ಬಳ್ಳಾರಿ /ಕಂಪ್ಲಿ : ಐತಿಹಾಸಿಕ ದರೋಜಿ ಕೆರೆ ಸಂರಕ್ಷಿಸಬೇಕೆಂದು ಆಗ್ರಹಿಸಿ, ದಲಿತ್ ಪ್ಯಾಂರ‍್ಸ್ ಆಫ್ ಇಂಡಿಯಾ ಬಳ್ಳಾರಿ ಜಿಲ್ಲಾ ಘಟಕ ಮತ್ತು ಸಮಾಜ ಸೇವಾ ಕಾರ್ಯಕರ್ಯರ ವೇದಿಕೆ ಮುಖಾಂತರ ಸಮೀಪದ ಹೊಸ ದರೋಜಿ ಗ್ರಾಮದ ಗ್ರಾಮ ಪಂಚಾಯಿತಿಯಲ್ಲಿ ಸಂಸದ ಈ.ತುಕಾರಂ ಅವರಿಗೆ ಬರೆದಂತಹ ಮವಿ ಪತ್ರವನ್ನು ಕಾರ್ಯದರ್ಶಿ ಕೆ.ರುದ್ರಪ್ಪ ಇವರಿಗೆ ಸಲ್ಲಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ನಾಗರಾಜ ಭೋವಿ ಮಾತನಾಡಿ, ಈ ಭಾಗದ ರೈತರ ಹಿತದೃಷ್ಠಿಯಿಂದ ಹಾಗೂ ಜನ ಜಾನುವಾರುಗಳಿಗೆ ನೀರುಣಿಸುವ ಹಿನ್ನಲೆ ಹಲವು ದಶಕಗಳ ಹಿಂದೆ ಟಿಪ್ಪು ಸುಲ್ತಾನ್ ಇವರು ದರೋಜಿ ಕೆರೆ ನಿರ್ಮಿಸಿದ್ದಾರೆ. ಈ ಕೆರೆಯು ಎರಡೂವರೆ ಮೈಲು ಉದ್ಯವಿದ್ದು, 45 ಅಡಿ ಎತ್ತರವಿದು ವಿಹಂಗನ ನೋಟವನ್ನುಂಟು ಮಾಡಿದೆ. ಜಿಲ್ಲೆಯ ದೊಡ್ಡ ಕೆರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೆರೆ ಪ್ರದೇಶ ಸುಮಾರು ಉದ್ದ 3.600 ಕಿ.ಮೀ.ನಷ್ಟು ಉದ್ದವಿದೆ. ಕೆರೆಯು ಸುಮಾರು 4.47 ಮೀಟರ್ ಅಗಲ, ಕೆರೆ ಕೋಡಿ ಉದ್ದ ಸುಮಾರು 136.20 ಮೀಟರ್‌ನಷ್ಠಿದೆ. ಗರಿಷ್ಠ 1511 ಅಡಿಯಷ್ಟು ನೀರಿನ ಮಟ್ಟ ಹೊಂದಿದೆ. ಇಲ್ಲಿನ 10 ಗ್ರಾಮಗಳ ಸುಮಾರು 3222 ಎಕರೆ ಪ್ರದೇಶಕ್ಕೆ ನೀರೊದಗಿಸಲಿದೆ. ಆದರೆ, ಈಗ ಜಿಂದಾಲ್ ಉಕ್ಕು ಕಾರ್ಖಾನೆ ಸೇರಿದಂತೆ ಇನ್ನಿತರ ಕಾರ್ಖಾನೆಗಳ ಕಲುಷಿತ ನೀರು, ಇಲ್ಲಿನ ಕೆರೆಗೆ ಸೇರ್ಪಡೆಯಿಂದಾಗಿ ಜಲ ಮಾಲಿನ್ಯವಾಗಿದೆ. ಮತ್ತು ಈ ಕುಲುಷಿತ ನೀರಿನಿಂದಾಗಿ ರೈತರಿಗೆ, ಕೃಷಿ ಕಾರ್ಮಿಕರಿಗೆ ಚರ್ಮದ ರೋಗದ ಜೊತೆಗೆ ಜಾನುವಾರು, ಪಕ್ಷಿಗೆ ಜೀವ ಕಂಟಕವಾಗಿದೆ. ಹಾಗೂ ಮೀನುಗಾರಿಕೆಗೆ ಮತ್ತು ಜೀವಿಸುವ ಮೀನುಗಳ ಬದುಕಿಗೆ ವಿಷ ಉಣಿಸುವಂತಾಗಿದೆ.
