ಬಳ್ಳಾರಿ / ಕಂಪ್ಲಿ : ಇಲ್ಲಿನ ಕೋಟೆಯ ಶ್ರೀ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಅತ್ಯಂತ ಸಡಗರ, ಸಂಭ್ರಮ ಹಾಗೂ ಸಾಂಪ್ರದಾಯಿಕ ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು.
ಕಾರ್ಯಕ್ರಮದ ನೇತೃತ್ವವನ್ನು ವಹಿಸಿ ಮಾತನಾಡಿದ ಶಾಲೆಯ ಮುಖ್ಯಗುರುಗಳಾದ ಬಡಿಗೇರ್ ಜಿಲಾನಸಾಬ್ ಅವರು, “ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳ ಆಚರಣೆಯು ಸೌಹಾರ್ದತೆ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸುತ್ತದೆ. ವಿದ್ಯಾರ್ಥಿ ದೆಸೆಯಲ್ಲೇ ಮಕ್ಕಳಿಗೆ ಇಂತಹ ಸಾಂಸ್ಕೃತಿಕ ಹಿನ್ನೆಲೆಯ ಪರಿಚಯ ಮಾಡಿಸುವುದು ಇಂದಿನ ಅಗತ್ಯವಾಗಿದೆ,” ಎಂದು ತಿಳಿಸಿದರು.
ಆಕರ್ಷಿಸಿದ ರಾಧೆ-ಕೃಷ್ಣರ ವೇಷ ಭೂಷಣ : ಹಬ್ಬದ ಅಂಗವಾಗಿ ಶಾಲೆಯ ಪುಟ್ಟ ಮಕ್ಕಳು ಶ್ರೀಕೃಷ್ಣ ಮತ್ತು ರಾಧೆಯರ ಆಕರ್ಷಕ ವೇಷಭೂಷಣಗಳನ್ನು ಧರಿಸಿ ಬಂದು ಎಲ್ಲರ ಗಮನ ಸೆಳೆದರು.
ಮಕ್ಕಳ ಮುದ್ದಾದ ನೃತ್ಯ ಮತ್ತು ಸಡಗರ ಹಬ್ಬದ ಕಳೆಯನ್ನು ಹೆಚ್ಚಿಸಿತ್ತು. ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಕೆ.ಶ್ವೇತಾ, ಜೆ.ಅಕ್ಷತಾ, ಕೊಲ್ಕರ್ ಉಮಾ, ವರ್ಷಾ ಮಜುಂದಾರ್, ಮಠದ ಸುನೀತಾ, ಡಿ.ಉಮಾ, ಖಜಾಬನಿ ಹಾಗೂ ಸಹಾಯಕಿ ಶರ್ಮಾಸಬಿ ಸೇರಿದಂತೆ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿ: ಜಿಲಾನಸಾಬ್ ಬಡಿಗೇರ್




















