ಬಳ್ಳಾರಿ / ಕಂಪ್ಲಿ: ಪಟ್ಟಣದಲ್ಲಿ ಬೀದಿ ದೀಪ, ಶೌಚಾಗೃಹ, ನೀರು, ರಸ್ತೆ ಸೇರಿದಂತೆ ನಾನಾ ಮೂಲಭೂತ ಸಮಸ್ಯೆಗಳು ತಾಂಡವವಾಡುತ್ತಿದ್ದು, ಇದರಿಂದ ಜನತೆಗೆ ಸಾಕಷ್ಟು ಸಮಸ್ಯೆಯಾಗುತ್ತಿದ್ದು, ಕೂಡಲೇ ಈ ಸೌಲಭ್ಯಗಳನ್ನು ಒದಗಿಸಿಕೊಡಬೇಕೆಂದು ಆಗ್ರಹಿಸಿ, ದಲಿತ ಸಂಘರ್ಷ ಸಮಿತಿ(ಬುದ್ಧ, ಬಸವ, ಅಂಬೇಡ್ಕರ್ ವಾದ)ಯ ಜಿಲ್ಲಾಧ್ಯಕ್ಷ ಕರಡಿವಲಿಸಾಬ್ ಸಮ್ಮುಖದಲ್ಲಿ ತಾಲೂಕು ಅಧ್ಯಕ್ಷ ಸಿ.ಬಸವರಾಜ ನೇತೃತ್ವದಲ್ಲಿ ಪದಾಧಿಕಾರಿಗಳು, ನಿವಾಸಿಗಳು ಪಟ್ಟಣದ ಪುರಸಭೆಯಲ್ಲಿ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ ಇವರಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಿದರು.
ನಂತರ ಜಿಲ್ಲಾ ಉಪಾಧ್ಯಕ್ಷ ಕರಡಿ ವಲಿಸಾಬ್ ಮಾತನಾಡಿ, ಇಲ್ಲಿನ 22ನೇ ವಾರ್ಡಿನ ಸ್ಲಂ ವಾರ್ಡಿನಲ್ಲಿರುವ ಶೌಚಗೃಹಗಳು ಸರಿಯಾಗಿ ನಿರ್ವಹಣೆ ಇಲ್ಲದೇ ಇರುವುದರಿಂದ ಮಹಿಳೆಯರು ಶೌಚಾಲಯದ ಸಮಸ್ಯೆ ಎದುರಿಸುತ್ತಿದ್ದಾರೆ. ವಾರ್ಡಿನಲ್ಲಿ ಸಮರ್ಪಕವಾಗಿ ವಿದ್ಯುತ್ ದೀಪಗಳ ಬೆಳಕು ಚೆಲ್ಲದ ಪರಿಣಾಮ ಕತ್ತಲು ಆವರಿಸಿದೆ. ಇದರಿಂದ ವಿಷಜಂತುಗಳ ಮಧ್ಯದಲ್ಲಿ ನಿವಾಸಿಗಳು ವಾಸಿವಂತಾಗಿದೆ. ಹಳೇ ಬಸ್ ನಿಲ್ದಾಣದ ಹೊಸಪೇಟೆ ಬಸ್ ನಿಲ್ಲಿಸುವ ಮತ್ತು ಕುರುಗೋಡು ಬಸ್ ನಿಲ್ಲಿಸುವ ಸ್ಥಳದಲ್ಲಿ ತಾತ್ಕಾಲಿಕವಾಗಿ ಬಸ್ ತಂಗುದಾಣ ನಿರ್ಮಿಸಿಕೊಡುವಂತೆ ಅನೇಕ ಬಾರಿ ಮನವಿ ಮಾಡಿದರೂ ಏನು ಪ್ರಯೋಜನೆ ಇಲ್ಲದಂತಾಗಿದೆ. ಇಲ್ಲಿನ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಪ್ರಯಾಣಿಕರು ಮತ್ತು ನಿವಾಸಿಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಇಲ್ಲಿನ ಪ್ರಮುಖ ಬೀದಿಗಳಲ್ಲಿ ಕೆಲವು ಬೀದಿ ದೀಪಗಳು ಉರಿಯುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳು ಅಧಿಕಾರಿಗಳ ಕಣ್ಣಿಗೆ ತಾಗುತ್ತಿದ್ದರೂ ಗಮನ ಹರಿಸುತ್ತಿಲ್ಲ. ಆದ್ದರಿಂದ ಕೂಡಲೇ ಮುಖ್ಯಾಧಿಕಾರಿಗಳು ಎಚ್ಚರವಹಿಸಿ, ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದರು.
ನಂತರ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ ಮಾತನಾಡಿ, ಇಲ್ಲಿನ ವಾರ್ಡ್ ಸೇರಿದಂತೆ ಇತರೆ ಸ್ಥಳದಲ್ಲಿರುವ ಸಮಸ್ಯೆಗಳನ್ನು ಈಡೇರಿಸುವಂತೆ ಮನವಿ ಮಾಡಿದ್ದು, ಕೂಡಲೇ ಮನವಿಗೆ ಸ್ಪಂದಿಸಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ತಾಲೂಕು ಗೌರವಾಧ್ಯಕ್ಷ ಚಂದ್ರಶೇಖರ, ಉಪಾಧ್ಯಕ್ಷ ಮೆಟ್ರಿ ಸೋಮಪ್ಪ, ಖಜಾಂಚಿ ಗಂಗಾಧರ, ತಾಲೂಕು ಯುವಕ ಘಟಕ ಅಧ್ಯಕ್ಷ ಕೆ.ಜಾಫರ್ ಮುಖಂಡರಾದ ಸಣ್ಣ ಹುಲುಗಪ್ಪ, ಅಂಜಿನಪ್ಪ, ರುದ್ರಪ್ಪ, ರಫೀಕ್, ಪಕ್ಕೀರಪ್ಪ, ಮಾರೆಪ್ಪ, ಅನ್ವರ್‌ಸಾಬ್, ಕೆ.ಲಕ್ಷ್ಮಣ, ಬಾಲಪ್ಪ, ಯಲ್ಲಪ್ಪ ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















