ಕಂಪ್ಲಿ: ಸ್ಥಳೀಯ ಪಟ್ಟಣದಲ್ಲಿ ಆಯೋಜಿಸಲು ಉದ್ದೇಶಿಸಲಾಗಿರುವ ತಾಲೂಕು ಮಟ್ಟದ 2ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಂಬರುವ ನವೆಂಬರ್ 13ರಂದು ನಡೆಸಲು ಸರ್ವಾನುಮತದಿಂದ ತೀರ್ಮಾನಿಸಲಾಗಿದೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕಂಪ್ಲಿಯ ಬರಹಗಾರ, ಪತ್ರಿಕಾ ವರದಿಗಾರ ಬಂಗಿ ದೊಡ್ಡ ಮಂಜುನಾಥ ಅವರನ್ನು ಗೌರವಪೂರ್ವಕವಾಗಿ ಆಯ್ಕೆ ಮಾಡಿ ಅವರಿಗೆ ಪ್ರೀತಿಪೂರ್ವಕ ಸನ್ಮಾನಿಸಿ ಆಹ್ವಾನ ನೀಡಲಾಯಿತು.
ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ತಾಲೂಕು ಕಾರ್ಯಕಾರಿ ಸಮಿತಿಯ ಮಹತ್ವದ ಸಭೆಯಲ್ಲಿ ಈ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಕಸಾಪ ತಾಲೂಕು ಅಧ್ಯಕ್ಷರಾದ ಎಸ್.ಜಿ. ಚಿತ್ರಗಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ, ತಾಲೂಕಿನ ದ್ವಿತೀಯ ಸಾಹಿತ್ಯ ಸಮ್ಮೇಳನವನ್ನು ಅತ್ಯಂತ ಯಶಸ್ವಿಯಾಗಿ ಮತ್ತು ಅರ್ಥಪೂರ್ಣವಾಗಿ ಆಯೋಜಿಸುವ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು. ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಹಲವು ಗಣ್ಯರ ಹೆಸರುಗಳು ಪ್ರಸ್ತಾಪವಾದವಾದರೂ, ಅಂತಿಮವಾಗಿ ಸಾಹಿತ್ಯಿಕ ಕೊಡುಗೆಗಳನ್ನು ಪರಿಗಣಿಸಿ ಬಂಗಿ ದೊಡ್ಡ ಮಂಜುನಾಥ ಅವರ ಹೆಸರನ್ನು ಅಂತಿಮಗೊಳಿಸಲಾಯಿತು.
ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಈ ಬಾರಿಯ ಸಮ್ಮೇಳನವನ್ನು ವಿಜೃಂಭಣೆಯಿಂದ ಆಚರಿಸಲು ಸಭೆಯಲ್ಲಿ ನಿರ್ಧರಿಸಲಾಗಿದ್ದು, ನವೆಂಬರ್ 13 ರಂದು ಪಟ್ಟಣವು ಸಾಹಿತ್ಯ ಜಾತ್ರೆಗೆ ಸಾಕ್ಷಿಯಾಗಲಿದೆ.
ಈ ಪ್ರಮುಖ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕಸಾಪ ಪದಾಧಿಕಾರಿಗಳು ಹಾಗೂ ಗಣ್ಯರಾದ ಜಿ. ಪ್ರಕಾಶ್, ಕೆ.ಎಂ. ಹೇಮಯ್ಯಸ್ವಾಮಿ, ಎ.ಸಿ. ದಾನಪ್ಪ, ಕೃಷ್ಣ ಎಸ್. ಪೋಳ್, ಡಾ. ಸುನಿಲ್, ಶ್ಯಾಮ್ ಸುಂದರ್, ಅಂಬಿಗರ ಮಂಜುನಾಥ, ಎಸ್.ಡಿ. ಬಸವರಾಜ, ಯು.ಎಂ. ವಿದ್ಯಾಶಂಕರ, ಬಿ. ರುದ್ರಯ್ಯ ಸ್ವಾಮಿ, ಎಲಿಗಾರ ವೆಂಕಟರೆಡ್ಡಿ ಸೇರಿದಂತೆ ಸಾಹಿತ್ಯಾಸಕ್ತರು ಹಾಗೂ ತಾಲೂಕಿನ ಪ್ರಮುಖರು ಉಪಸ್ಥಿತರಿದ್ದು, ಸಮ್ಮೇಳನದ ಯಶಸ್ಸಿಗೆ ಶ್ರಮಿಸುವ ಸಂಕಲ್ಪ ಮಾಡಿದರು.
ವರದಿ : ಜಿಲಾನಸಾಬ್ ಬಡಿಗೇರ್


















