
ಬಳ್ಳಾರಿ / ಕಂಪ್ಲಿ : ಆಧುನಿತ ಭಾರತದಲ್ಲಿ ಪಿಒಪಿ ಅಬ್ಬರಕ್ಕೆ ಅಂತು ಇಂತೂ ಕಡಿವಾಣ ಬಿದ್ದಿತ್ತಾದರೂ, ಕೆಲವೊಂದು ಕಲಬರಕೆಯ ಗಣಪತಿಗಳು ಹೊರ ಹೊಮ್ಮುತ್ತಿರುವುದಕ್ಕೆ ಅಧಿಕಾರಿಗಳ ಗಮನ ಇಲ್ಲದಂತಾಗಿದ್ದು, ಈ ಬಾರಿಯಾದರೂ ಪಿಒಪಿಗೆ ಬಾಯ್ ಹೇಳುತ್ತಾ, ಕಂಪ್ಲಿ ತಾಲೂಕು ಮಣ್ಣಿನ ಗಣಪನ ಸ್ವಾಗತಕ್ಕೆ ಸಿದ್ಧವಾಗಿದೆ.
ಸೆ.14ರಂದು ಗಣಪತಿ ಚತುರ್ಥಿ ದಿನದಂದು ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಸಾರ್ವಜನಿಕ ಸ್ಥಳ ಹಾಗೂ ಮನೆಗಳಲ್ಲಿ ವಿಘ್ನನಿವಾರಕ ಗಣೇಶನ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭಗೊಂಡಿದೆ.
ಇನ್ನೇನು ಪ್ರತಿಷ್ಠಾಪನೆಗೆ ಒಂದು ದಿನ ಬಾಕಿ ಇದ್ದು, ಈಗಾಗಲೇ ವೈವಿಧ್ಯಮಯ ಗಣೇಶ ಮೂರ್ತಿಗಳಿಗೆ ಅಂತಿಮ ರೂಪ ಬಂದಿದೆ. ತಿರುಪತಿ ವೆಂಕಟೇಶ್ವರ, ಮಹಾರಾಜ, ಯಂತ್ರೋದ್ಧಾರಕ ಆಂಜನೇಯ, ಪುರಿ ಜಗನ್ನಾಥ, ಛತ್ರಪತಿ ಶಿವಾಜಿ, ಚಿಂತಾಮಣಿ, ತ್ರಿನಾಥ, ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಸೇರಿದಂತೆ ವೈವಿದ್ಯಮಯ ಛದ್ಮವೇಷಧಾರಿ ಗಣಪತಿಗಳು ತಯಾರಾಗಿ ನಿಂತಿವೆ.
ಕೊಲ್ಕತ್ತದ ಗಂಗಾನದಿಯ ಜಿನುಗು ಮಣ್ಣು, ಬಳ್ಳಾರಿಯ ಕೆಂಪು ಮಣ್ಣು, ಬೊಂಬೆ ತಯಾರಿಕೆಗೆ ಹೆಸರಾದ ಕಿನ್ನಾಳದ ವಿಶೇಷ ಮಣ್ಣು ಹಾಗೂ ತುಂಗಭದ್ರಾ ಜಲಾಯದ ಹತ್ತಿರದ ಮಣ್ಣುಗಳೊಂದಿಗೆ ಭತ್ತದ ಹುಲ್ಲು, ಬಿದಿರು,ಸೆಣಬಿನ ನಾರು, ಹತ್ತಿಯ ಬಟ್ಟೆ,ನೀರು ಬಣ್ಣ ಸೇರಿ ಸುಲಭವಾಗಿ ನೀರಿನಲ್ಲಿ ಕರುಗುವ ಪದಾರ್ಥಗಳನ್ನು ಉಪಯೋಗಿಸಿ 3 ರಿಂದ 10 ಅಡಿಗಳವರೆಗಿನ ಗಣಪತಿ ಮೂರ್ತಿಗಳನ್ನು ಕಳೆದ 4 ತಿಂಗಳುಗಳಿಂದ ತಯಾರಿಸುತ್ತಿದ್ದಾರೆ.
ವಿಷ, ರಾಸಾಯನಿಕ ರಹಿತ ವಸ್ತುಗಳನ್ನು ಉಪಯೋಗಿಸಿ ಮೂರ್ತಿ ತಯಾರಿಸುತ್ತಿದ್ದು, ಯಾವುದೇ ನೀರಿನಲ್ಲಿ ವಿಸರ್ಜನೆಗೊಂಡ ಕೆಲ ಸಮಯದಲ್ಲಿಯೆ ವಿಘಟನೆ ಹೊಂದುತ್ತವೆ. ನೀರು ಹಾಗೂ ಪರಿಸರಕ್ಕೆ ಯಾವುದೇ ರೀತಿಯ ಮಾಲಿನ್ಯವಾಗದ ವಸ್ತುಗಳನ್ನು ಬಳಸಲಾಗಿದೆ.
