ಕೆ.ಆರ್.ಪೇಟೆ : ರೈತ ಮಹಿಳೆಯೊಬ್ಬರು ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಕಳೆದ 55ವರ್ಷಗಳಿಂದ ಸ್ವಾಧೀನಾನುಭವದಲ್ಲಿ ಇರುವ ಜಮೀನನಲ್ಲಿ ತೆಂಗಿನ ಸಸಿಗೆ ನೀರು ಹಾಕುತ್ತಿದ್ದ ವೇಳೆ ಅಕ್ರಮವಾಗಿ ಜಮೀನಿಗೆ ನುಗ್ಗಿ ತೆಂಗಿನ ಸಸಿಗಳನ್ನು ಕಿತ್ತು ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಕೆ.ಆರ್.ಪೇಟೆ ಪಟ್ಟಣದ ಅಗ್ರಹಾರ ಬಡಾವಣೆ ನಿವಾಸಿ ಮಂಜುಳ ರವರು ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರುದಾರರಾದ ಮಂಜುಳಾ ಮತ್ತು ತಮ್ಮ ತಾಯಿ ಲಕ್ಷ್ಮಮ್ಮ ರವರಿಗೆ ಸೇರಬೇಕಾದ ಕೆ.ಆರ್.ಪೇಟೆ ಜಮಾಬಂದಿಗೆ ಸೇರಿದ ಸರ್ವೆ ನಂ.137/2ರಲ್ಲಿ 5ಗುಂಟೆ, ಸರ್ವೆ ನಂ.137/1ರಲ್ಲಿ 7ಗುಂಟೆ, ಸ,ನಂ.137/4ರಲ್ಲಿ 11ಗುಂಟೆ ಪಿತ್ರಾರ್ಜಿತವಾದ ಆಸ್ತಿಯನ್ನು ಕಿಕ್ಕೇರಿ ಗ್ರಾಮದ ನಿವಾಸಿಗಳಾದ ನರಸಮ್ಮ ಮತ್ತು ನಾಗಪ್ಪ ಎಂಬುವವರ ಮಗನಾದ ಅನಂತಕುಮಾರ್ ಎಂಬಾತನು ಸುಳ್ಳು ದಾಖಲೆ ಸೃಷ್ಠಿ ಮಾಡಿ ತನ್ನ ಹೆಸರಿಗೆ ಪೌತಿ ಖಾತೆ ಮಾಡಿಸಿಕೊಂಡಿರುತ್ತಾನೆ. ದೂರದಾರಾದ ಮಂಜುಳಾ ಅವರ ದೊಡ್ಡಪ್ಪನವರಾದ ತಮ್ಮಯ್ಯ, ಗಿಡ್ಡಿಬೆಟ್ಟಯ್ಯ, ನರಸಿಂಹಯ್ಯ(ತಂದೆ) ಅವರಿಗೆ ಸೇರಿದ ಪಿತ್ರಾರ್ಜಿತ ಆಸ್ತಿಯಾಗಿರುತ್ತವೆ. ಮಂಜುಳಾ ನರಸಿಂಹಯ್ಯ ಅವರ ಪುತ್ರಿಯಾಗಿರುತ್ತಾರೆ. ಇಡೀ ಆಸ್ತಿಗೆ ಏಕೈಕ ವಾರಸುದಾರಳಾದ ಮಂಜುಳಾ ಮತ್ತು ಆಕೆಯ ತಾಯಿ ಲಕ್ಷಮ್ಮ ಎಂಬುವವರಿಗೆ ಸದರಿ ಆಸ್ತಿಯು ಸೇರಬೇಕಾಗಿರುತ್ತದೆ. ಆದರೆ ಅಕ್ರಮವಾಗಿ ಸುಳ್ಳು ದಾಖಲೆ ಸೃಷ್ಠಿ ಮಾಡಿಕೊಂಡು ಪೌತಿಖಾತೆ ಮಾಡಿಸಿಕೊಂಡಿರುವ ಅನಂತಕುಮಾರ್ ಎಂಬಾತನು ತನ್ನ ತಂದೆಯ ಸಹೋದರಿಯಾದ ನರಸಮ್ಮ ಮತ್ತು ನಾಗಪ್ಪ ಎಂಬುವವರ ಮಗನಾಗಿರುತ್ತಾರೆ. ಆದರೆ ಇಡೀ ಆಸ್ತಿಗೆ ನಾನೇ ವಾರಸುದಾರ ಎಂದು ಸುಳ್ಳು ವಂಶವೃಕ್ಷ ಸೇರಿದಂತೆ ಹಲವು ದಾಖಲೆಗಳನ್ನು ಸೃಷ್ಠಿ ಮಾಡಿ ಮಂಜುಳಾ ಮತ್ತು ಆಕೆಯ ವೃದ್ದ ತಾಯಿ ಲಕ್ಷ್ಮಮ್ಮ ಅವರಿಗೆ ಸೇರಬೇಕಾದ ಆಸ್ತಿಗಳನ್ನು ತನ್ನ ಹೆಸರಿಗೆ ಪೌತಿ ಖಾತೆ ಮಾಡಿಸಿಕೊಂಡಿರುತ್ತಾನೆ. ಈತನ ಮರಣ ಹೊಂದಿದ್ದ ಅನಂತರ ಸದರಿ ಆಸ್ತಿಯನ್ನು ಆತನ ಪುತ್ರ ಎ.ಅಶೋಕ್‌ಕುಮಾರ್ ಮತ್ತು ಎ.