ಬೀದರ್/ ಚಿಟಗುಪ್ಪ :ಲಿಂಗಾಯತ ಹೋರಾಟ ಯಾವುದೇ ಧರ್ಮ, ಪಕ್ಷ, ವ್ಯಕ್ತಿಗಳ ವಿರೋಧವಲ್ಲ. ಇದು ಎಲ್ಲರನ್ನೂ ಒಳಗೊಂಡಿರುವ ಹೋರಾಟವಾಗಿದೆ. ಲಿಂಗಾಯತ ಹೋರಾಟಗಾರರನ್ನು ರಾಷ್ಟ್ರದ್ರೋಹಿಗಳೆಂದು ಬಿಂಬಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಅವರ ಪ್ರಯತ್ನ ಎಂದಿಗೂ ಫಲ ಕೊಡುವುದಿಲ್ಲ ಎಂದು ಸಾಹಿತಿ, ಹೋರಾಟಗಾರ ಸಂಗಮೇಶ ಎನ್ ಜವಾದಿ ನುಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಗಮೇಶ ಎನ್ ಜವಾದಿ ರವರು ರಾಷ್ಟ್ರೀಯತೆ, ದೇಶಭಕ್ತಿ ಲಿಂಗಾಯತ ರಕ್ತದಲ್ಲಿಯೇ ಇದೆ. ವಿಶ್ವಗುರು ಬಸವಣ್ಣನರು ನೂರಾರು ಜಾತಿಗಳನ್ನು ನಿರ್ಮೂಲನೆ ಮಾಡಿ, ಸರ್ವರಿಗೆ ಸಮಾನತೆಯ ಆಧಾರದ ಮೇಲೆ ಲಿಂಗಾಯತ ಧರ್ಮ ನೀಡಿದವರು. ಇದು ಆ ಕಾಲದಲ್ಲಿ ರಾಷ್ಟ್ರ ಕಟ್ಟುವ ದಿಶೆಯಲ್ಲಿ ಬಹುದೊಡ್ಡ ಮೈಲುಗಲ್ಲು ಆಗಿತ್ತು. ಲಿಂಗಾಯತ ಹೋರಾಟವೆಂದರೆ, ಅದು ರಾಷ್ಟ್ರೀಯತೆಯೇ ಆಗಿದೆ ಎಂದರು.
ಲಿಂಗಾಯತ ಹೋರಾಟ ಸರ್ವ ಸಾಮಾನ್ಯರಿಗೂ ಬಸವಾದಿ ಶರಣರ ತತ್ವಾದರ್ಶಗಳ ಕುರಿತು ಜಾಗೃತಿ ಮೂಡಿಸುವ ಹೋರಾಟವಾಗಿದೆ. ಲಿಂಗಾಯತ ಹೋರಾಟ ಪ್ರಾರಂಭವಾಗಿದ್ದು ೧೨ನೆಯ ಶತಮಾನದಲ್ಲಿ. ಲಿಂಗಾಯತ ಧರ್ಮದ ಮೇಲೆ ಅಂದಿನಿಂದಲೂ ಅನೇಕ ದಾಳಿಗಳು ಆಗುತ್ತಲಿವೆ ಆದರೆ ಆ ದಾಳಿಗಳನ್ನು ಎದುರಿಸುವ ಶಕ್ತಿ ಲಿಂಗಾಯತ ತತ್ವದಲ್ಲಿ ಅಡಗಿದೆ. ಅದಕ್ಕಾಗಿ ೯೦೦ ವರ್ಷಗಳ ನಂತರವೂ ಲಿಂಗಾಯತ ಧರ್ಮ ಉಳಿದಿದೆ. ದಿನ ದಿನಕ್ಕೂ ವಿಶ್ವಾದ್ಯಂತ ಬೆಳೆಯುತ್ತಿದೆ.
ಲಿಂಗಾಯತರಲ್ಲಿ ದೇಶಪ್ರೇಮ ತುಂಬಿಕೊಂಡಿದೆ. ದೇಶದ ಅಖಂಡತೆಗಾಗಿ ಲಿಂಗಾಯತರು ಮಾಡಿರುವ ತ್ಯಾಗ, ಬಲಿದಾನದ ಇತಿಹಾಸ ಎಂದೂ ಮರೆಯಲಿಕ್ಕೆ ಸಾಧ್ಯವಿಲ್ಲ ಎಂದು ಸಂಗಮೇಶ ಎನ್ ಜವಾದಿ ತಿಳಿಸಿದರು.
- ಕರುನಾಡ ಕಂದ ಪತ್ರಿಕೆ




