ವೃತ್ತಿ ಹಾಗೂ ದರ ಪೈಪೋಟಿ ಎದುರಿಸಲಾಗದೆ ಕೊಲ್ಕತ್ತದಿಂದ ಕಂಪ್ಲಿಗೆ ಬಂದು ಗಣಪತಿ ತಯಾರಿಕೆಗೆ ಬಂದಿರುವುದಾಗಿ ಕಲಾವಿದರಾದ ಪಾಲಾಸ್ ಪಾಲ್, ಸೋಮನಾಥ್ ತಿಳಿಸಿದರು.
ಇನ್ನು ಪಟ್ಟಣದಲ್ಲಿ ಆರಂಭದಿಂದಲೂ ಚಿತ್ರಗಾರ ಕುಟುಂಬದವರು ಸಹಿತ ಗಣಪತಿ ಮೂರ್ತಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದು, ಬೆಲೆ ಏರಿಕೆಯ ಮಧ್ಯದಲ್ಲಿ ಪರಿಸರ ಸ್ನೇಹಿ ಗಣಪತಿ ತಯಾರಿಕೆ ತ್ರಾಸದಾಯಕವಾಗಿದೆ. ಪರಿಸರಕ್ಕೆ ಹಾನಿಯಾಗದಂತೆ ಮಣ್ಣು ಮತ್ತು ಬಣ್ಣಗಳನ್ನು ಬಳಸಬೇಕಾಗಿದೆ.ಈ ಹಿನ್ನೆಲೆಯಲ್ಲಿಯೇ ನಾವು ಸಹಿತ ಪರಿಸರದ ಕಾಳಜಿಯಿಂದಾಗಿ ಉತ್ತಮವಾದ ಮೃದುವಾದ ಮಣ್ಣನ್ನು ತಂದು ಅದನ್ನು ಹದಗೊಳಿಸಿ ಗಣೇಶ ಮೂರ್ತಿಗಳನ್ನು ತಯಾರಿಸಿದ್ದೇವೆಂದು ಕುಂಬಾರ ಪ್ರಕಾಶ ಹಾಗೂ ಶ್ಯಾಮಲಮ್ಮ ತಿಳಿಸಿದರು.
ಬೇಡಿಕೆ :
ಗಣಪತಿ ಪ್ರತಿಷ್ಠಾಪನೆಗಾಗಿ ಯುವಕರು, ಜನರು ಗಣೇಶನ ಖರೀದಿಗಿ ಹೆಚ್ಚಿನ ಬೇಡಿಕೆ ಬಂದಿದೆ. 200 ರೂ.ಗಳಿಂದ ಆರಂಭಿಸಿ 20 ಸಾವಿರದ ವರೆಗಿನ ಗಣೇಶ ಮೂರ್ತಿಗಳನ್ನು ತಯಾರಿಸಿದ್ದು ಕಂಪ್ಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳವರು ಗಣಪತಿ ಮೂರ್ತಿಗಳಿಗೆ ಬೇಡಿಕೆಯಾಗಿದೆ.
ಬೃಹತ್ ಗಣಪತಿ ಮೂರ್ತಿಗಳು ಅಳತೆ, ಬಣ್ಣಗೆಡದೆ ನೈಜವಾಗಿ ಸುಂದರವಿದ್ದು, ವಿವಿಧೆಡೆಗಳಿಂದ ಬಂದು ಗಣಪತಿ ತೆಗೆದುಕೊಂಡು ಹೋಗುತ್ತಾರೆ. ಕಲಾವಿದರಿಗೆ ಗಡಿ, ನುಡಿ, ಧರ್ಮಗಳ ಹಂಗಿಲ್ಲ ಎಂದು ಪಟ್ಟಣದಲ್ಲಿ ಗಣಪತಿ ಪ್ರತಿಷ್ಠಾಪಿಸುತ್ತಿರುವ ಎಸ್.ಎಂ.ಗುರು, ಜಗದೀಶ್, ಇಂದ್ರಜಿತ್ ಸಿಂಗ್, ಮನೋಜ ಹಾಗೂ ಇತರರು ತಿಳಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್




















