ಕವಿಯ ಈ ಸಾಲು ಪ್ರತಿ ನಿತ್ಯ ಸ್ಮರಿಸಬೇಕಾದ ಅನಿವಾರ್ಯತೆಯಲ್ಲಿ ನೀವು ನಾವಿದ್ದೇವೆ. ಈ ಮಾತು ಹೇಳಲು ವಿಷಾದವಾದರೂ ಇದೆ ಸತ್ಯ. ಕನ್ನಡ ನಾಡಿನಲ್ಲಿ ಕನ್ನಡ ಮತ್ತು ಕನ್ನಡಿಗರಿಗೆ ಸಿಗುತ್ತಿರುವ ಮಾನ್ಯತೆಯನ್ನು ನೆನೆದಾಗಲೆಲ್ಲ. ತಿಂದ ಮನೆಗೆ ಎರಡು ಬಗೆಯಬಾರದು ಎಂಬ ಹಿರಿಯರ ಮಾತು ನೆನಪಾಗುತ್ತದೆ. ಬಹುಶಃ ನಮ್ಮ ಪೂರ್ವಿಕರಿಗೆ ಮಾನವರ ನಡೆಯ ಬಗ್ಗೆ ಮೊದಲೇ ಅಂದಾಜು ಇತ್ತು ಎನಿಸುತ್ತದೆ. ಆ ಕಾರಣದಿಂದಲೇ ಇಂತಹ ಮಹತ್ವದ ಗಾದೆ ಮಾತುಗಳನ್ನು ರಚಿಸಿಕೊಟ್ಟಿದ್ದಾರೆ. ಕನ್ನಡದ ಬಗೆಗೆ ಮಾತನಾಡುವುದನ್ನು ಬಿಟ್ಟು ಈ ರೀತಿ ಯಾಕೆ ಮಾತಾಡುತ್ತಿದ್ದಾರೆ ಎಂದು ಒಂದು ಕ್ಷಣ ಓದುತ್ತಿರುವ ನಿಮಗೆ ಅನಿಸಬಹುದು. ಆದರೆ ಕನ್ನಡ ಕಲಿಸುವ ವರ್ಗಕ್ಕೆ ಸೇರಿದ ನನಗೆ ನಿತ್ಯ ಎದುರಾಗುವ ಅನೇಕ ಸಂದರ್ಭಗಳು ಈ ರೀತಿಯ ಮಾತುಗಳಿಗೆ ಕಾರಣವಾಗಿವೆ.
ಕನ್ನಡಕ್ಕೆ ಕನ್ನಡನಾಡಿನಲ್ಲಿ ದೊರೆಯುತ್ತಿರುವ ಮಾನ್ಯತೆ… ಹೇಗಿದೆ? ಎಷ್ಟಿದೆ? ಅಂತ ನೋಡೋಣ್ವಾ… ಸರಿ ಒಂದೊಂದಾಗಿ ನೋಡೋಣ ಬನ್ನಿ…
ಮೊದಲನೆಯದು: ಇತ್ತೀಚೆಗೆ ಫೇಸ್ ಬುಕ್ ನಲ್ಲಿ ಒಂದು ಸುದ್ದಿ ಹರಿದಾಡುತ್ತಿದೆ. ಅದು ಯಾವುದು ಅಂದ್ರೆ ಕರ್ನಾಟಕದಲ್ಲಿ ಸ್ಥಾಪಿಸಲಾದ ದೊಡ್ಡ ದೊಡ್ಡ ಐಟಿ ಕಂಪನಿಗಳಲ್ಲಿ ಕನ್ನಡ ಮಾತನಾಡುವವರಿಗೆ ಕೆಲಸ ಕೊಡುತ್ತಿಲ್ಲ. ಅಲ್ಲಿ ಕನ್ನಡಿಗರಿಗಿಂತ ಕನ್ನಡೇತರರಿಗೆ ಮಾನ್ಯತೆ ಹೆಚ್ಚು ಎಂಬುದು. ಈ ಪ್ರವೃತ್ತಿಗೆ ಸಾವಿರಾರು ಕಾರಣಗಳಿರಬಹುದು. ಆದ್ರೆ ನಮ್ಮ ನೆಲದಲ್ಲಿ ನೆಲೆಸಿ ನಮ್ಮ ಮಣ್ಣಿನಲ್ಲಿ ಬೆಳೆಯುವ ಅನ್ನವನ್ನು ತಿನ್ನುತ್ತಾ ಕನ್ನಡಿಗರಿಗೆ ದ್ರೋಹ ಬಗೆಯುತ್ತಿದ್ದಾರೆ. ಇದು ಕನ್ನಡಿಗರ ಪಾಲಿಗೆ ಅಪಾಯಕಾರಿ ಬೆಳವಣಿಗೆ. ಇಂತಹ ಸಮಸ್ಯೆಗಳನ್ನು ಚಿಗುರಿನಲ್ಲೆ ಚಿವುಟ್ಹಾಕದಿದ್ದರೆ. ನಾಳೆ ದಿನ ಬೆಳೆದು ಹೆಮ್ಮರವಾಗಿ ನಮಗೆ ಮೂಲವಾಗಬಹುದು. ಆದ್ದರಿಂದ ಅನ್ಯಭಾಷೆಯ ಅಮಲಿನಿಂದ ಕನ್ನಡಿಗರು ಎಚ್ಚೆತ್ತುಕೊಳ್ಳಬೇಕಿದೆ.
