರೆ ಜಗತ್ತನ್ನು ಬದಲಾಯಿಸಿದ ದೊಡ್ಡ ನಿರ್ಧಾರಗಳು ಮತ್ತು ಆವಿಷ್ಕಾರಗಳು ಹುಟ್ಟಿಕೊಂಡಿದ್ದು ಯಾವುದೋ ಒಂದು ವಿಶಿಷ್ಟ ಕ್ಷಣದಲ್ಲಿಯೇ ಆಗಿರುತ್ತದೆ. ಆ ಒಂದು ಕ್ಷಣವೇ ಜೀವನದ ಅತ್ಯಂತ ಶಕ್ತಿಶಾಲಿ ತಿರುವು. ಇಂದೇ ಈಗಲೇ ಈ ಕ್ಷಣದಲ್ಲೇ ನಿಮ್ಮ ಗುರಿಯತ್ತ ಮೊದಲ ಹೆಜ್ಜೆಯನ್ನು ಇಡಿ. ಏಕೆಂದರೆ ನಿಮ್ಮ ಜೀವನವನ್ನು ಬದಲಾಯಿಸುವ ಆ ಒಂದು ಅಪೂರ್ವ ಕ್ಷಣ ಬೇರೇನೂ ಅಲ್ಲ, ಅದು ನೀವು ಈಗ ಬದುಕುತ್ತಿರುವ ಈ ಕ್ಷಣವೇ ಆಗಿರಬಹುದು.

ಜಗತ್ತಿನ ಮಹಾನ್ ಸಾಧಕರ ಜೀವನವನ್ನು ನೋಡಿದರೆ ಆ ಒಂದು ಕ್ಷಣದ ಮಹತ್ವ ತಿಳಿಯುತ್ತದೆ. ಸೇಬಿನ ಹಣ್ಣು ಕೆಳಗೆ ಬಿದ್ದ ಆ ಒಂದು ಕ್ಷಣ ಸರ್ ಐಸಾಕ್ ನ್ಯೂಟನ್ ಅವರಿಗೆ ಗುರುತ್ವಾಕರ್ಷಣೆಯ ನಿಯಮವನ್ನು ಕಂಡುಹಿಡಿಯಲು ಪ್ರೇರಣೆ ನೀಡಿತು. ರೈಲಿನಿಂದ ಹೊರ ಹಾಕಲ್ಪಟ್ಟ ಆ ಒಂದು ಕಹಿ ಕ್ಷಣ, ಮೋಹನದಾಸ್ ಕರಮಚಂದ್ ಗಾಂಧೀಜಿಯವರನ್ನು ಮಹಾತ್ಮನನ್ನಾಗಿ ಪರಿವರ್ತಿಸಲು ನಾಂದಿ ಹಾಡಿತು. ಗೌತಮ ಬುದ್ಧನಿಗೆ ಬೋಧಿ ವೃಕ್ಷದ ಕೆಳಗೆ ಜ್ಞಾನೋದಯವಾದದ್ದು ಒಂದು ನಿರ್ದಿಷ್ಟ ಕ್ಷಣದಲ್ಲಿ. ಇವೆಲ್ಲವೂ ಕೇವಲ ಕಾಲದ ತುಣುಕುಗಳಲ್ಲ, ಬದಲಿಗೆ ಇತಿಹಾಸದ ಹಾದಿಯನ್ನೇ ಬದಲಿಸಿದ ಮಹಾನ್ ಕ್ಷಣಗಳು.

