ಬೀದರ/ ಚಿಟಗುಪ್ಪಾ: ಕಲ್ಯಾಣ ನಡಿಗೆಯು ಶರಣು ಶರಣಾರ್ಥಿ ಎಂಬ ಧ್ಯೇಯವಾಕ್ಯದೊಂದಿಗೆ ಸಾಮಾಜಿಕ-ಮಾನವೀಯತೆಯ ಮೌಲ್ಯಾಧಾರಿತ ಸಂದೇಶ ತತ್ವಗಳು ಪ್ರಸಾರ ಮಾಡುವ ಉದ್ದೇಶ ಮತ್ತು ವಚನ ಚಳವಳಿಯ ಅರಿವಿನ ಮಾರ್ಗವನ್ನು ಕಂಡುಕೊಳ್ಳುವ ಕಾರಣದಿಂದ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಶರಣ ಬಸವಕುಮಾರ ಪಾಟೀಲ ರವರ ನೇತೃತ್ವದಲ್ಲಿ ಆರಂಭವಾಗಲಿರುವ ‘ಕಲ್ಯಾಣ ನಡಿಗೆ’ ಪಾದಯಾತ್ರೆ ಫೆ.15 ರಿಂದ ಮಾರ್ಚ್ ೦1 ವರೆಗೆ ನಡೆಯಲಿದೆ ಎಂದು ಸಾಹಿತಿ, ಪರಿಸರ ಸಂರಕ್ಷಕರು, ಹೋರಾಟಗಾರರಾದ ಸಂಗಮೇಶ ಎನ್. ಜವಾದಿ ರವರು ನುಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 12ನೇ ಶತಮಾನದ ಬಸವಣ್ಣನವರ ಕಲ್ಯಾಣದ ಸಮಾನತೆ ಮತ್ತು ಸಹಬಾಳ್ವೆಯನ್ನು ಪುನಃ ಸ್ಥಾಪಿಸಲು ಕಲ್ಯಾಣ ನಡಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಇದು ಸಾಮಾಜಿಕ ಐಕ್ಯತೆ, ಜಾತಿ ಪದ್ಧತಿಯ ನಿರ್ಮೂಲನೆ ಮತ್ತು ಸಮಾನತೆಯ ಸಂದೇಶವನ್ನು ಸಾರುವ ಪ್ರಮುಖ ಗುರಿ ಹೊಂದಿದೆ.
ಜಾತಿ, ಮತ, ಪಂಥಗಳ ಭೇದ ಮರೆತು, ಸಮಾಜದಲ್ಲಿ ನಾವೆಲ್ಲರೂ ಒಂದೇ ಎಂಬ ಸೌಹಾರ್ಧತೆ ತರಲು ಈ ಪಾದಯಾತ್ರೆ ಆಯೋಜಿಸಲಾಗಿದೆ.
ಸೇಡಂ ತಾಲೂಕಿನ ಬಿಜನ್ನಳ್ಳಿ ಗ್ರಾಮದಲ್ಲಿ ಫೆ. 15 ರಂದು ಪಾದಯಾತ್ರೆಗೆ ಚಾಲನೆ ದೊರೆಯಲಿದೆ.
ದಿನನಿತ್ಯ ಒಂದು ಹಳ್ಳಿಯಂತೆ
ಹದಿನೈದು ಹಳ್ಳಿಗಳಲ್ಲಿ ವಿಶೇಷವಾದ ಪಾದಯಾತ್ರೆ ಸಾಗಲಿದೆ. ಈ ಸಂದರ್ಭದಲ್ಲಿ ಪದವಿ ಹಾಗೂ ಪದವಿ ಪೂರ್ವ ಕಾಲೇಜು ಮಕ್ಕಳಿಗೆ ವೈಚಾರಿಕ ಚಿಂತನಾ ಗೋಷ್ಠಿಗಳು ಹಮ್ಮಿಕೊಂಡಿದೆ.
ಗ್ರಾಮಗಳಲ್ಲಿ ನಡೆಯುವ ಪಾದಯಾತ್ರೆಯ ಸಮಯದಲ್ಲಿ ದುಶ್ಚಟಗಳ ಹಾಗೂ ಮೂಢನಂಬಿಕೆ ಬಗ್ಗೆ ಜಾಗೃತಿ ಮೂಡಿಸುವ ಮಹೋನ್ನತ ಉದ್ದೇಶ ಹೊಂದಲಾಗಿದೆ. ಮಾರ್ಚ್ 01 ರಂದು ಶರಣರ ಪವಿತ್ರ ಭೂಮಿ ಬಸವಕಲ್ಯಾಣದಲ್ಲಿ ಐತಿಹಾಸಿಕ ಸಮಾರೋಪ ಸಮಾರಂಭ ನಡೆಯಲಿದೆ. ಕಾರಣ ಈ ಪಾದಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ
ಮಹಾಜನತೆ ಭಾಗವಹಿಸಬೇಕೆಂದು
ಸಂಗಮೇಶ ಎನ್. ಜವಾದಿ
ರವರು ವಿನಂತಿಸಿದ್ದಾರೆ.
- ಕರುನಾಡ ಕಂದ ಪತ್ರಿಕೆ.




















