ಗುಡಿಯೊಳಗಲ್ಲ, ಗೋಪುರದಲ್ಲಲ್ಲ, ನನ್ನೊಳಗಾಗಿ ಇದ್ದಾನೆ
ನಾ ಉಸಿರಾಡುವ ಪ್ರತಿ ಉಸಿರಲ್ಲೂ ಬೆಳಕಾಗಿ ಇದ್ದಾನೆ
ಕಲ್ಲಿನೊಳಗೆ ಹುಡುಕಿದೆ ದೇವರ, ಸುತ್ತಿದೆ ಬಹು ದೂರವಾಗಿ
ಕೊನೆಗೆ ತಿಳಿಯಿತು, ಕಲ್ಲೊಳಗಿನ ಜೀವದಲ್ಲೂ ಜೀವವಾಗಿ ಇದ್ದಾನೆ
ಆತ್ಮಲಿಂಗವೆಂಬ ಜ್ಯೋತಿಯು ಬೆಳಗುವುದು ಮನದೊಳಗೆ
ಅಂಧಕಾರದಿ ದಾರಿ ತೋರುವ ದೀಪವಾಗಿ ಇದ್ದಾನೆ
ನಾ ಎಂಬ ಅಹಂಕಾರವ ಬಿಟ್ಟು ನೋಡಿದಾಗ ತಿಳಿಯಿತು
ನಾನೇ ದೇವರು, ದೇವರೇ ನಾನು ಎಂಬ ಸತ್ಯವಾಗಿ ಇದ್ದಾನೆ
ದುಃಖ ಬಂದಾಗ ಕೈ ಹಿಡಿದು ನಡೆಸಿದವನು ಯಾರು?
ಕಾಣದ ಕೈಯಾಗಿ ನನ್ನ ಕಾಯುವ ಕಾಯಕವಾಗಿ ಇದ್ದಾನೆ
ಮಣ್ಣಾಗಿ ಹೋಗುವ ಈ ದೇಹ ಶಾಶ್ವತವಲ್ಲ ಗೆಳೆಯ
ಮಣ್ಣೊಳಗೂ ಮರೆಯಾಗದ ಆತ್ಮಲಿಂಗವಾಗಿ ಇದ್ದಾನೆ
ಭೀಮೇಶನ ಹೃದಯದೊಳಗೆ ನೆಲೆಸಿರುವನೊ ದೇವರು
ಭಕ್ತಿಯೆಂಬ ಹೂವ ಅರ್ಪಿಸಿದರೆ ಸಾಕು, ಒಲವಾಗಿ ಇದ್ದಾನೆ
- ಭೀಮಯ್ಯ ಎಸ್. ಕೆ. ಮುಂಡರಗಿ.




















