ಬಳ್ಳಾರಿ / ಕಂಪ್ಲಿ : ಪಟ್ಟಣ ಸೇರಿದಂತೆ ತಾಲೂಕಿನ ಸಣಾಪುರ, ಬೆಳಗೋಡ್ಹಾಳ್ ಗ್ರಾಮದ ವಿಜಯನಗರ ಕಾಲುವೆಗಳಲ್ಲಿ ತುಂಬಿಕೊಂಡಿದ್ದ ಹೂಳನ್ನು ನೀರು ಬಳಕೆದಾರರ ಸಂಘದಿಂದ ತೆರವುಗೊಳಿಸಲಾಯಿತು.
ನಂತರ ಸಣಾಪುರ ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ದೊಡ್ಡಬಸಪ್ಪ ಮಾತನಾಡಿ, ಈಗಾಗಲೇ ಪಟ್ಟಣ, ಸಣಾಪುರ, ಬೆಳಗೋಡ್ಹಾಳ್ ಗ್ರಾಮದಲ್ಲಿ ಹಾದು ಹೋಗಿರುವ ವಿಜಯನಗರ ಕಾಲುವೆಗಳಲ್ಲಿ ಘನತ್ಯಾಜ್ಯ ತುಂಬಿಕೊಂಡ ಪರಿಣಾಮ ಹೂಳು, ಜಲಸಸ್ಯದಿಂದ ನೀರು ಸರಾಗವಾಗಿ ಹರಿಯದಂತೆ ಆಗಿದೆ. ಇದರಿಂದ ಈ ಭಾಗದ ಸಾಕಷ್ಟು ರೈತರಿಗೆ ತುಂಬ ಸಮಸ್ಯೆ ಉಂಟಾಗಿದೆ. ರೈತರು ಬದುಕು ಹಸನಾಗಬೇಕಾದರೆ, ಸಮೃದ್ಧ ಬೆಳೆಯಿಂದ ಮಾತ್ರ. ಆದರೆ, ನೀರು ಇಲ್ಲದೇ ಇದ್ದರೆ, ಬೆಳೆ ಬೆಳೆಯುವದಾದರು ಹೇಗೆ? ಸ್ವಾಮಿ. ಅಧಿಕಾರಿಗಳು ಹೂಳೆತ್ತಲು ಮುಂದಾಗದಿರುವ ಹಿನ್ನಲೆ ಸ್ವತಃ ರೈತರು ಸ್ವಯಂ ಪ್ರೇರಿತವಾಗಿ ನೀರು ಬಳಕೆದಾರರ ಸಂಘದಿಂದ ಕಾಲುವೆಯಲ್ಲಿನ ಹೂಳು ತೆಗೆಸಲಾಯಿತು. ಎರಡನೇ ಬೆಳೆಗೆ ನೀರು ಇಲ್ಲದ ಪರಿಣಾಮ ಈಗಾಗಲೇ ರೈತರು ಬದುಕು ಸಂಕಷ್ಟಕ್ಕೆ ಸಿಲುಕಿದೆ. ಈಗ ಮುಂಗಾರು ಆರಂಭದ ಹಿನ್ನಲೆ ಬೆಳೆ ಬೆಳೆಯಲು ನೀರಿನ ಅವಶ್ಯಕತೆ ಇದೆ. ಆದ್ದರಿಂದ ಕಾಲುವೆ ಮೂಲಕ ನೀರು ಹರಿಸಿಕೊಳ್ಳಲು ಕಾಲುವೆಯಲ್ಲಿ ಹೂಳನ್ನು ಮೊದಲು ತೆಗೆದುಕೊಳ್ಳಬೇಕಾಗಿದೆ. ಆದ್ದರಿಂದ ಸ್ವತ: ರೈತರಾದ ನಾವು ಹೂಳು ತೆಗೆಸಿಕೊಳ್ಳುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಕಂಪ್ಲಿ ನೀರು ಬಳಕೆದಾರರ ಸಹಕಾರ ಸಂಘದ ಉಪಾಧ್ಯಕ್ಷ ಟಿ.ಗಂಗಣ್ಣ, ಕಾರ್ಯದರ್ಶಿ ಅಶೋಕ, ಗೋಂದಿ ಮಂಜುನಾಥ, ರೈತರಾದ ವಿರುಪಾಕ್ಷಿ, ಬಸವರಾಜ ಸೇರಿದಂತೆ ರೈತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















