ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

” ಭಯದಿಂದ ಅಭಯದತ್ತ ನಮ್ಮನ್ನು ಸಾಗಿಸುವ ಏಕಮಾತ್ರ ಸಾಧನ ಆಧ್ಯಾತ್ಮ “

ಎಲ್ಲರನ್ನೂ ಒಂದು ಪ್ರಶ್ನೆ ಕಾಡಬಹುದು. ಅದೇನೆಂದರೆ, ಮೊದಲು ಹುಟ್ಟು, ಅನಂತರ ಅಧ್ಯಯನ, ಸಾಧನೆ, ನಂತರ ಸಾವು. ಪುನಃ ಮರುಹುಟ್ಟು ಮತ್ತೆ ಅದೇ ಸಾಧನೆ ಮತ್ತೆ ಸಾವು ! ಇದರಿಂದ ಏನು ಉಪಯೋಗ. ಒಂದು ಜನ್ಮದಲ್ಲಿ ಸಾಕ್ಷಾತ್ಕಾರವಾಗದೇ ಇದ್ದರೆ ಆ ಎಲ್ಲಾ ಸಾಧನೆ ವ್ಯರ್ಥವೇ ? ಖಂಡಿತವಾಗಿ ಇಲ್ಲ ಎನ್ನುತ್ತಾನೆ ಪರಮಾತ್ಮ. ನಮ್ಮ ಜೀವನದಲ್ಲಿ ಗಳಿಸಿದ ಐಹಿಕ ಸಂಪತ್ತು (ಧನ, ಒಡವೆ, ಕೀರ್ತಿ, ಆಸ್ತಿ ಇತ್ಯಾದಿ) ಸತ್ತ ನಂತರ ನಮ್ಮೊಂದಿಗೆ ಬಾರದು ನಿಜ. ಆದರೆ ಆಧ್ಯಾತ್ಮ ಸಾಧನೆ ಹಾಗಲ್ಲ. ಒಂದು ಜನ್ಮದಲ್ಲಿ ಮಾಡಿದ ಆಧ್ಯಾತ್ಮ ಸಾಧನೆ ಎಂದೂ ನಾಶವಾಗದು. ಈ ಜನ್ಮದಲ್ಲಿ ಅಧ್ಯಾತ್ಮದ ಒಂದು ಮೆಟ್ಟಿಲನ್ನು ಹತ್ತಿದರೆ ಮುಂದಿನ ಜನ್ಮದಲ್ಲಿ ಹುಟ್ಟುವಾಗಲೇ ನಾವು ಎರಡನೇ ಮೆಟ್ಟಲಲ್ಲಿರುತ್ತೇವೆ. ಹಿಂದಿನ ಜನ್ಮದಲ್ಲಿ ಎಲ್ಲಿ ನಿಂತಿದ್ದೇವೋ ಅಲ್ಲಿಂದ ಮುಂದುವರಿಯುವ ಪರಿಸರದಲ್ಲಿ ನಮ್ಮ ಜನನವಾಗುತ್ತದೆ. ಸಾಮಾಜಿಕವಾಗಿ ನೀವು ಅಸಾಧಾರಣ ಪ್ರತಿಭೆಯುಳ್ಳ ಮಕ್ಕಳು ಜನಿಸುವುದನ್ನು ಹಾಗೂ ಅತ್ಯಂತ ಕಡಿಮೆ ಸಮಯದಲ್ಲಿ ಮಹಾನ್ ಸಾಧನೆ ಮಾಡುವುದನ್ನು ಕಾಣುತ್ತೀರಿ. ಇದು ಅವರು ಹಿಂದಿನ ಜನ್ಮದಿಂದ ಪಡೆದು ಬಂದ ಜ್ಞಾನ. ಹಿಂದಿನ ಜನ್ಮದ ಆಧ್ಯಾತ್ಮದ ಸಾಧನೆಯ ಮುಂದುವರಿದ ಭಾಗವೇ ಈ ಜನ್ಮ. ನಾವು ಆ ಜನ್ಮದಲ್ಲಿ ಎಲ್ಲಿ ನಿಲ್ಲಿಸಿದ್ದೇವೋ ಅಲ್ಲಿಂದಲೇ ಈ ಜನ್ಮದ ಸಾಧನೆ ಪ್ರಾರಂಭವಾಗಿ ಮುಂದುವರಿಯುತ್ತದೆ.