ಕಾಲ ಯಾರಿಗಾಗಿಯೂ ಕಾಯುವುದಿಲ್ಲ ಆದರೆ ಕಾಲದ ಓಟದಲ್ಲಿ ಬರುವ ಆ ಒಂದು ಕ್ಷಣ ನಮಗಾಗಿ ಕಾಯುತ್ತಿರುತ್ತದೆ. ಆ ಕ್ಷಣವನ್ನು ಸದುಪಯೋಗ ಪಡಿಸಿಕೊಂಡವರು ಇತಿಹಾಸ ಸೃಷ್ಟಿಸುತ್ತಾರೆ, ನಿರ್ಲಕ್ಷಿಸಿದವರು ಕೇವಲ ವೀಕ್ಷಕರಾಗಿ ಉಳಿಯುತ್ತಾರೆ. ಹಾಗಾಗಿ ಪ್ರತಿಯೊಂದು ಕ್ಷಣವನ್ನೂ ಪ್ರೀತಿಯಿಂದ ಜಾಗರೂಕತೆಯಿಂದ ಬದುಕಿ. ನಿಮ್ಮ ಜೀವನದ ದಿಕ್ಕನ್ನು ಬದಲಾಯಿಸುವ ನಿಮ್ಮ ಕನಸುಗಳಿಗೆ ರೆಕ್ಕೆ ಕಟ್ಟುವ ಆ ಒಂದು ಸುಂದರ ಕ್ಷಣ ಇದೇ ಆಗಿರಬಹುದು.

ತಾಯಿಯ ಗರ್ಭದಿಂದ ಮಗು ಈ ಭೂಮಿಗೆ ಬರುವ ಆ ಒಂದು ಕ್ಷಣ ಮಾನವ ಜೀವನದ ಅತ್ಯಂತ ಅದ್ಭುತ ಮತ್ತು ಭಾವನಾತ್ಮಕ ಕ್ಷಣವಾಗಿದೆ. ಒಂಬತ್ತು ತಿಂಗಳುಗಳ ಕಾಲ ತಾಯಿಯ ಉಸಿರನ್ನೇ ತನ್ನ ಉಸಿರಾಗಿಸಿಕೊಂಡಿದ್ದ ಜೀವವೊಂದು ಪ್ರಕೃತಿಯ ಮಡಿಲಿಗೆ ಹೆಜ್ಜೆ ಇಡುವ ಸಮಯವದು. ಆ ಕ್ಷಣದಲ್ಲಿ ಇಡೀ ಜಗತ್ತೇ ಒಂದು ಅಪೂರ್ವ ದೃಶ್ಯಕ್ಕೆ ಸಾಕ್ಷಿಯಾಗುತ್ತದೆ. ಮಗು ಮೊದಲ ಬಾರಿ ಉಸಿರಾಡಿದಾಗ ಜೋರಾಗಿ ಅಳುತ್ತದೆ. ಆ ಅಳು ಮಗುವಿನ ಆರೋಗ್ಯದ ಸಂಕೇತ. ಕತ್ತಲ ಕೋಣೆಯಿಂದ ಹೊರಬಂದ ಮಗುವಿಗೆ ಈ ಹೊಸ ಪ್ರಪಂಚದ ಗಾಳಿ, ಬೆಳಕು ಅಪರಿಚಿತವಾಗಿ ಕಾಡಬಹುದು. ಆದರೆ ಮಗುವಿನ ಆ ಅಳುವಿನ ಧ್ವನಿ ಕೇಳುತ್ತಿದ್ದಂತೆ, ಅಲ್ಲಿಯವರೆಗೆ ಹೆರಿಗೆಯ ತೀವ್ರ ಹೆರಿಗೆ ನೋವನ್ನು ಅನುಭವಿಸುತ್ತಿದ್ದ ತಾಯಿಯ ಮುಖದಲ್ಲಿ ಕೋಟಿ ದೀಪ ಬೆಳಗಿದಂತಹ ಸಂತೋಷ ಮೂಡುತ್ತದೆ. ಅವಳ ಕಣ್ಣೀರು ಆನಂದ ಭಾಷ್ಪವಾಗಿ ಬದಲಾಗುತ್ತದೆ.

