ಬೆಂಗಳೂರು: ಟಿ ಪಿ ಕೈಲಾಸಂ, ಅ ರಾ ಮಿತ್ರ, ಬೀಚಿ ಮುಂತಾದ ಶ್ರೇಷ್ಠ ಸಾಹಿತಿಗಳ ಹಾಸ್ಯ ಸಾಹಿತ್ಯ ಪರಂಪರೆಯನ್ನು ಪ್ರಸಿದ್ಧ ಅಂಕಣಕಾರ, ವಿನೋದ ಸಾಹಿತಿ, ಅಣಕು ರಾಮನಾಥ್ ಅವರು ಸಮರ್ಥವಾಗಿ ಬೆಳೆಸುತ್ತಿದ್ದಾರೆ ಎಂದು ಶ್ರೇಷ್ಠ ವಾಗ್ಮಿ, ಹಾಸ್ಯಪಟು ವೈ ವಿ ಗುಂಡೂರಾವ್ ಅವರು ತಿಳಿಸಿದರು.
ಅವರು ಇಂದು ಬೆಂಗಳೂರಿನ ಆನಂದ ರಾವ್ ವೃತ್ತದ ಬಳಿ ಇರುವ ಲೆಕ್ಕಾಧಿಕಾರಿಗಳ ಸಂಘದಲ್ಲಿ ಜರುಗಿದ ಹಾಸ್ಯ ಕಾರ್ಯಕ್ರಮದಲ್ಲಿ ಅಣಕು ರಾಮನಾಥ ಅವರ ಸಾಹಿತ್ಯ ಕೃತಿಗಳನ್ನು ಹಾಗೂ ಅದರಲ್ಲಿ ಅಡಕಗೊಂಡಿರುವ ಅನೇಕ ಔಚಿತ್ಯಪೂರ್ಣ, ಸಾಮಾಜಿಕ ಕಳಕಳಿಯ ವ್ಯಂಗ್ಯೋಕ್ತಿ, ಕಟೂಕ್ತಿ, ವಿಡಂಬನೆಗಳ ವಿಶ್ಲೇಷಣೆ ಮಾಡಿ ಮಾತನಾಡುತ್ತಿದ್ದರು. ರಾಮನಾಥ ಅವರ ಸಾಹಿತ್ಯ ಅಬಾಲ ವೃದ್ಧರಾದಿಯಾಗಿ ಎಲ್ಲರಿಂದಲೂ ಓದಿಸಿಕೊಳ್ಳುವಂಥದ್ದಾಗಿದ್ದು ಎಂದು ಅಭಿಪ್ರಾಯಪಟ್ಟರು. ಅವರ ನಿರಂತರ ಅಂಕಣ ಬರಹ, ನಿಗದಿತ ಪ್ರಶ್ನೋತ್ತರ ಬರಹ ಮುಂತಾದ ಬರಹಗಳಲ್ಲಿನ ಹಲವಾರು ಸಂದರ್ಭಗಳನ್ನು ಪ್ರಸ್ತಾಪಿಸಿ ಜನರನ್ನು ನಗೆಗಡಲಿನಲ್ಲಿ ತೇಲಿಸಿದರು.
ಕಾರ್ಯಕ್ರಮದ ನಡುವೆ ಅಣಕು ರಾಮನಾಥ, ಶ್ರೀಪತಿ ಮಂಜನಬೈಲ, ಶ್ರೀಮತಿ ಶ್ರೀವಿದ್ಯಾ, ಎಂ ಭಾನು ಅವರು ನಡೆಸಿಕೊಟ್ಟ ಅಣಕುವಾಡುಗಳು, ಹಾಸ್ಯಮಯ ಕವಿತೆಗಳು, ಹಾಸ್ಯ ಪ್ರಹಸನ ಜನಮನ ತಣಿಸುವಲ್ಲಿ ಸಫಲವಾಗಿ, ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಲು ಕಾರಣವಾದವು. ಕಾರ್ಯಕ್ರಮದ ನಂತರ ಎಲ್ಲಾ ವಿನೋದ ಕಲಾವಿದರ ಪರವಾಗಿ ಗುಂಡುರಾವ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷರಾಗಿದ್ದ ಡಾ. ಎ ಆರ್ ಗೋವಿಂದ ಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಿತ ಡಾ. ಎ ಆರ್ ಗೋವಿಂದ್ ಸ್ವಾಮಿ ಅವರು ಮಾತನಾಡಿ ಸಾಂಸ್ಕೃತಿಕ ಜಗತ್ತಿನಲ್ಲಿ ಯಾವುದೇ ವ್ಯಕ್ತಿಯನ್ನು ಗುರುತಿಸಿ ಸನ್ಮಾನಿಸಿದರೆ, ಅದು ಅಂತಹ ವ್ಯಕ್ತಿ ಸೇವೆ ಸಲ್ಲಿಸಿರುವ ಸಂಸ್ಥೆಯನ್ನು, ವ್ಯಕ್ತಿ ಪ್ರತಿನಿಧಿಸುತ್ತಿರುವ ಇಡೀ ಸಂಘಟನೆಯನ್ನು ಸನ್ಮಾನಿಸಿದಂತೆ ಎಂದು ಹೇಳಿ ಕ.ವಿ.