ಒಂದು ವೇಳೆ ನಮಗೆ ಅಧ್ಯಾತ್ಮ ಸಾಧನೆ ಮಾಡಬೇಕು ಎನ್ನುವ ಅಂತರಂಗದ ತುಡಿತವಿದ್ದು, ಅದನ್ನು ಈ ಜನ್ಮದಲ್ಲಿ ಸಾಧಿಸಲಾಗದಿದ್ದಲ್ಲಿ ಮುಂದಿನ ಜನ್ಮದಲ್ಲಿ ಸಾಧನೆಗೆ ಬೇಕಾದ ವಾತಾವರಣದಲ್ಲಿ, ವಿದ್ವಾಂಸರ ಸಂಗವಿರುವ ಕಡೆ ನಮ್ಮ ಜನ್ಮವಾಗುತ್ತದೆ.
ಆದ್ದರಿಂದ ನಮ್ಮ ಅಧ್ಯಾತ್ಮ ಚಿಂತನೆಯಲ್ಲಿ ನಮ್ಮ ಒಂದೊಂದು ಜನ್ಮ ಒಂದೊಂದು ತರಗತಿ ಇದ್ದಂತೆ ಮೋಕ್ಷ ಜ್ಞಾನವನ್ನು ಸಂಪೂರ್ಣ ತಿಳಿಯಲು ನಾವು ಅನೇಕ ಜನ್ಮ ಸಾಧನೆ ಮಾಡಬೇಕು.