1947 ರ ಆಗಸ್ಟ್ 14 ರ ಮಧ್ಯರಾತ್ರಿ 12 ಗಂಟೆಗೆ ಭಾರತವು ಬ್ರಿಟಿಷರ ಕಪಿಮುಷ್ಠಿಯಿಂದ ಮುಕ್ತಿ ಪಡೆದು ಸ್ವತಂತ್ರ ದೇಶವಾಗಿ ಉದಯಿಸಿತು. ಇಡೀ ದೇಶವೇ ಕಾತರದಿಂದ ಕಾಯುತ್ತಿದ್ದ ಆ ಐತಿಹಾಸಿಕ ಕ್ಷಣವು ಭಾರತೀಯರ ಪಾಲಿಗೆ ಹೊಸ ಯುಗದ ಆರಂಭವಾಗಿತ್ತು. ನೂರಾರು ವರ್ಷಗಳ ಗುಲಾಮಗಿರಿ ಅಸಂಖ್ಯಾತ ದೇಶಭಕ್ತರ ತ್ಯಾಗ ಮತ್ತು ಬಲಿದಾನಗಳ ಪ್ರತಿಫಲ ಆ ಒಂದು ಕ್ಷಣದಲ್ಲಿ ಸಾಕಾರಗೊಂಡಿತು. ಕತ್ತಲೆಯ ಕಾರ್ಮೋಡ ಸರಿದು, ಮುಂಜಾನೆಯ ಹೊಸ ಬೆಳಕು ಮೂಡಿದ ಆ ಅಮೂಲ್ಯ ಕ್ಷಣ ಇಂದಿಗೂ ನಮ್ಮ ಇತಿಹಾಸದ ಅತ್ಯಂತ ಪ್ರಮುಖ ಪುಟವಾಗಿದೆ.

ಭಾರತದಲ್ಲಿ ಮೊದಲ ಕರೋನ ವೈರಸ್ ಪ್ರಕರಣ ಪತ್ತೆಯಾದ ಆ ಒಂದು ಕ್ಷಣ ದೇಶದ ಇತಿಹಾಸದಲ್ಲೇ ಅತ್ಯಂತ ಆಘಾತಕಾರಿ ಮತ್ತು ಮರೆಯಲಾಗದ ಕ್ಷಣವಾಗಿದೆ. ಆ ಒಂದು ಕ್ಷಣದ ಸುದ್ದಿ ಬಿತ್ತರವಾಗುತ್ತಿದ್ದಂತೆ ಇಡೀ ದೇಶವೇ ಒಂದು ನಿಮಿಷ ಸ್ತಬ್ದವಾಯಿತು. ಟಿವಿ ಸುದ್ದಿಗಳಲ್ಲಿ ಚೀನಾ ಅಥವಾ ಇತರ ದೇಶಗಳಲ್ಲಿ ಹರಡುತ್ತಿದೆ ಎಂದು ಕೇಳುತ್ತಿದ್ದ ಮಹಾಮಾರಿ ನಮ್ಮ ಹೊಸ್ತಿಲಿಗೆ ಬಂದು ನಿಂತಿದೆ ಎಂಬ ಸತ್ಯ ಜೀರ್ಣಿಸಿಕೊಳ್ಳಲು ಅಸಾಧ್ಯವಾಗಿತ್ತು. ಆ ಕ್ಷಣ ದೇಶದ ಜನರ ಮನಸ್ಸಿನಲ್ಲಿ ಅಪರಿಚಿತ ಭಯ, ಆತಂಕ ಮತ್ತು ಆಶ್ವರ್ಯವನ್ನು ಒಟ್ಟಿಗೆ ಮೂಡಿಸಿತು. ಭವಿಷ್ಯದಲ್ಲಿ ಏನಾಗಬಹುದು ಎಂಬ ಕಲ್ಪನೆಯೂ ಯಾರಿಗೂ ಇರಲಿಲ್ಲ. ಕೋಟ್ಯಂತರ ಜನರ ಬದುಕು ಆರ್ಥಿಕತೆ ಮತ್ತು ದೈನಂದಿನ ದಿನಚರಿಯನ್ನು ಸಂಪೂರ್ಣವಾಗಿ ಬದಲಾಯಿಸಿದ ಆ ಕ್ಷಣ ಭಾರತೀಯರ ನೆನಪಿನಲ್ಲಿ ಎಂದಿಗೂ ಮಾಸದ ಕಹಿ ನೆನಪಾಗಿ ಉಳಿದಿದೆ. ಅದು ಕೇವಲ ಒಂದು ವೈರಸ್ ಬಂದ ಕ್ಷಣವಾಗಿರಲಿಲ್ಲ, ಬದಲಿಗೆ ಇಡೀ ದೇಶದ ದಿಕ್ಕನ್ನೇ ಬದಲಿಸಿದ ಮಹಾವಿಪತ್ತಿನ ಆರಂಭದ ಕ್ಷಣವಾಗಿತ್ತು.