ಮಂ ಲೆಕ್ಕಾಧಿಕಾರಿಗಳ ಸಂಘದ ಇಂತಹ ಸಾಂಸ್ಕೃತಿಕ ಚಟುವಟಿಕೆಗಳನ್ನು ಶ್ಲಾಘಿಸಿ, ಸನ್ಮಾನಕ್ಕೆ ಕೃತಜ್ಞತೆ ಸಲ್ಲಿದರು. ಮುಖ್ಯ ಅತಿಥಿಗಳಾದ ಕವಿಮಂ ಪಿಂಚಣಿದಾರರ ಸಂಘದ ಅಧ್ಯಕ್ಷ, ನಿವೃತ್ತ ಉಪ ಲೆಕ್ಕನಿಯಂತ್ರಣಾಧಿಕಾರಿ ಶ್ರೀ ಬಿ ಪಿ ಕುಮಾರಸ್ವಾಮಿ ಅವರು ಮಾತನಾಡುತ್ತಾ ಡಾ. ಗೋವಿಂದಸ್ವಾಮಿ ಅವರು ರಂಗಪ್ರಪಂಚದಲ್ಲಿ ಅನೇಕ ಸಾಧನೆ ಮಾಡಿರುವುದನ್ನು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕವಿಮಂ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಶ್ರೀ ಎಸ್ ಗಿರೀಶ್ ಅವರು ಮಾತನಾಡಿ, ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ತುಂಬಾ ಸಂತೋಷ ; ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಸದಾ ನಡಿಯುತ್ತಿರಲಿ ಎಂದು ಆಶಿಸಿದರು.
ಅಮರಾ ಕಾವ್ಯನಾಮದ ಖ್ಯಾತಿಯ ಅಣೆಕಟ್ಟು ಮಧುಸೂಧನ್ ರಾವ್ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸಂಘದ ಕಾರ್ಯಕಾರಿ ಸಮಿತಿ ಸದಸ್ಯೆ, ಭಾಗ್ಯ ಎ, ಲೆಕ್ಕಾಧಿಕಾರಿ ಅವರು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರೆ, ಡಾ. ಪೂರ್ಣಿಮಾ ಗೋಪಾಲ್ ಅವರು ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರ್ವಹಿಸಿದರು.
ಸಂಘದ ಧುರೀಣ ಎಂ ಎ ಮುರಾರಿ, ನಿವೃತ್ತ ಬಿಎಸ್ಎನ್ಎಲ್ ಅಧಿಕಾರಿ ಶ್ರೀಮತಿ ಇಂದಿರಾ ಪಾಂಡುರಂಗ ರಾವ್ ಅವರು ಸನ್ಮಾನಿತರ ಹಾಗೂ ಕಲಾವಿದರ ಪರಿಚಯ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಸದಸ್ಯರುಗಳಾದ ಎಸ್ ವಿ ಗೋಪಿನಾಥ್ , ಧನಂಜಯ, ಬಿ ಸತ್ಯನಾರಾಯಣ, ಗಿರೀಶ, ಪದ್ಮಾವತಿ, ಸಾಹಿತಿಗಳಾದ ಕೊಪ್ಪರಂ ಅನ್ನಪೂರ್ಣ, ಸಿದ್ದಣ್ಣ ಸೊನ್ನದ, ಕೆ ವಿ ನಾಗರಾಜ್, ಪ್ರಭಾಕರ ಗಂಗೊಳ್ಳಿ , ಆರ್ ಶ್ರೀನಾಗೇಶ, ವಿ ಹೆಚ್ ಶಿವಕೀರ್ತಿ, ದುಗ್ಗೂರು ಜೀವಿ, ರಾಜೇಶ್ವರಿ ಅಜ್ಜೀಬಳ, ಗೀತಾ ಸಭಾಹಿತ, ಶ್ರೀವಾಣಿ, ಚಂದ್ರಶೇಖರ ಶಿಡ್ಲಘಟ್ಟ, ಪ್ರಕಾಶ ಪೂರ್ಣಮಠ, ತಿಪ್ಪೇಸ್ವಾಮಿ, ರಾಘವೇಂದ್ರ ರಾವ್, ಎಸ್ ಪಿ ಸುರೇಶ , ಕೆ ಸಿ ವಿಶ್ವೇಶ್ವರ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ವರದಿ : ಕೊಡಕ್ಕಲ್ ಶಿವಪ್ರಸಾದ್ ಶಿವಮೊಗ್ಗ




