ಇದಕ್ಕೆ ನಾರದರ ಜನ್ಮವೃತ್ತಾಂತವೇ ಸಾಕ್ಷಿ

ನಾರದರು ತಮ್ಮ ಜೀವನದ ಕುರಿತು ಹೇಳುತ್ತಾರೆ…

” ನಾನು ಪೂರ್ವಜನ್ಮದಲ್ಲಿ ದಾಸಿಪುತ್ರ. ಚಿಕ್ಕವನಿದ್ದಾಗ ನನ್ನನ್ನು ಋಷ್ಯಾಶ್ರಮದಲ್ಲಿ ಸೇವೆಗೆ ನಿಯಮಿಸಿದರು. ಭಕ್ತಿಯಿಂದ ಅವರ ಸೇವೆ ಮಾಡುತ್ತ ಅವರು ಕೊಟ್ಟ
ಪ್ರಸಾದವನ್ನು ತಿನ್ನುತ್ತಿದ್ದೆ ನನ್ನ ಪಾಪಗಳೆಲ್ಲ ಪರಿಹಾರವಾಗಿ, ಮನಸ್ಸು ಭಗವಂತನ
ಭಜನೆಯಲ್ಲಿ ಆಸಕ್ತವಾಯಿತು. ಋಷಿಮುನಿಗಳು ನಿತ್ಯವೂ ಹೇಳುತ್ತಿದ್ದ ಭಗವಂತನ
ಚರಿತ್ರೆಯನ್ನು ಕೇಳಿ ಅಮಿತಾನಂದವನ್ನು ಅನುಭವಿಸುತ್ತಿದ್ದೆ. ಜೀವಿಯ ಮನೋನಿಯಾಮಕನು ಸಾಕ್ಷಾತ್ ಭಗವಂತನೆಂಬ ಸತ್ಯದ ಅರಿವಾಯಿತು.
ಭಕ್ತಿ ಧೃಡವಾಯಿತು. ನನ್ನಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಿದ
ಋಷಿಗಳು, ತಾವು ಅಲ್ಲಿಂದ ಹೊರಡುವ ಅತ್ಯಂತ ರಹಸ್ಯವಾದ ಜ್ಞಾನ ಶಾಸ್ತ್ರವನ್ನು
ನನಗೆ ಉಪದೇಶ ಮಾಡಿದರು. ಇದರ ಪ್ರಭಾವದಿಂದ ಸರ್ವಾಂತರ್ಯಾಮಿಯಾದ
ಭಗವಂತನ ಮಾಯಾ ಮಹಿಮೆಗಳನ್ನು ತಿಳಿದುಕೊಂಡೆನು. ಸಂಸಾರಕ್ಕೆ ಕಾರಣವಾದ
ಕರ್ಮವು, ಭಗವಂತನಿಗೆ ಅರ್ಪಿತವಾದಾಗ ಸಕಲ ತಾಪತ್ರಯಗಳು ದೂರವಾಗುತ್ತವೆ
ಎಂಬುದನ್ನು ಅರಿತುಕೊಂಡೆನು. ಪ್ರತಿಫಲಾಪೇಕ್ಷೆಯಿಂದ ಕ್ರಮವನ್ನು ಮಾಡಿದರೆ
ಆ ಫಲಗಳನ್ನು ಅನುಭವಿಸುವುದಕ್ಕಾಗಿ ಮತ್ತೆ ಮತ್ತೆ ಜನ್ಮವೆತ್ತಬೇಕು. ಹಾಗೆ ಜನ್ಮವೆತ್ತಿದಾಗ
ಸಂಸಾರ ಬಂಧನ ತಪ್ಪದು. ಆದ್ದರಿಂದ ಕರ್ಮದಲ್ಲಿ ಫಲಾಪೇಕ್ಷೆಯಿಡದೆ, ಈಶ್ವರನಿಗೆ
ಭಕ್ತಿಯಿಂದ ಅರ್ಪಿಸಿದರೆ ಭಗವಂತ ಸುಪ್ರೀತನಾಗುತ್ತಾನೆ. ಆತನ ಕೃಪೆಯಿಂದ ಆತ್ಮಜ್ಞಾನ
ದೊರೆಯುತ್ತದೆ. ಹೀಗೆ ಭಕ್ತಿಯೋಗದಿಂದ ಜ್ಞಾನ, ಜ್ಞಾನದಿಂದ ಕರ್ಮನಾಶ ಉಂಟಾಗುತ್ತವೆ.
ಭಗವಂತನಿಗೆ ಅರ್ಪಿಸಿ ಮಾಡುವ ಎಲ್ಲಾ ಕರ್ಮವೇ ನಿಜವಾದ ಭಕ್ತಿ. ಯಾವುದೇ ಫಲಾಪೇಕ್ಷೆಯಿಲ್ಲದೆ
ಋಷಿಗಳ ಸೇವೆ ಸದಾಚಾರದಿಂದ ಭಕ್ತಿಯೋಗವನ್ನು ಭಗವಂತ ನನಗೆ ಕರುಣಿಸಿದ.
ಅಷ್ಟರಲ್ಲಿ ನನ್ನ ತಾಯಿ ಹಾವು ಕಡಿದು ಸತ್ತಳು. ದಿಕ್ಕಿಲ್ಲದ ನಾನು ಬೆಟ್ಟಗುಡ್ಡ ಕಾಡುಮೇಡು
ಅಲಿಯುತ್ತ ಉತ್ತರ ದಿಕ್ಕಿನತ್ತ ಹೊರಟೆ. ಅಲ್ಲಿ ಹರಿಯುತ್ತಿದ್ದ ನದಿಯಲ್ಲಿ ಸ್ನಾನಮಾಡಿ
ಒಂದು ಅರಳಿ ಮರದ ಕೆಳಗೆ ಋಷಿಗಳು ಬೋಧಿಸಿದ ಮಂತ್ರಗಳನ್ನು ಜಪಿಸುತ್ತ ಕುಳಿತೆ.
ನಿಶ್ಚಲ ಚಿತ್ತನಾಗಿ ಭಗವಂತನ ಧ್ಯಾನ ಮಾಡತೊಡಗಿದೆ. ಕೆಲ ಕಾಲಾನಂತರ ನನ್ನ ಹೃದಯದಲ್ಲಿ ಶ್ರೀಹರಿ ಗೋಚರಿಸಿದನು. ನನ್ನ ಆನಂದಕ್ಕೆ ಪಾರವಿಲ್ಲದಂತಾಯಿತು.
ಮಿಂಚಿನಂತೆ ಬಂದ ಶ್ರೀಹರಿ ಕ್ಷಣಹೊತ್ತು ಗೋಚರಿಸಿ ಕಣ್ಮರೆಯಾದ. ಗಾಬರಿಯಿಂದ ದಿಗ್ಗನೆ ಎದ್ದು ಸುತ್ತಲೂ ನೋಡಿದೆ. ಮತ್ತೆ ಮತ್ತೆ ಧ್ಯಾನ ಮಾಡಿದರೂ ಆತನ ಮೂರ್ತಿ ಗೋಚರಿಸಲಿಲ್ಲ. ಆಗ ನಾನು ಚಡಪಡಿಸತೊಡಗಿದೆ. ಆಗ ಅಶರೀರವಾಣಿ ಕೇಳಿಬಂತು…
“ಹೆ ಮಗು, ನಿನ್ನ ಭಕ್ತಿ ಅಚಲವಾದುದು. ನೀನಿನ್ನು ಈ ಲೋಕವನ್ನು ಬಿಟ್ಟು ನನ್ನ ಸಾಮೀಪ್ಯವನ್ನು ಸೇರಿ ಮುಕ್ತಿಯನ್ನು ಪಡೆ. ಸೃಷ್ಟಿ, ಸ್ಥಿತಿ, ಲಯ ಮೂರರಲ್ಲಿಯೂ ನಿನ್ನ
ಸ್ಮೃತಿ ಸ್ಥಿರವಾಗಿರಲಿ.” ನಾನು ಆ ಧ್ವನಿ ಬಂದ ದಿಕ್ಕಿಗೆ ನಮಸ್ಕರಿಸಿ, ಭಗವಂತನ ನಾಮ ಸ್ಮರಣೆ ಮಾಡುತ್ತಾ, ನಾಮ ಸಂಕೀರ್ತನೆಗಳನ್ನು ಹಾಡುತ್ತ ಸಂಚರಿಸುತ್ತಿದ್ದೆ. ಒಂದು ದಿನ ನನ್ನ ಭೌತಿಕ ದೇಹ ಬಿದ್ದು ಹೋಯಿತು. ನನ್ನ ಜೀವ ಪರಬ್ರಹ್ಮನಲ್ಲಿ ಐಕ್ಯವಾಯಿತು. ಹಲವು ಯುಗಗಳ ನಂತರ ಬ್ರಹ್ಮದೇವನ ಪ್ರಾಣವಾಯುಗಳಿಂದ ನಾನು ಮತ್ತು ಮರೀಚಿಯೆ ಮೊದಲಾದ ನವಬ್ರಹ್ಮರೂ ಜನಿಸಿದೆವು. ಅಂದಿನಿಂದ ನಾನು ಬ್ರಹ್ಮಚಾರಿಯಾಗಿ ಹರಿಚರಿತೆಯನ್ನು
ಗಾಯನ ಮಾಡುತ್ತ ಮೂರು ಲೋಕಗಳಲ್ಲಿಯೂ ಸಂಚರಿಸುತ್ತಿರುವೆನು. ನಾನು ಸ್ಮರಿಸಿದೊಡನೆ ಶ್ರೀಹರಿ ನನ್ನ ಹೃದಯದಲ್ಲಿ ಗೋಚರನಾಗುತ್ತಾನೆ” ಎಂದು ನಾರದರು
ತಮ್ಮ ಜೀವನ ವೃತ್ತಾಂತ ತಿಳಿಸಿದರು…

