
ಕಂಪ್ಲಿ : ತಾಲೂಕಿನ ಮುದ್ದಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ 2ನೇ ವಾರ್ಡಿನ ವಸತಿ ನಿವೇಶನದಲ್ಲಿ ನಿಯಮಬಾಹಿರವಾಗಿ ಅಕ್ರಮ ಹಾಗೂ ಅನಧಿಕೃತ ದನಕರುಗಳ ಫಾರಂ (ಡೈರಿ ಫಾರ್ಮ್) ನಡೆಸಲಾಗುತ್ತಿದ್ದು, ಸ್ಥಳೀಯ ನಿವಾಸಿಗಳು ಹಾಗೂ ಶಾಲಾ ಮಕ್ಕಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಮಾಜ ಸೇವಾ ಕಾರ್ಯಕರ್ತರ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ (PDO) ಅಧಿಕೃತ ದೂರು ಸಲ್ಲಿಸಿರುವ ವೇದಿಕೆಯ ಪದಾಧಿಕಾರಿಗಳು, ವಸತಿ ವಲಯದಲ್ಲಿ ವಾಣಿಜ್ಯ ಉದ್ದೇಶದ ಡೈರಿ ಫಾರ್ಮ್ ನಡೆಸುತ್ತಿರುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿದ್ದಾರೆ.
“ಡೈರಿ ಫಾರ್ಮ್ ಮಾಲೀಕರು ದನಕರುಗಳ ತ್ಯಾಜ್ಯವನ್ನು (ಸಗಣಿ ಮತ್ತು ಮೂತ್ರ) ಸಮರ್ಪಕವಾಗಿ ವಿಲೇವಾರಿ ಮಾಡದೆ ರಸ್ತೆಯ ಪಕ್ಕದಲ್ಲೇ ಸುರಿಯುತ್ತಿದ್ದಾರೆ. ರಸ್ತೆಯಲ್ಲೇ ಒಣ ಹುಲ್ಲು ಮತ್ತು ಕಲ್ಲು ಬೆಂಚುಗಳನ್ನು ಹಾಕಿ ಅತಿಕ್ರಮಣ ಮಾಡಲಾಗಿದೆ. ಇದರಿಂದ ಇಡೀ ಪ್ರದೇಶದಲ್ಲಿ ತೀವ್ರ ದುರ್ವಾಸನೆ ಹರಡಿದ್ದು, ಸೊಳ್ಳೆ ಹಾಗೂ ನೊಣಗಳ ಕಾಟ ವಿಪರೀತವಾಗಿದೆ. ವಸತಿ ವಲಯದಲ್ಲಿ ಇಂತಹ ವಾಣಿಜ್ಯ ಚಟುವಟಿಕೆ ನಡೆಸಲು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಯಡಿ ಅವಕಾಶವಿಲ್ಲದಿದ್ದರೂ ನಿಯಮಗಳನ್ನು ಗಾಳಿಗೆ ತೂರಲಾಗಿದೆ” ಎಂದು ನಿವಾಸಿಗಳು ದೂರಿದ್ದಾರೆ.
40 ಮೀಟರ್ ದೂರದಲ್ಲಿದೆ ಸರ್ಕಾರಿ ಶಾಲೆ :
ಈ ಅಕ್ರಮ ಫಾರಂನಿಂದ ಕೇವಲ 40 ಮೀಟರ್ ಅಂತರದಲ್ಲೇ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದ್ದು, 50 ರಿಂದ 60 ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪ್ರತಿದಿನ ಇದೇ ದುರ್ವಾಸನೆಯಲ್ಲಿ ಕಾಲ ಕಳೆಯುವಂತಾಗಿದೆ. ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದ್ದು, ಮುಗ್ಧ ಮಕ್ಕಳ ಆರೋಗ್ಯಕ್ಕೆ ಯಾರು ಹೊಣೆ ಎಂದು ಪೋಷಕರು ಪ್ರಶ್ನಿಸಿದ್ದಾರೆ.
ಪಂಚಾಯತಿ ಅಧಿಕಾರಿಗಳು ತಕ್ಷಣವೇ ಸ್ಥಳ ಪರಿಶೀಲನೆ ನಡೆಸಿ, ಸಾರ್ವಜನಿಕ ಉಪದ್ರವ ನೀಡುತ್ತಿರುವ ಈ ಅನಧಿಕೃತ ಫಾರಂ ಅನ್ನು ತೆರವುಗೊಳಿಸಬೇಕು. ಅಲ್ಲದೆ, ಸಾರ್ವಜನಿಕರ ಆರೋಗ್ಯದ ಜೊತೆ ಆಟವಾಡುತ್ತಿರುವ ಮಾಲೀಕರ ಮೇಲೆ ಬಿಎನ್ಎಸ್ (BNS) ಅಥವಾ ಸಿಆರ್ಪಿಸಿ ಸೆಕ್ಷನ್ 133ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು ಎಂದು ಸಮಾಜ ಸೇವಾ ಕಾರ್ಯಕರ್ತರ ವೇದಿಕೆ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್




















