ಮುಧೋಳ : ಜನಪದವು ಪ್ರತಿಯೊಬ್ಬರ ಬದುಕಿನಲ್ಲಿ ಹಾಸು ಹೊಕ್ಕಾಗಿದೆ. ಜನಪದವಿಲ್ಲದ ಜೀವನವಿಲ್ಲ. ಜನಪದವೇ ಎಲ್ಲಾ ಎಂದು ಲೋಕನಾಯಕಿ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷೆ ಶ್ರೀಮತಿ ಎಲ್ ಶ್ಯಾಮಲಾ ಅವರು ಅಭಿಪ್ರಾಯ ಪಟ್ಟರು. ಅವರು ತಾಲೂಕಿನ ಸುಕ್ಷೇತ್ರ ಮುಗಳಖೋಡದ ಶ್ರೀಸಿದ್ಧಾರೂಢ ಭಾರತಿ ಆಶ್ರಮದಲ್ಲಿ ಶ್ರೀಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನ ಹಾಗೂ ಬಾಗಲಕೋಟೆಯ ಕರ್ನಾಟಕ ರಾಜ್ಯ ಸರ್ವ ಕಲಾವಿದರ ಸಂಘದ ಸಂಯುಕ್ತ ಆಶ್ರಯದಲ್ಲಿ ಜರುಗಿದ “ವಿಶ್ವ ಜನಪದ ದಿನಾಚರಣೆ”-2026 ರ ಅಂಗವಾಗಿ ನಡೆದ ಜನಪದ ಕಲಾಮೇಳದ ಉದ್ಘಾಟನೆಯನ್ನು ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡುತ್ತಾ ಜನಪದ ಕಲೆಯನ್ನು ಮತ್ತು ಕಲಾವಿದರನ್ನು ಉಳಿಸುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳ ಪಾತ್ರ ಪ್ರಮುಖವಾಗಿದೆ.
ಡೊಳ್ಳಿನ ಪದಗಳು ಸಂಪ್ರದಾಯದ ಪದಗಳು. ಭಕ್ತಿ ಭಾವ ತುಂಬಿದ ಭಜನೆಗಳು. ಮುಂತಾದ ಕಲೆಗಳು ಈ ಆಧುನಿಕ ಯುಗದ ಅಶ್ಲೀಲ ಪದಗಳ ಹಾವಳಿಯಲ್ಲಿ ನಮ್ಮ ಜನಪದಗಳು ಕೊಚ್ಚಿ ಹೋಗಬಾರದು ಎಂದ ಅವರು ಆ ನಿಟ್ಟಿನಲ್ಲಿ ನಮಗೆ ಜನಪದ ಸೇವೆಯನ್ನು ಮಾಡುವುದರಲ್ಲಿ ಸಂತೃಪ್ತಿಯನ್ನು ತಂದಿದೆ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಕರ್ನಾಟಕ ರಾಜ್ಯ ಸರ್ವ ಕಲಾವಿದರ ಸಂಘದ ಗೌರವಾಧ್ಯಕ್ಷ ಚಿನ್ನಪ್ಪಗೌಡ ಗಿಡ್ಢಪ್ಪಗೋಳ ಮಾತನಾಡಿ ನಮ್ಮ ನಾಡಿನ ಸತ್ವಯುತವಾದ ಜನಪದ ಸಂಗೀತವನ್ನು ಉಳಿಸುವ ಕಾರ್ಯ ಎಲ್ಲ ಕಲಾವಿದರ ಮೇಲಿದೆ ಎಂದರು. ಸಭೆಯ ಪಾವನ ಸಾನಿಧ್ಯವನ್ನು ವಹಿಸಿ ಮಾತನಾಡಿದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳು ಮಾತನಾಡಿ ಜನರ ಜೀವನಾಡಿಯಾಗಿರುವ “ಜನಪದ” ಎಂಬ ಅರ್ಥಪೂರ್ಣವಾದ ಕಲೆಗಳು ಈ ಪ್ರಪಂಚದಲ್ಲಿ ಶಾಶ್ವತವಾಗಿರಬೇಕು, ನಮ್ಮ ಜನಪದ ಸಾಹಿತ್ಯದ ಶಕ್ತಿಯನ್ನು ಹೊಂದಿರುವ ಆಟ ಬೈಲಾಟಗಳು ಸೋಭಾನೆ. ಸಂಪ್ರದಾಯಗಳನ್ನು ಉಳಿಸಲು ನಿರಂತರ ನಾಡಿನ ಎಲ್ಲಾ ಕಲಾವಿದರು ಶ್ರಮಿಸುವ ಅಗತ್ಯತೆಯಿದೆ ಎಂದರು.
