ಕೊಡಗು – ಮೈಸೂರು ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವರಾದ ಶ್ರೀ ಭೂಪೇಂದ್ರ ಯಾದವ್ ಅವರನ್ನು ಭೇಟಿಮಾಡಿ ಕೊಡಗಿನಲ್ಲಿ ಹೆಚ್ಚುತ್ತಿರುವ ಆನೆ ಮತ್ತು ಮಾನವ ಸಂಘರ್ಷ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಮತ್ತು ಮೈಸೂರಿನ ತಿಪ್ಪಯ್ಯನ ಕೆರೆಯಲ್ಲಿ ನಗರ ವನ ಯೋಜನೆ ಜಾರಿಗೊಳಿಸುವ ಕುರಿತು ಮನವಿ ಸಲ್ಲಿಸಿದರು.
ಕೊಡಗು ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಾಡಾನೆಗಳು ಕೃಷಿಭೂಮಿ ಮತ್ತು ಜನವಸತಿ ಪ್ರದೇಶಗಳಿಗೆ ಪ್ರವೇಶಿಸುತ್ತಿರುವ ಘಟನೆ ನಿರಂತರವಾಗಿ ನಡೆಯುತ್ತಿದ್ದು ಅನೇಕ ಸಾವು- ನೋವುಗಳು ಸಂಭವಿಸಿವೆ. ಇದರಿಂದ ರಸ್ತೆತಡೆದು ಪ್ರತಿಭಟನೆಗಳು ಸಹ ನಡೆದವು.
ಬೆಳೆನಷ್ಟ , ಆಸ್ತಿಪಾಸ್ತಿ ಹಾನಿ ಮತ್ತು ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗುತ್ತಿದೆ. ಇದರಿಂದ ರೈತರು ಮತ್ತು ಅರಣ್ಯದಂಚಿನಲ್ಲಿ ವಾಸಿಸುವ ಜನರು ತೀವ್ರ ಸಂಕಷ್ಟ ಅನುಭವಿಸುತ್ತ ಇದ್ದಾರೆಂದು ಮನವರಿಕೆ ಮಾಡಿದರು.
ಆನೆ ತಡೆಗೋಡೆಗಳ ಬಲವರ್ಧನೆ ,ಸೌರಬೇಲಿ ವ್ಯವಸ್ಥೆ ,ಚಲನವಲನ ಮೇಲ್ವಿಚಾರಣೆ ,ಮುನ್ನೆಚ್ಚರಿಕೆ ವ್ಯವಸ್ಥೆ , ಅರಣ್ಯ ವಾಸಸ್ಥಳಗಳ ಸುಧಾರಣೆ , ತ್ವರಿತ ಪ್ರತಿಕ್ರಿಯಾ ತಂಡಗಳ ರಚನೆ , ಪೀಡಿತ ಕುಟುಂಬ ಮತ್ತು ರೈತರಿಗೆ ಸೂಕ್ತ ಪರಿಹಾರ ಒದಗಿಸುವ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಚಿವರಿಗೆ ಮನವಿ ಮಾಡಿದರು.
ವರದಿ : ಪ್ರಿತುನ್ ಪೂವಣ್ಣ




















