ಮಳೆ ಕೊರತೆಯಿಂದ ರೈತರು ಕಂಗಾಲು : ಬೆಳೆ ನಷ್ಟಕ್ಕೆ ಪರಿಹಾರ ನೀಡಲು ಆಗ್ರಹ
ಸಿರುಗುಪ್ಪ: ಹಚ್ಚೊಳ್ಳಿ ಹೋಬಳಿ ಹೊರತುಪಡಿಸಿ ತಾಲೂಕಿನ ಬಹುತೇಕ ಕಡೆ ಮುಂಗಾರು ಮಳೆ ಕೈಕೊಟ್ಟಿದ್ದು, ರೈತರು ಬೆಳೆ ಉಳಿಸಿಕೊಳ್ಳಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಸಿರುಗುಪ್ಪ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಿ, ನಷ್ಟಕ್ಕೊಳಗಾದ ರೈತರಿಗೆ ಬೆಳೆ ಪರಿಹಾರ ನೀಡಬೇಕು ಎಂದು ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ಸರ್ಕಾರಕ್ಕೆ ಒತ್ತಾಯಿಸಿದರು.
ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನಲ್ಲಿ ಸತತ ಮೂರು ತಿಂಗಳಿಂದ ಸಮರ್ಪಕ ಮಳೆಯಾಗಿಲ್ಲ. ಇದರಿಂದ ಕೃಷಿ ಕೆಲಸಗಳು ಕುಂಠಿತಗೊಂಡಿದ್ದು, ರೈತರು ಹಾಕಿದ ಬಂಡವಾಳವೂ ಕೈತಪ್ಪುವ ಸ್ಥಿತಿ ನಿರ್ಮಾಣವಾಗಿದೆ. ಉತ್ತರ ಕರ್ನಾಟಕದ ಹಲವು ಭಾಗಗಳಲ್ಲೂ ಮಳೆ ಕೊರತೆಯಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ ಎಂದರು.
ತಾಲೂಕಿನ ಹಚ್ಚೊಳ್ಳಿ ಹೋಬಳಿಯಲ್ಲಿ ಮಾತ್ರ ತುಸು ಮಳೆಯಾಗಿದೆ. ಆದರೆ ತೆಕ್ಕಲಕೋಟೆ, ಸಿರಿಗೇರಿ ಹಾಗೂ ಕರೂರು ಹೋಬಳಿಗಳಲ್ಲಿ ಮಳೆ ಕೊರತೆ ತೀವ್ರವಾಗಿದೆ. ಹೀಗಿದ್ದರೂ ಸಿರುಗುಪ್ಪವನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸದಿರುವುದು ರೈತರ ನೋವಿಗೆ ಸರಕಾರ ಸ್ಪಂದಿಸದಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಗರಿ ನದಿ ಪಾತ್ರದಲ್ಲಿ ಬಿತ್ತನೆ ಮಾಡಿದ್ದ ರೈತರಿಗೆ ಮಳೆ ಕೊರತೆಯಿಂದ ಬೆಳೆ ಉಳಿಸಿಕೊಳ್ಳುವುದು ಕಷ್ಟವಾಗಿದೆ. ನದಿ ಹಾಗೂ ಕಾಲುವೆ ಪಾತ್ರದಲ್ಲಿ ನಾಟಿ ಮಾಡಿದ್ದ ಭತ್ತದ ಸಸಿಗಳು ಸಹ ನೀರಿನ ಕೊರತೆಯಿಂದ ಒಣಗುವ ಸ್ಥಿತಿಯಲ್ಲಿವೆ. ಇದರಿಂದ ರೈತರು ದೊಡ್ಡ ಪ್ರಮಾಣದ ನಷ್ಟ ಅನುಭವಿಸುವಂತಾಗಿದೆ ಎಂದು ಹೇಳಿದರು.
ತಾಲೂಕಿನಲ್ಲಿ ಸುಮಾರು 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮತ್ತು ನಾಟಿ ಮಾಡಲಾಗಿದೆ ಎಂದು ಅಧಿಕಾರಿಗಳು ಸರಕಾರಕ್ಕೆ ವರದಿ ನೀಡಿದ್ದಾರೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕೃಷಿ ನಡೆದಿರುವಾಗ ಬೆಳೆ ನಷ್ಟದ ವಾಸ್ತವ ಸ್ಥಿತಿಯನ್ನು ಸರಕಾರದ ಗಮನಕ್ಕೆ ತಂದು ಪರಿಹಾರ ಕೊಡಿಸುವಲ್ಲಿ ಅಧಿಕಾರಿಗಳು ವಿಫಲರಾಗಿರುವುದು ಏಕೆ ಎಂದು ಪ್ರಶ್ನಿಸಿದರು. ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.
ಸರಕಾರ ಕೂಡಲೇ ತಾಲೂಕಿನಾದ್ಯಂತ ಬೆಳೆ ನಷ್ಟದ ಪರಿಶೀಲನೆ ನಡೆಸಬೇಕು. ನಷ್ಟದ ಪ್ರಮಾಣವನ್ನು ಸರಿಯಾಗಿ ಗುರುತಿಸಿ, ಸಿರುಗುಪ್ಪವನ್ನು ಬರಪೀಡಿತ ತಾಲೂಕು ಎಂದು ಘೋಷಿಸಬೇಕು. ಸಂಕಷ್ಟದಲ್ಲಿರುವ ರೈತರಿಗೆ ಬೆಳೆ ನಷ್ಟ ಪರಿಹಾರ ಹಾಗೂ ಅಗತ್ಯ ಹಣಕಾಸಿನ ನೆರವು ಒದಗಿಸಬೇಕು ಎಂದು ಸೋಮಲಿಂಗಪ್ಪ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಕೆ. ಮಲ್ಲಿಕಾರ್ಜುನಸ್ವಾಮಿ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ವೀರನಗೌಡ ಬೆಳಗಲ್, ಶಿವಪ್ಪ ಬೆಳಗಲ್, ಬಸವರಾಜ ಬಲಕುಂದಿ, ಶರಣಬಸವ, ಹನುಮಂತ ಉರಕುಂದ, ಡಿ. ನೆಣಿಕಪ್ಪ, ಬೆಟ್ಟಪ್ಪ ಹಾಗೂ ವೆಂಕೋಬ ಇದ್ದರು.
ವರದಿ : ಮಸೀದಿ ,ಅಬ್ದುಲ್ ಗೌಸ್ ,ಸಿರುಗುಪ್ಪ




