ಈ ಸಂದರ್ಭದಲ್ಲಿ ತತ್ವ ಪದಗಾರ ಉತ್ತೂರು ಗ್ರಾಮದ ವಿಠಲ್ ಮಹಾರಾಜರು ಬಂಡಿ ಅವರನ್ನು ಶಾಲು, ಮಾಲೆ ಸದ್ಗುರು ಸಿದ್ದಾರೂಢರ ಭಾವಚಿತ್ರ ಹಾಗೂ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಲಾಯಿತು. ರಾಜ್ಯ ಸರ್ವ ಕಲಾವಿದರ ಸಂಘದ ನಿರ್ದೇಶಕಿ ಲಕ್ಕವ್ವ ಕಪರಟ್ಟಿ ಉಪಸ್ಥಿತರಿದ್ದರು.
ಜಮಖಂಡಿ ತಾಲೂಕಿನ ಹುನ್ನೂರು ಗ್ರಾಮದ ಭೀರ ಸಿದ್ದೇಶ್ವರ ಡೊಳ್ಳಿನ ಗಾಯನ ಸಂಘ ಹಾಗೂ ಮುಧೋಳ ತಾಲೂಕಿನ ಪಿ.ಎಂ ಬುದ್ನಿ ಗ್ರಾಮದ ಮರಡಿ ಸಿದ್ದೇಶ್ವರ ಡೊಳ್ಳಿನ ಗಾಯನ ಸಂಘದ ಹಾಡುಗಾರಿಕೆ ಜನರ ಮನಸ್ಸನ್ನು ಸೂರೆಗೊಳಿಸಿತು. ಕೊಣ್ಣೂರು ಗ್ರಾಮದ ಕರೆಸಿದ್ದೇಶ್ವರ ಮಹಿಳಾ ಜನಪದರ ತತ್ವಪದಗಳು ಆಕರ್ಷಣೀಯವಾಗಿದ್ದವು. ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಮಹಾದೇವ ಮೀಸಿ. ಸಾಯಿ ಮುದ್ರಣ ಸಂಸ್ಥೆಯ ಹನುಮಂತ ಹುದ್ದಾರ. ಕಂದಾಯ ಇಲಾಖೆಯ ಸಹಾಯಕ ಶ್ರೀಶೈಲ್ ಪಾಟೀಲ್ ಜನಪದ ದಿನಾಚರಣೆಯ ಕಾರ್ಯಕ್ರಮಕ್ಕೆ ಸಹಕರಿಸಿದರು.
ಎಲ್ ಲಕ್ಷ್ಮಿ ಪ್ರಸಾದವರು ಸ್ವಾಗತಿಸಿದರು.
ಶ್ರೀಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಪ್ರತಿನಿಧಿ ಶ್ರೀನಿವಾಸ್ ಪ್ರಸಾದ್ ವಂದಿಸಿದರು.
ಇದೆ ಸಂದರ್ಭದಲ್ಲಿ ಜಗದ್ಗುರು ಸಿದ್ಧಾರೂಢರ ಪಾದುಕಾ ಪಂಚಾಮೃತ ಅಭಿಷೇಕ 162ನೇ ರವಿವಾರದ ಸತ್ಸಂಗ ಕಾರ್ಯಕ್ರಮವು ಶ್ರೀ ಮಹಾಳಿಂಗೇಶ್ವರ ದೇವರ ದೇವಸ್ಥಾನದ ಗುರುಪ್ರಸಾದ್ ಸ್ವಾಮೀಜಿ ಸಮ್ಮುಖದಲ್ಲಿ ನಡೆಯಿತು.




