ಎರಡನೆಯದು ಶಿಕ್ಷಣ ಕ್ಷೇತ್ರ. ಶಿಕ್ಷಣ ಎನ್ನುವುದು ನಮ್ಮ ಬದುಕಿನಲ್ಲಿ ಎಷ್ಟು ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ನಮ್ಮೆಲ್ಲರಿಗೂ ಗೊತ್ತಿರುವ ಸಂಗತಿ. ಅಂತಹ ಕ್ಷೇತ್ರದಲ್ಲಿ ಕನ್ನಡದ ಸ್ಥಾನವೇನು? ಎಂಬ ಪ್ರಶ್ನೆಗೆ ಶೂನ್ಯವೇ ಉತ್ತರ. ಜ್ಞಾನಾರ್ಜನೆಗಾಗಿ ಒಂದಲ್ಲದಿದ್ದರೆ ನಮ್ಮ ಸಾಮರ್ಥ್ಯಾನುಸಾರ ಎಷ್ಟಾದರೂ ಭಾಷೆಗಳನ್ನು ಕಲಿಯಲು ಸ್ವಾತಂತ್ರ್ಯವಿದೆ. ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಕಲಿಯುವ ಉದ್ದೇಶ ಜ್ಞಾನವೆಂಬುದು ಯಾವ ಮೂಲದಿಂದ ಬಂದರೂ ಅದನ್ನ ಸ್ವೀಕರಿಸಿ ಅರಿವನ್ನು ಹೆಚ್ಚಿಸಿಕೊಳ್ಳುವ ಕಾರಣಕ್ಕಾಗಿ. ಆದ್ರೆ ಆ ಉದ್ದೇಶ ಈಡೇರಿದೆ ನಾ ಎಂದರೆ ಇಲ್ಲವೆಂದೆ ಹೇಳಬಹುದು. ಇಲ್ಲಿ ಅನ್ಯಭಾಷೆ ಎಂದಾಗ ಮೊದಲ ಸ್ಥಾನದಲ್ಲಿ ನಿಲ್ಲುವುದು ಇಂಗ್ಲಿಷ್ ಭಾಷೆ. ಇಂಗ್ಲಿಷ್ ಕಲಿತಲೆ ಸಾಕು ಜಗತ್ತಿನ ಯಾವ ಮೂಲೆಯಲ್ಲಾದರೂ ಹೋಗಿ ಬದುಕು ಕಟ್ಟಿಕೊಳ್ಳಬಹುದು. ಇಂಗ್ಲಿಷ್ ಮಾತನಾಡಿದರೆ ಮಾರ್ಯಾದೆ ಕೊಡುತ್ತಾರೆ. ಇಂಗ್ಲಿಷ್ ಮಾತನಾಡದೆ ಕನ್ನಡದಲ್ಲಿ ಮಾತನಾಡಿದರೆ ಹಳ್ಳಿಗುಗ್ಗು ಅಂತ ಕರಿತಾರೆ. ಇಂತಹ ಅರ್ಥಹೀನ ವಿಚಾರಗಳಿಗೆ ಜನ ಇಂದು ಬಲಿಯಾಗುತ್ತಿದ್ದಾರೆ. ಅಲ್ಲದೆ
ಕನ್ನಡದಲ್ಲಿ ಮಾತನಾಡಿದರೆ ಅವಮಾನ. ಕನ್ನಡದಲ್ಲಿ ಕಲಿತರೆ ಪ್ರಯೋಜನವಿಲ್ಲ. ಕನ್ನಡ ತಗೊಂಡು ಏನ್ಮಾಡ್ತೀರಾ ? ಇಂತಹ ಮಾತುಗಳು ಸಹ ಶೈಕ್ಷಣಿಕ ವಲಯದಲ್ಲಿ ಕೇಳಿಬರುತ್ತಿವೆ. ಇಂತಹ ಮನಸ್ಥಿತಿ ಹೊಂದಿರುವವರು ಈ ಕ್ಷೇತ್ರದಲ್ಲಿ ಯಾವ ರೀತಿಯ ಕೊಡುಗೆಯನ್ನು ಕೊಡಬಹುದು ಎಂಬ ಅನುಮಾನ ನನಗೆ ಇದ್ದೇಇದೆ. ಆದರೂ ನಿಂತಿರುವ ನೆಲವನ್ನು, ತಾಯಿ ನುಡಿಯನ್ನು ಕೀಳಾಗಿ ಕಾಣುವ ಇವರು ಹೆತ್ತ ತಾಯಿಯನ್ನು ಹೇಗೆ ನೋಡಿಯಾರು ಎಂಬ ಗುಮಾನಿ ನನ್ನ ತಲೆಯಲ್ಲಿ ದೂರಿದೆ… ಇರಲಿ ಅದು ಅವರ ವೈಯಕ್ತಿಕ ವಿಚಾರ. ಆದರೆ ಅಂತಹವರು ಕನ್ನಡಾಂಬೆಯ ಬಗ್ಗೆ ಅವಹೇಳನ ಮಾಡುವ ಮುನ್ನ ಆ ಅರ್ಹತೆ ನನಗೆ ಇದೆಯೇ? ಎಂದು ಪ್ರಶ್ನಿಸಿಕೊಳ್ಳುವುದು ಅವಶ್ಯ. ಸೋದರ ಭಾಷೆಯಾದ ತಮಿಳುಗರಿಗೆ ಇರುವ ಭಾಷಾ ಪ್ರೇಮ ನಮ್ಮವರಲ್ಲಿ ಇಲ್ಲದಿರುವುದು ಅವಮಾನಕಾರಿ ಸಂಗತಿ.
ಭಾಷೆಯ ಬಳಕೆಯ ವಿಚಾರಕ್ಕೆ ಬಂದರೆ ಕನ್ನಡದ ಸೊಗಡನ್ನು ಎಷ್ಟು ಹೇಳಿದರೂ ಸಾಲದು. ಕನ್ನಡ ಕವಿಗಳ ಕಾವ್ಯ ಕಲ್ಪನೆಗೆ ಕನ್ನಡಕ್ಕಿಂತ ಹೆಚ್ಚಿಗೆ ಅನುವಾಗುವ ಭಾಷೆ ಮತ್ತೊಂದಿಲ್ಲ ಎನ್ನುವುದೇ ನನ್ನ ನಂಬಿಕೆ. ಮತ್ತು ಕನ್ನಡದ ಹೆಗ್ಗಳಿಕೆ.
ಕವಿರಾಜಮಾರ್ಗದಲ್ಲಿ ಕನ್ನಡ ನಾಡಿನ ಎಲ್ಲೆಯನ್ನು ಗುರುತಿಸಿದ ಶ್ರೀವಿಜಯ ಕನ್ನಡವನ್ನು ಬಳಸಿಕೊಂಡದ್ದು ಈ ಮುಂದಿನಂತೆ….
” ಕಾವೇರಿಯಿಂದಮಾ ಗೋದಾವರಿವರಮಿರ್ಪ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ ವಸುಧಾವಲಯ ವಿಲೀನ ವಿಷದ ವಿಷಯ ವಿಶೇಷಂ”
ಇದರೊಂದಿಗೆ, ಕನ್ನಡ ನಾಡಿನ ಜನರ ಗುಣವನ್ನು “ಪದನರಿತು ನುಡಿಯಲುಂ ನುಡಿದುದನರಿದಾರಯಲುಂ ಆರ್ಪರ್ ಆ ನಾಡವರ್ಗಳ್ ಚದುರರ್ ನಿಜದಿಂ ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣಿತಮತಿಗಳ್” ಎಂದು ಹೇಳುತ್ತ ಕನ್ನಡಿಗರು ಕಾವ್ಯವನ್ನು ಓದದಿದ್ದರೂ ಕಾವ್ಯ ರಚಿಸುವ ಮತ್ತು ಗ್ರಹಿಸುವ ಚತುರತೆಯನ್ನು ಹೊಂದಿದ್ದಾರೆಂದು ಕನ್ನಡಿಗರ ಕಾವ್ಯಶಕ್ತಿಯನ್ನು ಕುರಿತು ಕೊಂಡಾಡಿದ್ದಾರೆ.
