ವರದಿ : ಜಿಲಾನಸಾಬ್ ಬಡಿಗೇರ್
ಬಳ್ಳಾರಿ : ಪತ್ನಿಯ ಕಾಟ ಹಾಗೂ ಕೌಟುಂಬಿಕ ಕಲಹಕ್ಕೆ ಬೇಸತ್ತ ವ್ಯಕ್ತಿಯೊಬ್ಬ ವಿದ್ಯುತ್ ಟ್ರಾನ್ಸ್‌ಫಾರ್ಮರ್ (TC) ಏರಿ ಆತ್ಮಹತ್ಯೆಗೆ ಯತ್ನಿಸಿದ ವಿಲಕ್ಷಣ ಘಟನೆ ಬಳ್ಳಾರಿ ನಗರದ ಬ್ರೂಸ್‌ಪೇಟೆ ಪೊಲೀಸ್ ಠಾಣೆಯ ಮುಂಭಾಗದಲ್ಲಿ ನಡೆದಿದೆ. ಬಳ್ಳಾರಿಯ ಮುಂಡರಗಿ ನಿವಾಸಿಯಾದ ಇಸ್ಮಾಯಿಲ್ ಎಂಬಾತನೇ ಈ ಹೈಡ್ರಾಮಾ ಸೃಷ್ಟಿಸಿದ ಭೂಪ.
ಠಾಣೆಯಿಂದ ಓಡಿ ಬಂದ ಪತಿ :
ಇಸ್ಮಾಯಿಲ್ ಹಾಗೂ ಆತನ ಪತ್ನಿ ನಡುವೆ ದೀರ್ಘಕಾಲದಿಂದ ದಾಂಪತ್ಯ ಕಲಹ ನಡೆದಿತ್ತು. ಈ ಸಂಬಂಧ ದೂರು ನೀಡಲು ಇಬ್ಬರೂ ಬ್ರೂಸ್‌ಪೇಟೆ ಪೊಲೀಸ್ ಠಾಣೆಗೆ ಬಂದಿದ್ದರು. ಪೊಲೀಸರು ಇಬ್ಬರನ್ನೂ ಕೂರಿಸಿ ವಿಚಾರಣೆ ನಡೆಸುತ್ತಿದ್ದಾಗ, ಪತ್ನಿಯ ಆರೋಪಗಳಿಂದ ತೀವ್ರ ಬೇಸತ್ತ ಇಸ್ಮಾಯಿಲ್ ಇದ್ದಕ್ಕಿದ್ದಂತೆ ಠಾಣೆಯಿಂದ ಹೊರಗೆ ಓಡಿ ಬಂದಿದ್ದಾನೆ.
“ನನಗೆ ಹೆಂಡತಿ ಕಾಟ ತಡೆಯಲು ಸಾಧ್ಯವಿಲ್ಲ, ನಾನು ಸಾಯುತ್ತೇನೆ” ಎಂದು ಕಿರುಚಾಡುತ್ತಾ, ಪೊಲೀಸ್ ಠಾಣೆಯ ಎದುರೇ ಇದ್ದ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಮೇಲೇರಿ ಕುಳಿತಿದ್ದಾನೆ. ಇದನ್ನು ನೋಡಿ ಪೊಲೀಸರು ಹಾಗೂ ಸಾರ್ವಜನಿಕರು ಕೆಲಕಾಲ ದಿಕ್ಕೇ ತೋಚದಂತಾಗಿದ್ದರು.
ತಪ್ಪಿದ ಭಾರಿ ಅನಾಹುತ :
ಇಸ್ಮಾಯಿಲ್ ಟ್ರಾನ್ಸ್‌ಫಾರ್ಮರ್ ಹತ್ತುತ್ತಿದ್ದಂತೆಯೇ ಎಚ್ಚೆತ್ತ ಪೊಲೀಸರು ಮತ್ತು ಸ್ಥಳೀಯರು ಕೂಡಲೇ ಜೆಸ್ಕಾಂ (GESCOM) ಅಧಿಕಾರಿಗಳನ್ನು ಸಂಪರ್ಕಿಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಸಮಯ ಪ್ರಜ್ಞೆಯಿಂದಾಗಿ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.ಟ್ರಾನ್ಸ್‌ಫಾರ್ಮರ್ ಮೇಲೆ ಕುಳಿತು ಸಮಾಧಾನ ಕಳೆದುಕೊಂಡಿದ್ದ ಇಸ್ಮಾಯಿಲ್‌ನನ್ನು ಪೊಲೀಸರು ಹರಸಾಹಸ ಪಟ್ಟು, ಮಾತುಕತೆಯ ಮೂಲಕ ಮನವೊಲಿಸಿ ಸುರಕ್ಷಿತವಾಗಿ ಕೆಳಗೆ ಇಳಿಸಿದ್ದಾರೆ. ಸದ್ಯ ಆತನನ್ನು ವಶಕ್ಕೆ ಪಡೆದಿರುವ ಬ್ರೂಸ್‌ಪೇಟೆ ಪೊಲೀಸರು ಆಪ್ತಸಮಾಲೋಚನೆ (Counseling) ನಡೆಸುತ್ತಿದ್ದು, ಸಾರ್ವಜನಿಕ ಶಾಂತಿಭಂಗದ ಹಿನ್ನೆಲೆಯಲ್ಲಿ ಕಾನೂನು ಕ್ರಮ ಕೈಗೊಂಡಿದ್ದಾರೆ.




















