
ಕಾಳಗಿ : ತಾಲೂಕಿನಾದ್ಯಂತ ಮುಂಗಾರು ಮಳೆ ಕೊರತೆಯಾಗಿದ್ದು, ಬೆಳೆಗಳು ಮೊಳಕೆಯಲ್ಲೇ ಮುದುಡಿವೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರ್ಕಾರ ಕಾಳಗಿ ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಜುಲೈ 13 ರಂದು ರೈತರ ಬೃಹತ್ ಪ್ರತಿಭಟನೆ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ತಾಲೂಕಾಧ್ಯಕ್ಷ ವೀರಣ್ಣ ಗಂಗಾಣಿ ತಿಳಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾಳಗಿ ತಾಲ್ಲೂಕಿನಲ್ಲಿ ಮಳೆ ಕೊರತೆಯಿಂದ ಉದ್ದು, ಹೆಸರು, ಸೋಯಾ, ತೊಗರಿ ಸೇರಿದಂತೆ ಅನೇಕ ಬಗೆಯ ಬೆಳೆಗಳು ಹಾನಿಯುಂಟಾಗಿ ರೈತರು ಅಪಾರ ನಷ್ಟ ಅನುಭವಿಸಿ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಇನ್ನೂ ಅನೇಕ ರೈತರು ಬಿತ್ತನೆ ಮಾಡದೆ ಮಳೆಗಾಗಿ ಮುಗಿಲು ನೋಡುತ್ತಾ ಕುಳಿತಿದ್ದಾರೆ. ಮುಂದಿನ ದಿನಗಳಲ್ಲಿ ಮಳೆ ಬರದಿದ್ದರೆ ಬಿತ್ತನೆ ಮಾಡಿದ ತೊಗರಿ ಬೆಳೆಗೆ ಹಾನಿಯಾಗುತ್ತದೆ. ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಮುಂಗಾರು ಬೆಳೆ ಹಾನಿಯ ಕುರಿತು ಸರ್ಕಾರ ರಾಷ್ಟ್ರೀಯ ವಿಪತ್ತು ನಿರ್ವಹಣೆ ಮಾರ್ಗಸೂಚಿಯ ಪ್ರಕಾರ ಕಾಳಗಿ ತಾಲೂಕನ್ನು ಬರಗಾಲ ಎಂದು ಘೋಷಣೆ ಮಾಡಿ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ವೇಳೆಯಲ್ಲಿ ಪೂಜ್ಯರಾದ ಶ್ರೀ ರೇವಣಸಿದ್ದ ಶಿವಾಚಾರ್ಯರು, ಶ್ರೀ ಬಸವಲಿಂಗ ಶಿವಾಚಾರ್ಯರು, ಶ್ರೀ ರೇವಣಸಿದ್ದ ಶರಣರು, ಸಾಮಾಜಿಕ ಹೋರಾಟಗಾರ ಮೋಹನ ಚಿನ್ನ, ಸುಂದರ ಡಿ ಸಾಗರ, ಕರಣ ರಾಜಾಪುರ, ಪವನ ಚಿನ್ನ, ಅವಿನಾಶ ಗುತ್ತೇದಾರ, ಮಲ್ಲಿಕಾರ್ಜುನ ಪಾಟೀಲ, ಶಿವು ಸಾಲಿಮಠ, ರಮೇಶ ಹೆಬ್ಬಾಳ, ಜಗನ್ನಾಥ ಸೇರಿದಂತೆ ಅನೇಕರಿದ್ದರು.
- ಕರುನಾಡ ಕಂದ ಸುದ್ದಿ




