ಮಳೆಗಾಲದ ವರ್ಣನೆಯನ್ನು ಮಾಡಲು ಹೊರಟ ಕವಿ ಕುವೆಂಪು ಅವರಿಗೆ ಕನ್ನಡ ಭಾಷೆ ಸಹಕರಿಸಿದ್ದು ಹೀಗೆ:
“ಕದ್ದಿಂಗಳು; ಕಗ್ಗತ್ತಲು ಕಾರ್ಗಾಲದ ರಾತ್ರಿ. ಸಿಡಿಲ್ಮಿಂಚಿಗೆ ನಡುಗುತ್ತಿದೆ ಪರ್ವತ ವನಧಾತ್ರಿ” ಮಳೆಯ ಈ ವರ್ಣನೆ ಒಂದು ಕ್ಷಣ ಮರುಭೂಮಿಯಲ್ಲೂ ಮಳೆಯ ವಾತಾವರಣವನ್ನು ಕಲ್ಪಿಸಬಲ್ಲದು.
ಪ್ರಸಕ್ತ ದಿನಗಳಲ್ಲಿ ತಂದೆಯ ಬಗ್ಗೆ ಅಪಾರ ಪ್ರೀತಿಯನ್ನು ಹೊಂದಿರುವ ಮಗಳು. ಆ ಪ್ರೀತಿಯನ್ನು ವ್ಯಕ್ತಪಡಿಸಲು ಭಾಷೆಯನ್ನು ಅವಲಂಬಿಸಿದ್ದು ಈ ಮುಂದಿನಂತಿದೆ. “ನೀನೆಂಬ ಸಂಪುಟದ ಪ್ರತಿ ಪುಟವೂ ನಾನಾಗ ಬಯಸುವೆ”
ಈ ಬರೆಹಗಳು ಕಾವ್ಯ ಕಲ್ಪನೆಯ ಪ್ರಸ್ತುತತೆಗೆ ಕಂನುಡಿಗಿಂತ ಮಿಗಿಲಾದ ಮತ್ತೊಂದು ನುಡಿಯಿಲ್ಲ ಎಂಬುದನ್ನು ಸಾರುತ್ತದೆ.
ಅಲ್ಲದೆ ನಮ್ಮ ಬದುಕಿನ ಬಹು ಆಯಾಮಗಳಲ್ಲಿ ಅಂದರೆ ಸುಖ ದುಖಃ ನೋವು ನಲಿವು ಒಲವು ಎಲ್ಲಾ ಸಂದರ್ಭಗಳಲ್ಲಿಯೂ ಭಾವನೆಗಳನ್ನು ವ್ಯಕ್ತಪಡಿಸಲು ನಾವು ಆಶ್ರಯಿಸುವುದು ನಮ್ಮ ಕನ್ನಡ ನುಡಿಯನ್ನೆ. ಹೀಗಿರುವಾಗ ಕನ್ನಡಕ್ಕೆ ಮಹತ್ವವನ್ನು ಕೊಡದೆ ಇರುವುದು ಅಕ್ಷಮ್ಯ ಅಪರಾಧ.
ಕನ್ನಡ ನೆಲದಲ್ಲಿ ನಿಂತು ಕನ್ನಡ ಮಣ್ಣಿನಲ್ಲಿ ಬೆಳೆದ ಅನ್ನ ತಿಂದು ಪರಕೀಯರ ಭಾಷೆಗೆ ವಶವಾಗದೆ. ನಮ್ಮ ತನವನ್ನು, ನಮ್ಮ ನುಡಿಯನ್ನು ಕಾಪಾಡಿಕೊಳ್ಳುವುದು ಅತ್ಯವಶ್ಯಕ.
ಜೈ ಭುವನೇಶ್ವರಿ
ಲೇಖಕಿ :ಡಾ.ಲೋಹಿತೇಶ್ವರಿ ಎಸ್ ಪಿ




















