ಬಳ್ಳಾರಿ / ಕಂಪ್ಲಿ : ಬೆಲೆ ಏರಿಕೆಗೆ ತಕ್ಕಂತೆ ಹೊಸದಾಗಿ ಜಾರಿಯಾದ ಕನಿಷ್ಠ ವೇತನ ಜಾರಿ ಮಾಡಬೇಕು. ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ, ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದಿಂದ ಜು. 9ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯ ಉಪಾಧ್ಯಕ್ಷ ಆರ್.ಎಸ್.ಬಸವರಾಜ ಹೇಳಿದರು.
ಪಟ್ಟಣದ ಐತಿಹಾಸಿಕ ಸೋಮಪ್ಪ ದೇವಸ್ಥಾನ ಆವರಣದಲ್ಲಿ ಬುಧವಾರ ನಡೆದ ಸಂಘಟನಾ ಸಭೆಯಲ್ಲಿ ಮಾತನಾಡಿ, ಈಗಾಗಲೇ ವೇತನದಲ್ಲಿ ಸ್ವಲ್ಪ ಮಟ್ಟಿಗೆ ಏರಿಕೆ ಮಾಡಿರುವುದು ಸ್ವಾಗತಾರ್ಹವಾಗಿದೆ. ಆದರೆ, ಸರ್ಕಾರ ಹೊಸದಾಗಿ ಜಾರಿಯಾಗಿರುವ ಕನಿಷ್ಠ ವೇತನ ಜಾರಿ ಮಾಡಬೇಕಾಗಿದೆ. ಅನುಭವದ ಆಧಾರದ ಮೇಲೆ ಹೆಚ್ಚುವರಿ ವೇತನ ನೀಡಬೇಕು. ಸತತ ಮೂರು ವರ್ಷದಿಂದ ಹೋರಾಟ ಮಾಡುತ್ತಿದ್ದೇವೆ. ಹಲವು ವರ್ಷಗಳಿಂಧ ಕರವಸೂಲಿಗಾರರು, ಗುಮಾಸ್ತರು, ಕ್ಲರ್ಕ್, ಡಿ.ಇ.ಒ, ನೀರಗಂಟಿ, ವಾಟರ್ಮನ್, ಪಂಪ್ ಆಪರೇಟರ್, ಜವಾನರು, ಸ್ವಚ್ಚತಾಗಾರರು, ಒಳಚರಂಡಿ ಕ್ಲೀನಿಂಗ್ ಇವರು ಗ್ರಾಪಂಗಳಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಇವರಿಗೆ ಸರ್ಕಾರದಿಂದ ಸರಿಯಾಗಿ ಸೌಲಭ್ಯಗಳು, ಕನಿಷ್ಠ ವೇತನ ಸಿಗದೇ, ಸಂಕಷ್ಟದ ಜೀವನ ನಡೆಸುವಂತಾಗಿದೆ. ಆದ್ದರಿಂದ ಗ್ರಾಪಂ ಸಿಬ್ಬಂದಿಗಳಿಗೆ ಕಾರ್ಮಿಕ ಇಲಾಖೆ ನಿಗದಿಪಡಿಸಿರುವ ಕನಿಷ್ಠ ವೇತನ ನೀಡಬೇಕು. ಪಿಂಚಣಿ, ಸೇವಾ ಹಿರಿತನ ಭತ್ಯೆ ಹೆಚ್ಚಳ, ಪಂಚಾಯಿತಿಗೊಂದು ಎಸ್.ಡಿ.ಎ, 2ನೇ ಡಿಇಓ ನೇಮಕಾತಿ ಮತ್ತು ಆರೋಗ್ಯ ವಿಮೆ ಜಾರಿಗೊಳಿಸಬೇಕು. ಸ್ವಚ್ಚವಾಹಿನಿಯರೆ ಒಡಂಬಡಿಕೆ ರದ್ದುಪಡಿಸಿ, ತರಬೇತಿ ಪಡೆದ ಎಲ್ಲರಿಗೂ ಕಡ್ಡಾಯ ಕೆಲಸದ ಜೊತೆಗೆ 7500 ರೂ.ಗಳ ಗೌರವಧನ ನೀಡಬೇಕು. ಸಿಂಗಲ್ ಚಾಲಕರನ್ನು ಪರಿಗಣಿಸಿ 15 ಸಾವಿರ ರೂ.ಗಳ ಗೌರವಧನ ನೀಡಬೇಕು. ಹೀಗೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಬೆಂಗಳೂರು ಚಲೋ ಮೂಲಕ ಸರ್ಕಾರಕ್ಕೆ ಒತ್ತಾಯಿಸಲಾಗುವುದು. ಈ ಹೋರಾಟದಲ್ಲಿ ಕಂಪ್ಲಿ ಸೇರಿದಂತೆ ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಗ್ರಾಪಂ ಸಿಬ್ಬಂದಿಗಳು ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘದ ರಾಜ್ಯ ಸಹ ಕಾರ್ಯದರ್ಶಿ ನೆಲ್ಲುಡಿ ರಾಜಸಾಬ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೀರಸೇನರೆಡ್ಡಿ, ತಾಲೂಕು ಅಧ್ಯಕ್ಷ ಜಡೆಪ್ಪಸ್ವಾಮಿ, ಉಪಾಧ್ಯಕ್ಷ ಹೆಚ್.ಗಾದಿಲಿಂಗಪ್ಪ, ಪ್ರಧಾನ ಕಾರ್ಯದರ್ಶಿ ಚಾಂದ್ಬಾಷಾ, ಖಜಾಂಚಿ ಚಂದ್ರಶೇಖರ ಸೇರಿದಂತೆ ತಾಲೂಕು ಸಂಘದ ನೌಕರರು, ಮುಖಂಡರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















