ಲ್
ಬಳ್ಳಾರಿ / ಕಂಪ್ಲಿ : ಪಟ್ಟಣದ ಸಂತೆ ಮಾರುಕಟ್ಟೆ ಬಳಿಯ ಹೃದಯ ಭಾಗದಲ್ಲಿ ಛಲವಾದಿ ಸಮಾಜದಿಂದ ವೀರವನಿತೆ ಒನಕೆ ಓಬವ್ವ ವೃತ್ತದ ಜೊತೆಗೆ ನಾಮಫಲಕವನ್ನು ಅದ್ಧೂರಿಯಾಗಿ ಗುರುವಾರ ಅನಾವರಣಗೊಳಿಸಲಾಯಿತು. ನಂತರ ಓಬವ್ವನ ಭಾವಚಿತ್ರ ಮೆರವಣಿಗೆ ಪಟ್ಟಣದ ನಡುವಲ ಮಸೀದಿ, ಡಾ.ರಾಜಕುಮಾರ ಮುಖ್ಯರಸ್ತೆ, ಡಾ.ಅಂಬೇಡ್ಕರ್ ವೃತ್ತ, ಮಹಾತ್ಮಗಾಂಧಿ ವೃತ್ತ, ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯರಸ್ತೆ ಮುಖೇನ 4ನೇ ವಾರ್ಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಭಾಗದ ಮೂಲಕ ನೂತನ ಓಬವ್ವ ವೃತ್ತದಲ್ಲಿ ಸಮಾವೇಶಗೊಂಡಿತು. ಕರ್ನಾಟಕ ರಾಜ್ಯ ದಿಶಾ ಸಮಿತಿ ಸದಸ್ಯ ಎ.ಸಿ.ದಾನಪ್ಪ ಮಾತನಾಡಿ, ಓಬವ್ವನ ಸಮಯ ಪ್ರಜ್ಞೆ, ಧೈರ್ಯ ಮತ್ತು ಸಾಹಸ ನಾಡಿನ ಎಲ್ಲಾ ಹೆಣ್ಣು ಮಕ್ಕಳಿಗೆ ಸ್ಫೂರ್ತಿ. ಸಾಮಾನ್ಯ ಕಾವಲುಗಾರನ ಹೆಂಡತಿಯಾಗಿ ಸ್ವಾಮಿನಿಷ್ಠೆ ಹಾಗೂ ಸಮಯಪ್ರಜ್ಞೆಯಿಂದ ಕೋಟೆನಾಡು ದುರ್ಗವನ್ನು ರಕ್ಷಿಸಿದರು. ವೀರವನಿತೆ ಎಂಬ ಹೆಸರಿನಲ್ಲಿಯೇ ಸ್ಫೂರ್ತಿ ಮತ್ತು ಧೈರ್ಯ ಅಡಕವಾಗಿದೆ. ಈ ದಿಟ್ಟ ಮಹಿಳೆ ರಾಜ್ಯದ ರಕ್ಷಣೆಗಾಗಿ ಶತ್ರುಗಳ ವಿರುದ್ಧ ಸೆಣಸಾಡಿದ ಯಶೋಗಾಥೆಯ ಆದರ್ಶಗಳು ಎಲ್ಲರಿಗೂ ದಾರಿದೀಪ ಆಗಬೇಕು. ಆದ್ದರಿಂದ ಅವರ ಸ್ಮರಣೆ ಹಿನ್ನಲೆ ಕಂಪ್ಲಿಯ ಸಂತೆ ಮಾರುಕಟ್ಟೆ ಬಳಿಯಲ್ಲಿ ಓಬವ್ವನ ವೃತ್ತವನ್ನು ವಿಜೃಂಭಣೆಯಿಂದ ಉದ್ಘಾಟಿಸಿದ್ದು, ಯುವಕರು ಹಾಗೂ ಮಹಿಳೆಯರು ಓಬವ್ವನ ಆದರ್ಶಗಳನ್ನು ಮೈಗೂಡಿಸಿಕೊಂಡು, ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಛಲುವಾದಿ ಸಮಾಜದ ಜಿಲ್ಲಾಧ್ಯಕ್ಷ ಶಿವಕುಮಾರ, ಕಾರ್ಯದರ್ಶಿಗಳಾದ ಸಿ.ಹನುಮೇಶ, ವೆಂಕಟೇಶ, ಶಂಕರ್ ನಂದಿಹಾಳ, ಹನುಮೇಶ ಕಟ್ಟಿಮನಿ, ಮುಖಂಡರಾದ ಎಂ.ಸಿ.ಮಾಯಪ್ಪ, ಕೆ.ಲಕ್ಷ್ಮಣ, ಚನ್ನಪ್ಪ, ಹನುಮೇಶ, ಶಂಕ್ರಪ್ಪ, ಸೂರ್ಯನಾರಾಯಣ, ಎಂ.ಸಿ.ಲಿಂಗಪ್ಪ, ಟಿ.ಹುಲುಗಪ್ಪ, ಹುಲಿಗೆಮ್ಮ, ಗಂಗಮ್ಮ, ಪಾರ್ವತಿ ಸೇರಿದಂತೆ ಅನೇಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