ಅಂದರೆ ಆಧ್ಯಾತ್ಮ ಸಾಧನೆ ಎಂದೂ ವ್ಯರ್ಥವಲ್ಲ. ಇಂದು ನೀವು ನಿಮ್ಮ ಜೀವನದ ಯಾವ ಘಟ್ಟದಲ್ಲಿದ್ದರೂ ಸರಿ, ಅಧ್ಯಾತ್ಮ ಸಾಧನೆಗೆ ಇದು ಸಕಾಲ. ಇಂದೇ ನಿಮ್ಮ ಸಾಧನೆಯನ್ನು ಆರಂಭಿಸಿ. ಅದು ನಿಮ್ಮನ್ನು ಮೋಕ್ಷ ಮಾರ್ಗದತ್ತ ಕೊಂಡೊಯ್ಯುತ್ತದೆ ಎನ್ನುವುದು ಪರಮಸತ್ಯ.
ಅಧ್ಯಾತ್ಮ ಪ್ರದರ್ಶನದ ವಸ್ತುವಲ್ಲ, ಅದು ಅಂತರಂಗದ ಸಾಧನೆ. ನಮ್ಮ ಜನ್ಮದಲ್ಲಿ ನಾವು ಅಧ್ಯಾತ್ಮದ ಕಿಂಚಿತ್ ಸಾಧನೆ ಮಾಡಿದರೂ ಕೂಡಾ, ಅದು ನಮ್ಮನ್ನು ಭಯದಿಂದ ಪಾರು ಮಾಡುತ್ತದೆ. ಭಯದಿಂದ ಅಭಯದತ್ತ ನಮ್ಮನ್ನು ಸಾಗಿಸುವ ಏಕಮಾತ್ರ ಸಾಧನ ಆಧ್ಯಾತ್ಮ.

ಮುಂದುವರೆಯುತ್ತದೆ…

  • ಪ್ರಶಾಂತಭಟ್ ಕೋಟೇಶ್ವರ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!