ಮಡಿಕೇರಿ : ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶಗಳ ಕರಡು ಅಧಿಸೂಚನೆಯಿಂದ ಕೊಡಗು ಜಿಲ್ಲೆಯ ಜನರಿಗೆ ಆಗಬಹುದಾದ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ಭರವಸೆ ನೀಡಿದ್ದಾರೆ.
ಡಾ. ಕೆ. ಕಸ್ತೂರಿರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯನಿರತ ತಂಡದ ವರದಿ ಆಧಾರದಲ್ಲಿ ಕೇಂದ್ರ ಸರ್ಕಾರ ಹೊರಡಿಸಿರುವ ESA ಕರಡು ಅಧಿಸೂಚನೆಯ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರು, ಬೆಳೆಗಾರರು ಮತ್ತು ಸ್ಥಳೀಯ ಸಂಘಟನೆಗಳು ವ್ಯಕ್ತಪಡಿಸಿರುವ ಆತಂಕಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿರುವ ಪ್ರತಿಯೊಂದು ಆಕ್ಷೇಪಣೆ, ಕಳಕಳಿ ಮತ್ತು ವಾಸ್ತವಾಂಶಗಳನ್ನು ಕ್ರಮಬದ್ಧವಾಗಿ ದಾಖಲಿಸಿ ಕೇಂದ್ರ ಸಚಿವಾಲಯದ ಗಮನಕ್ಕೆ ತರಲಾಗುತ್ತಿದೆ. ಜನರ ಹಕ್ಕುಗಳು, ಜೀವನೋಪಾಯ ಮತ್ತು ಆಸ್ತಿಗಳ ರಕ್ಷಣೆಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಸಂಸದರು ಸ್ಪಷ್ಟಪಡಿಸಿದರು.
“ಪರಿಸರ ಸಂರಕ್ಷಣೆಯ ಜೊತೆಗೆ ಜನರ ಕಲ್ಯಾಣವೂ ಅಷ್ಟೇ ಮುಖ್ಯ. ಕೊಡಗಿನ ವಿಶಿಷ್ಟ ಭೌಗೋಳಿಕ ಮತ್ತು ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳ ಬಗ್ಗೆ ಕೇಂದ್ರಕ್ಕೆ ಮನವರಿಕೆ ಮಾಡಲಾಗಿದೆ. ಅಂತಿಮ ಅಧಿಸೂಚನೆಯು ನಮ್ಮ ಜನರ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ರಕ್ಷಿಸುವಂತಾಗಲು ನಾವು ಬದ್ಧರಾಗಿದ್ದೇವೆ” ಎಂದು ಯದುವೀರ್ ಒಡೆಯರ್ ಹೇಳಿದರು.
ESA ವ್ಯಾಪ್ತಿ ಮತ್ತು ಪರಿಣಾಮಗಳ ಬಗ್ಗೆ ಜನರಲ್ಲಿ ಇರುವ ಗೊಂದಲಗಳನ್ನು ನಿವಾರಿಸಲು ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳೊಂದಿಗೆ ಸಮನ್ವಯ ಸಾಧಿಸಿ ಮುಂದಿನ ದಿನಗಳಲ್ಲಿ ಹೆಚ್ಚಿನ ಚರ್ಚೆ ನಡೆಸುವುದಾಗಿಯೂ ಅವರು ತಿಳಿಸಿದರು.
ವರದಿ: ಪ್ರಿತುನ್ ಪೂವಣ್ಣ




















