ಬಳ್ಳಾರಿ / ಕಂಪ್ಲಿ : ರಾಯಚೂರು ಜಿಲ್ಲೆಯ ದಲಿತ ಮುಖಂಡ ಭೂಮಾನಂದನ ಕೊಲೆ ಮತ್ತು ಅಶ್ವಿನಿ ಅತ್ಯಾಚಾರ ಕೊಲೆ ಖಂಡಿಸಿ, ಸಮಾನ ಮನಸ್ಕರ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ, ಕಂದಾಯ ಅಧಿಕಾರಿ ಸುರೇಶ್‌ಗೆ ಮನವಿ ಪತ್ರ ಸಲ್ಲಿಸುವ ಮೂಲಕ ಸರ್ಕಾರಕ್ಕೆ ರವಾನಿಸಿದರು.
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಸುಂಕೇಶ್ವರಹಾಳ ಗ್ರಾಮದ ಯುವಕ ಭೂಮಾನಂದನ ಕೊಲೆ ಮತ್ತು ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮದ ಯುವತಿ ಅಶ್ವಿನಿ ಅತ್ಯಾಚಾರ ಮತ್ತು ಕೊಲೆಯನ್ನು ತೀವ್ರವಾಗಿ ಖಂಡಿಸಿದ್ದು, ದಿನೇ ದಿನೇ ದಲಿತರ ಮೇಲೆ ದೌರ್ಜನ್ಯಗಳು, ಕೊಲೆಗಳು, ಅತ್ಯಾಚಾರಗಳು ಸಂಭವಿಸುತ್ತಿದ್ದು ಇದಕ್ಕೆ ನೇರ ಸರ್ಕಾರವೇ ಹೊಣೆ ಹಾಗೂ ನೊಂದ ದಲಿತ ಕುಟುಂಬಗಳಿಗೆ ಸೂಕ್ತ ರಕ್ಷಣೆ ಮತ್ತು ಸರ್ಕಾರವು ಉದ್ಯೋಗ ಮತ್ತು ಪರಿಹಾರ ಕೊಡಬೇಕು. ಹಾಗೂ ಆರೋಪಿಗಳನ್ನು ಕೂಡಲೆ ಬಂಧಿಸಿ ಕಾನೂನಾತ್ಮಕವಾಗಿ ತನಿಖೆ ನಡೆಸಿ, ಈ ಕೃತ್ಯವನ್ನು ಮಾಡಿದವರಿಗೆ ಸಂಪೂರ್ಣ ವಿಚಾರಣೆ ನಡೆಸಿ ಆದಷ್ಟು ಬೇಗನೆ ಕಾನೂನಿನಡಿಯಲ್ಲಿ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು. ದಲಿತರ ಮೇಲಾಗುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟಲು ಕಾನೂನುಗಳಿದ್ದರೂ ತಪ್ಪಿತಸ್ತರ ಮೇಲೆ ಸೂಕ್ತ ಕ್ರಮಕ್ಕೆ ಮುಂದಾಗದಿರುವುದು ವಿಪರ್ಯಾಸ. ಹಾಗೂ ಅಪರಾದ ಪ್ರಕರಣಗಳು ಹೆಚ್ಚಾಗುತ್ತಾ ಇವೆ. ಅಲ್ಲದೆ ಅಪರಾಧಿ ಮನೋಭಾವನೆ ವ್ಯಕ್ತಿಗಳಲ್ಲಿ ಗಣನೀಯವಾಗಿ ಹೆಚ್ಚುತ್ತಿರುವುದು ದೇಶ ಮತ್ತು ರಾಜ್ಯದಲ್ಲಿ ಕಾನೂನು ಸೂವೈವಸ್ತೆ ಸಡಿಲಗೊಳುತ್ತಿರುವುದು ಆತಂಕದ ವಿಷಯ. ಇದಕ್ಕೆ ಸರ್ಕಾರವು ಕ್ರಮವಹಿಸಿ ತಡೆಗಟ್ಟಲು ಮುಂದಾಗಬೇಕೆಂದು ಸಮಾನ ಮನಸ್ಕರ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಹೆಚ್.ಮರಿಸ್ವಾಮಿ ಸಣಾಪುರ, ಎ.ಎಸ್.ಯಲ್ಲಪ್ಪ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಜಿ.ರಾಮಣ್ಣ, ಎ. ಲಕ್ಷ್ಮಿಪತಿ, ವಸಂತರಾಜ ಕಹಳೆ, ಚನ್ನಬಸುವ, ಶ್ರೀನಿವಾಸ, ರಾಮಸಾಗರ ಬಸವರಾಜ, ಹುಲುಗಪ್ಪ, ಮೆಟ್ರಿ ಬಸವರಾಜ, ರವಿ ಮಣ್ಣೂರು, ಬಸವರಾಜ, ತಿಪ್ಪೇಶ ಸೇರಿದಂತೆ ಅನೇಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















