ಬಸವನ ಬಾಗೇವಾಡಿ – ರಾಜ್ಯ ಸರ್ಕಾರವು ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ಖಾಸಗೀಕರಣ ಮಾಡುತ್ತಿರುವುದನ್ನು ಕೈಬಿಡಬೇಕೆಂದು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಹುಲ ಕಲಗೊಂಡ ವಿನಂತಿಸಿದರು.
ವಿದ್ಯುತ್ ನಿಗಮಗಳು ಖಾಸಗೀಕರಣವಾದರೆ ಈಗಾಗಲೇ ರೈತರ ಜಮೀನುಗಳ ಕೃಷಿ ಪಂಪಸೆಟ್ ಗಳಿಗೆ ಉಚಿತ ವಿದ್ಯುತ್, ಗೃಹಜ್ಯೋತಿ ಸೇರಿ ಬಡವರಿಗಿರುವ ಯೋಜನೆಗಳು ಸ್ಟಗಿತಗೊಳ್ಳಲಿವೆ. ರಾಜ್ಯ ಸರ್ಕಾರವು ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಸಗಿ ಕಂಪನಿಗಳಿಗೆ ವಹಿಸಲು ಮುಂದಾಗಿರುವ ವಿಷಯ ಸಾರ್ವಜನಿಕರಲ್ಲಿ, ರೈತರಲ್ಲಿ, ಕಾರ್ಮಿಕರಲ್ಲಿ ಹಾಗೂ ವಿದ್ಯುತ್ ಗ್ರಾಹಕರಲ್ಲಿ ತೀವ್ರ ಆತಂಕ ಮೂಡಿಸಿದೆ. ವಿದ್ಯುತ್ ಎಂಬುದು ಜನಸಾಮಾನ್ಯರ ಮೂಲಭೂತ ಅವಶ್ಯಕತೆಯಾಗಿದ್ದು. ಇದನ್ನು ಸಂಪೂರ್ಣವಾಗಿ ಖಾಸಗಿ ಸಂಸ್ಥೆಗಳ ನಿಯಂತ್ರಣಕ್ಕೆ ನೀಡುವುದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ. ವಿದ್ಯುತ್ ದರಗಳು ಹೆಚ್ಚಾಗುವ ಮೂಲಕ ಸಾಮಾನ್ಯ ಜನರ ಮೇಲೆ ಆರ್ಥಿಕ ಹೊರೆ ಬೀಳಬಹುದು. ರಾಜ್ಯ ಸರ್ಕಾರವು ಯಾವುದೇ ಕಾರಣಕ್ಕೂ ವಿದ್ಯುತ್ ಖಾಸಗೀಕರಣ ಪ್ರಕ್ರಿಯೆಯನ್ನು ಮುಂದುವರಿಸದೆ, ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ಹಿಂಪಡೆಯಬೇಕೆಂದು ಪ್ರಕಟಣೆಯ ಮೂಲಕ ಒತ್ತಾಯಿಸಿದರು.
- ಕರುನಾಡ ಕಂದ ಸುದ್ದಿ




