ಮುಂದೆ ಸಾಯುವ ಆ ಒಂದು ಕ್ಷಣ ನಮಗೆ ಜೀವನದ ನಿಜವಾದ ಮೌಲ್ಯವನ್ನು ನೆನಪಿಸುತ್ತದೆ. ನಾವು ಕೊನೆಗೆ ಕೊಂಡೊಯ್ಯುವುದು ಕೇವಲ ನೆನಪುಗಳು ಮತ್ತು ನಾವು ಹಂಚಿದ ಪ್ರೀತಿಯನ್ನು ಮಾತ್ರ. ಆ ಕೊನೆಯ ಕ್ಷಣದಲ್ಲಿ ಪಶ್ಚಾತ್ತಾಪ ಪಡುವುದಕ್ಕಿಂತ ಬದುಕಿರುವಾಗಲೇ ಎಲ್ಲರೊಂದಿಗೆ ಪ್ರೀತಿಯಿಂದ ಬಾಳುವುದು ಸಾರ್ಥಕತೆಯ ದಾರಿಯಾಗಿದೆ.

ಕನ್ನಡ ಚಿತ್ರರಂಗದ ಧ್ರುವತಾರೆ ಕೋಟ್ಯಾಂತರ ಜನರ ಅಭಿಮಾನಿಗಳ ಆರಾಧ್ಯ ದೈವ ಅಪ್ಪು ಡಾ.ಪುನೀತ್ ರಾಜ್‌ಕುಮಾರ್ ಅವರು ಮರಣ ಹೊಂದಿದ ಆ ಒಂದು ಕ್ಷಣ ಇಡೀ ಕರ್ನಾಟಕವನ್ನೇ ಕತ್ತಲಿಗೆ ತಳ್ಳಿತು. 2021 ರ ಅಕ್ಟೋಬರ್ 29 ರ ಆ ದಿನ ಇಂದಿಗೂ ಯಾರೂ ಮರೆಯಲಾಗದ ಕರಾಳ ದಿನ. ಯಾವಾಗಲೂ ನಗುತ್ತಾ ಪ್ರೀತಿ ಹಂಚುತ್ತಿದ್ದ ಸದೃಢ ಕಾಯದ ನಟನಿಗೆ ಇದ್ದಕ್ಕಿದ್ದಂತೆ ಹೃದಯಾಘಾತವಾಯಿತು ಎಂಬ ಸುದ್ದಿ ಬಿತ್ತರವಾಗುತ್ತಿದ್ದಂತೆ ಇಡೀ ರಾಜ್ಯವೇ ಸ್ತಬ್ಧವಾಯಿತು. ಆಸ್ಪತ್ರೆಯ ಮುಂದೆ ಜಮಾಯಿಸಿದ್ದ ಲಕ್ಷಾಂತರ ಅಭಿಮಾನಿಗಳ ಕಣ್ಣುಗಳಲ್ಲಿ ಆತಂಕ ಮನೆಮಾಡಿತ್ತು. ಅಪ್ಪುಗೆ ಏನೂ ಆಗುವುದಿಲ್ಲ ಅವರು ಮತ್ತೆ ಎದ್ದು ಬರುತ್ತಾರೆ ಎಂಬ ಆಶಾಭಾವನೆ ಎಲ್ಲರಲ್ಲೂ ಇತ್ತು. ಆದರೆ, ವೈದ್ಯರು ಪುನೀತ್ ಇನ್ನಿಲ್ಲ ಎಂದು ಅಧಿಕೃತವಾಗಿ ಘೋಷಿಸಿದ ಆ ಒಂದು ಕ್ಷಣ, ಕೋಟ್ಯಂತರ ಜನರ ಹೃದಯ ಒಡೆದು ಚೂರಾಯಿತು. ಆ ಸುದ್ದಿ ಕೇಳಿ ಇಡೀ ಕರ್ನಾಟಕವೇ ಅನಾಥ ಪ್ರಜ್ಞೆಯಿಂದ ತತ್ತರಿಸಿತು. ಅಪ್ಪು ದೈಹಿಕವಾಗಿ ನಮ್ಮನ್ನು ಅಗಲಿದ ಆ ಕ್ಷಣ ಇತಿಹಾಸದಲ್ಲಿ ಅತ್ಯಂತ ದುಃಖದ ಕ್ಷಣವಾಗಿ ದಾಖಲಾಯಿತು. ಆದರೆ ಅವರು ಬಿಟ್ಟುಹೋದ ಪ್ರೀತಿ, ಆದರ್ಶಗಳು ಇಂದಿಗೂ ಜನರ ಹೃದಯದಲ್ಲಿ ಅವರನ್ನು ಅಮರವಾಗಿಸಿವೆ.