ಮೀನುಗಳು ರೋಗಗ್ರಸ್ತವಾಗಿ ಸಾಯುತ್ತಿದ್ದು, ಮೀನುಗಾರಿಕೆ ಗುತ್ತಿಗೆದಾರರು, ಮೀನು ಬೇಟೆಗಾರರು ನಷ ಅನುಭವಿಸುತ್ತಿದ್ದಾರೆ. ಇಲ್ಲಿನ ಕೆರೆಯಲ್ಲಿ ಕಲುಷಿತ ಸೇರುತ್ತಿದ್ದರೂ, ಸಂಬಂಧಿಸಿದ ಅಧಿಕಾರಿಗಳು ಮಾತ್ರ ಮೌನವಹಿಸಿರುವುದು ವಿಪರ್ಯಾಸವಾಗಿದೆ. ಇಲ್ಲಿನ ಕೆರೆ ಸಂರಕ್ಷಣೆಗೆ ಪ್ರತಿಯೊಬ್ಬರ ಹೊಣೆಯಾಗಿದೆ. ಆದ್ದರಿಂದ ಜನಪ್ರತಿನಿಧಿಗಳು, ಅಧಿಕಾರಿಗಳು ಕೂಡಲೇ ಗಮನಕ್ಕೆ ತೆಗೆದುಕೊಂಡು, ಇಲ್ಲಿನ ದರೋಜಿ ಕೆರೆ ಸಂರಕ್ಷಿಸುವ ಮೂಲಕ ಉಳಿಸಬೇಕು. ಇಲ್ಲವಾದಲ್ಲಿ ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ಕರ್ನಾಟಕ ಲೋಕಾಯುಕ್ತಗೆ ದೂರು ಸಲ್ಲಿಸಲಾಗುವುದು. ಮತ್ತು ಮುಂದಿನ ದಿನದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಸಮಾಜ ಸೇವಾ ಕಾರ್ಯಕರ್ತರ ವೇದಿಕೆಯ ರಾಜ್ಯ ಕಾರ್ಯಾಧ್ಯಕ್ಷ ಟಿ.ಎಚ್.ಎಂ.ರಾಜಕುಮಾರ ಮಾತನಾಡಿ, ಇಲ್ಲಿನ ಕೆರೆಯಿಂದಾಗಿ ಜನ, ಜಾನುವಾರು, ಪಕ್ಷಿ, ಪ್ರಾಣಿಗಳಿಗೆ ಅನುಕೂಲವಾಗಿದೆ ಆದರೆ, ಕೆಲ ವರ್ಷಗಳಿಂದ ಕಾರ್ಖಾನೆಗಳಿಂದ ಬರುವ ಕಲುಷಿತ ನೀರು ಕೆರೆಗೆ ಸೇರುತ್ತಿದ್ದು, ನೀರು ಮಲೀನವಾಗಿ, ಆರೋಗ್ಯದ ಮೇಲೆ ದುಶ್ಪರಿಣಾಮ ಬೀರುತ್ತಿದೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತು, ಕೆರೆ ಸಂರಕ್ಷಣೆಗೆ ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಎಂ.ಎಸ್.ಗುರುಮೂರ್ತಿ, ವಿ.ಮಾಯಣ್ಣ, ವಿ.ಗೋಪಾಲ. ವಿನೋದ, ಜಾಫರ್, ಸುರೇಶ, ಶಂಕ್ರಪ್ಪ, ಭೀಮಾ, ಹೊನ್ನೂರಸ್ವಾಮಿ ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















