ಶಿವಮೊಗ್ಗ : ಭಾರತೀಯ ಜೀವ ವಿಮಾ ನಿಗಮದ 68ನೇ ವರ್ಷದ ವಿಮಾ ಸಪ್ತಾಹವು ಇಂದು ಶಿವಮೊಗ್ಗ ವಿಭಾಗೀಯ ಕಚೇರಿಯಲ್ಲಿ ಸುಸಂಪನ್ನವಾಯಿತು. ಶಿವಮೊಗ್ಗ ವಿಭಾಗವು ಚಿತ್ರದುರ್ಗ, ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಗಳನ್ನು ಒಳಗೊಂಡಿದ್ದು, ವರ್ಷದಿಂದ ವರ್ಷಕ್ಕೆ ಉತ್ತಮ ವ್ಯವಹಾರ ಮಾಡುತ್ತಾ ರಾಷ್ಟ್ರ ಮಟ್ಟದಲ್ಲಿ ತನ್ನದೇ ಆದಂತಹ ಛಾಪನ್ನು ಮೂಡಿಸಿದೆ. ಇಂತಹ ಅದ್ಭುತ ಸಾಧನೆಗೆ ಗ್ರಾಹಕರು ನಿಗಮದ ಮೇಲೆ ಇಟ್ಟಿರುವ ನಂಬಿಕೆಯೇ ಕಾರಣವಾಗಿದೆ. ಹಾಗಾಗಿ ಪ್ರತಿ ವರ್ಷದಂತೆ ಈ ಬಾರಿಯೂ ವಿಮಾ ಸಪ್ತಾಹದ ಅಂಗವಾಗಿ ಹಲವು ಜನಪರ ಕಾರ್ಯಕ್ರಮಗಳನ್ನು ವಿಭಾಗೀಯ ಕಚೇರಿಯಿಂದ ಆಯೋಜಿಸಲಾಗಿತ್ತು.
ದಿನಾಂಕ 04.09.2024ರಂದು ಸಹ್ಯಾದ್ರಿ ನಾರಾಯಣ ಹೃದಯಾಲಯದ ಸಹಯೋಗದಲ್ಲಿ ಆರೋಗ್ಯ ತಪಾಸಣೆ ಶಿಬಿರವನ್ನು, ಶಂಕರ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ಕಣ್ಣಿನ ತಪಾಸಣೆಯನ್ನು ಉಚಿತವಾಗಿ ಸಿಬ್ಬಂದಿ ಹಾಗೂ ಸಾರ್ವಜನಿಕರಿಗಾಗಿ ಆಯೋಜಿಸಲಾಗಿತ್ತು. ದಿನಾಂಕ 06.09.2024ರಂದು ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಅವಶ್ಯಕವಾದ ಬ್ಯಾರಿಕೇಡುಗಳನ್ನು ಸಂಸ್ಥೆಯ ವತಿಯಿಂದ ವಿಭಾಗದ ಹಿರಿಯ ವಿಭಾಗಾಧಿಕಾರಿಯಾದ ಶ್ರೀ ಪಿ.ಶ್ರೀನಿವಾಸ, ಮಾರುಕಟ್ಟೆ ವ್ಯವಸ್ಥಾಪಕರಾದ ಶ್ರೀ ಗಣಪತಿ ಭಟ್ ಮತ್ತು ವ್ಯವಸ್ಥಾಪಕರು (ವಿಕ್ರಯ) ಶ್ರೀ ನಾಗಭೂಷಣ ಶೆಟ್ಟಿಯವರು ಹಸ್ತಾಂತರ ಮಾಡಿದರು. ಇದರ ಜೊತೆಗೆ ದಿನಾಂಕ 03.09.2024ರಂದು ನಡಿಗೆ ಜಾಥಾವನ್ನು ಅಯೋಜಿಸಿ ಸಾರ್ವಜನಿಕರಿಗೆ ಪ್ರಸ್ತುತ ಲಭ್ಯವಿರುವ ನಿಗಮದ ಅತ್ಯುತ್ತಮ ಪಾಲಿಸಿಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ಅಲ್ಲದೆ, ಸಿಬ್ಬಂದಿ ಹಾಗೂ ಅವರ ಕುಟುಂಬದವರಿಗಾಗಿ ರಸಪ್ರಶ್ನೆ ಸ್ಪರ್ಧೆ, ರಂಗೋಲಿ ಸ್ಪರ್ಧೆ ಮತ್ತು ಫುಡ್ ವಿತೌಟ್ ಫಯರ್ (ಒಲೆ ಹಚ್ಚದೆ ಖಾದ್ಯ ತಯಾರಿಸುವ) ವಿಶೇಷ ಸ್ಪರ್ಧೆಯನ್ನು ನಡೆಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಇದೇ ರೀತಿ ಮೂರು ಜಿಲ್ಲೆಗಳಲ್ಲಿ ಇರುವ ಹದಿನಾಲ್ಕು ಶಾಖೆಗಳಲ್ಲಿ ಹಾಗೂ ಏಳು ಸಂಪರ್ಕ ಶಾಖೆಗಳಲ್ಲೂ ವಿಮಾ ಸಪ್ತಾಹವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ವರದಿ :ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ




