ಆ ಒಂದು ಕ್ಷಣ ಇಡೀ ಕ್ರೀಡಾಂಗಣದಲ್ಲಿ ಭಾರತದ ಜಯಘೋಷ ಮೊಳಗಿತು. ಅಭಿನವ್ ಬಿಂದ್ರಾ ಭಾರತದ ಒಲಿಂಪಿಕ್ಸ್ ಇತಿಹಾಸದಲ್ಲೇ ವೈಯಕ್ತಿಕ ವಿಭಾಗದಲ್ಲಿ ಮೊದಲ ಬಾರಿಗೆ ಬಂಗಾರದ ಪದಕ ಗೆದ್ದು ಇತಿಹಾಸ ಸೃಷ್ಟಿಸಿದರು. ಕ್ರೀಡಾಂಗಣದಲ್ಲಿ ಭಾರತದ ರಾಷ್ಟ್ರಗೀತೆ ಜನ ಗಣ ಮನ ಮೊಳಗಿದಾಗ ಪ್ರತಿಯೊಬ್ಬ ಭಾರತೀಯನ ಕಣ್ಣಲ್ಲೂ ಹೆಮ್ಮೆಯ ಆನಂದಭಾಷ್ಪ ಹರಿಯಿತು. ಆ ಒಂದು ಐತಿಹಾಸಿಕ ಕ್ಷಣ ಭಾರತೀಯ ಕ್ರೀಡಾ ಜಗತ್ತಿನ ದಿಕ್ಕನ್ನೇ ಬದಲಾಯಿಸಿತು ಮತ್ತು ಕೋಟ್ಯಂತರ ಯುವಕರಿಗೆ ಒಲಿಂಪಿಕ್ಸ್‌ನಲ್ಲಿ ಸಾಧನೆ ಮಾಡಲು ಇಂದಿಗೂ ದಾರಿದೀಪವಾಗಿದೆ.

ಕೊನೆಯದಾಗಿ ಹೇಳಬೇಕೆಂದರೆ ಕಳೆದುಹೋದ ಸಮಯ ಮತ್ತೆ ಮರಳಿ ಬಾರದು. ಆದ್ದರಿಂದ ನಮ್ಮ ಕೈಯಲ್ಲಿರುವ ಪ್ರತಿಯೊಂದು ಕ್ಷಣವನ್ನೂ ಪ್ರೀತಿಸಬೇಕು. ಆ ಒಂದು ಧನಾತ್ಮಕ ಕ್ಷಣಕ್ಕಾಗಿ ಕಾಯುತ್ತಾ, ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವುದೇ ನಿಜವಾದ ಜೀವನ. ಪ್ರತಿಯೊಬ್ಬರ ಜೀವನದಲ್ಲಿ ಒಳ್ಳೆಯ ಕ್ಷಣ ಹಾಗೂ ಕೆಟ್ಟ ಕ್ಷಣಗಳು ಬಂದೇ ಬರುತ್ತವೆ. ಕೆಟ್ಟ ಕ್ಷಣಗಳನ್ನು ಮರೆತು, ಒಳ್ಳೆಯ ಕ್ಷಣಗಳನ್ನು ಸದಾ ಸ್ಮರಿಸೋಣ.

  • ಶ್ರೀ ಮುತ್ತು ಯ. ವಡ್ಡರ
    ಶಿಕ್ಷಕರು, ಹಿರೇಮಾಗಿ
    ಬಾಗಲಕೋಟೆ 9845568484
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!