ಆಶಾಕುಮಾರಿ ಎಂಬುವವರು ಅಕ್ರಮವಾಗಿ ಖಾತೆ ಮಾಡಿಕೊಂಡಿರುತ್ತಾರೆ. ಆದರೆ ಈ ಮೇಲೆ ಕಾಣಿಸಿದ ಎಲ್ಲಾ ಜಮೀನಿನಲ್ಲಿ ಕಳೆದ 55ವರ್ಷಗಳಿಂದ ನನ್ನ ತಾಯಿ ಲಕ್ಷ್ಮಮ್ಮ ಹಾಗೂ ನಾನು ಸ್ವಾಧೀನಾನುಭವದಲ್ಲಿ ಇದ್ದು ಬೇಸಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ಅಲ್ಲದೇ ಕಳೆದ ವರ್ಷ ಭೂಮಿಯನ್ನು ಬೇರೆ ಕಡೆಯಿಂದ ಮಣ್ಣು ತಂದು ಹಾಕಿ ಸಮತಟ್ಟು ಮಾಡಿ ಬೇಸಾಯ ಮಾಡುತ್ತಿರುತ್ತೇವೆ. ಜೊತೆಗೆ ಈ ಸಂಬಂಧ ಸದರಿ ಆಸ್ತಿಗಳ ನಕಲಿ ದಾಖಲೆಗಳನ್ನು ವಜಾ ಮಾಡಿ ನಮ್ಮನ್ನು ಮಾಲೀಕತ್ವ ಘೋಷಣೆ ಕೋರಿ ಕೆ.ಆರ್.ಪೇಟೆಯ 1ನೇ ಅಪರ ಸಿವಿಲ್ ನ್ಯಾಯಾಲಯದಲ್ಲಿ ಅಸಲು ದಾವಾ ಸಂಖ್ಯೆ 688/2026 ರಂತೆ ತಮ್ಮ ಗ್ರಾಮದ ಎ.ಆಶಾಕುಮಾರಿ ಮತ್ತು ಎ.ಅಶೋಕ್ ಕುಮಾರ್ ರವರ ಮೇಲೆ ದಾವೆ ಹೂಡಿದ್ದೇವೆ. ಇದು ನಮ್ಮ ಪರ ಆಗಬಹುದು ಎಂಬ ಭಯದಿಂದ ಇದೂವರೆವಿಗೂ ಸುಮ್ಮನಿದ್ದ ಎ.ಅಶೋಕ್‌ಕುಮಾರ್ ಎಂಬಾತನು ಸುಳ್ಳು ದಾಖಲೆ ಸೃಷ್ಠಿಸಿ ಮಾಡಿಕೊಂಡಿರುವ ನಕಲಿ ದಾಖಲಾತಿಗಳ ಮೂಲಕ ಜಮೀನಿನ್ನು ಸ್ವಾಧೀನಕ್ಕೆ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಇದೇ ವಿಚಾರವಾಗಿ ದಿನಾಂಕ 27/11/2026 ರಂದು ಬೆಳಿಗ್ಗೆ 11-55 ಗಂಟೆ ಸಮಯದಲ್ಲಿ ತಮ್ಮ ಜಮೀನಿನಲ್ಲಿ ನೆಟ್ಟಿರುವ ತೆಂಗಿನ ಸಸಿಗೆ ನೀರು ಹಾಕುತ್ತಿದ್ದಾಗ ಎ.ಅಶೋಕ್ ಕುಮಾರ್ ರವರು ಮತ್ತು ಇನ್ನೊಬ್ಬ ವ್ಯಕ್ತಿ ಬಂದು ಸುಮಾರು 55 ವರ್ಷಗಳಿಂದ ಸ್ವಾಧೀನದಲ್ಲಿರುವ ತಮ್ಮ ಜಮೀನಿಗೆ ಅಕ್ರಮವಾಗಿ ನುಗ್ಗಿ, ನಾವು ನೆಟ್ಟಿದ್ದ ತೆಂಗಿನ ಸಸಿಯನ್ನು ತುಳಿದು ಹಾಕಿ, ಕೆಟ್ಟ ಅವಾಚ್ಯ ಪದಗಳಿಂದ ಬೈದು ಸಾರ್ವಜನಿಕವಾಗಿ ಅವಮಾನ ಮಾಡಿ, ಹಲ್ಲೆ ನಡೆಸಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಹಾಗಾಗಿ ಮಹಿಳೆ ಎಂದು ನೋಡದೇ ಹಲ್ಲೆ ಮಾಡಿ ಅವಮಾನ ಮಾಡಿರುವ ಮೇಲ್ಕಂಡ ಆರೋಪಿಗಳಾದ ಎ.ಅಶೋಕ್‌ಕುಮಾರ್ ಮತ್ತು ಇನ್ನೊಬ್ಬರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕಾಗಿ ಕೆ.ಆರ್.ಪೇಟೆ ಪಟ್ಟಣ ಪೊಲೀಸರಿಗೆ ನೀಡಿರುವ ದೂರಿನಲ್ಲಿ ದೂರಿನಲ್ಲಿ ಮನವಿ ಮಾಡಿದ್ದಾರೆ.
ಈ ಸಂಬಂಧ ಕೆ.ಆರ್.ಪೇಟೆ ಟೌನ್ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.




















