ಕಲಬುರ್ಗಿ : ಈ ತಿಂಗಳ ೧೫ ರಿಂದ ಮಾರ್ಚ್ ೧ರ ವರೆಗೆ ಸುಕ್ಷೇತ್ರ ಬಿಜನಳ್ಳಿಯಿಂದ ಶರಣ ಭೂಮಿ ಬಸವಕಲ್ಯಾಣದ ವರೆಗೆ ಶರಣೆ ಕಲ್ಯಾಣಮ್ಮ-ಹರಳಯ್ಯ ದಂಪತಿಗಳು ಬಸವಣ್ಣನವರಿಗೆ ಚಮ್ಮಾವುಗೆ ಅರ್ಪಿಸಿದ ಪ್ರಯುಕ್ತ ಆಯೋಜಿಸಿದ್ದ ಕಲ್ಯಾಣ ನಡಿಗೆ ಮತ್ತು ಹರಳಯ್ಯ ಜ್ಯೋತಿಯಾತ್ರೆಗೆ ಸಕಲ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ದಿನಾಂಕ 15.02.2026 ರಂದು ಬೆಳಗ್ಗೆ 11:00 ಗಂಟೆಗೆ ಪಾದಯಾತ್ರೆ
ಉದ್ಘಾಟನಾ ನೆರವೇರಲಿದೆ ಎಂದು ಕಲ್ಯಾಣ ಕರ್ನಾಟಕ ಪ್ರತಿಷ್ಟಾನದ ಅಧ್ಯಕ್ಷ ಬಸವಕುಮಾರ ಪಾಟೀಲ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿರುವ ಅವರು, ಶರಣರು ನಮಗಾಗಿ ಮಾಡಿದ ತ್ಯಾಗ-ಬಲಿದಾನ ಸ್ಮರಣೆ ಮಾಡಿಕೊಳ್ಳುವ ಕಾರ್ಯಕ್ರಮ ಇದಾಗಿದೆ. ಅವರ ಸಂದೇಶಗಳನ್ನು ಮನೆ-ಮನೆಗೆ, ಮನ-ಮನಕ್ಕೆ ತಲುಪಿಸುವುದು ಇಂದಿನ ನಾಗರಿಕ ಸಮಾಜದ ಆದ್ಯ ಕರ್ತವ್ಯವಾಗಿದೆ. ಈ ಪಾದಯಾತ್ರೆಯ ಸಮಯದಲ್ಲಿ ವಿದ್ಯಾರ್ಥಿಗಳಿಗೆ ದೇಶದ ಸತ್ಪ್ರಜೆಗಳಾಗುವಂತೆ ಮಾರ್ಗದರ್ಶನ ಮಾಡಲಾಗುತ್ತದೆ. ಕೃಷಿ, ಪರಿಸರ, ಆರೋಗ್ಯ, ಸೌಹಾರ್ದತೆ, ಭಾವೈಕ್ಯತೆ, ಸೇವೆ, ಸಹಕಾರ ಮುಂತಾದ ಮಹತ್ವಪೂರ್ಣ ವಿಷಯಗಳ ಕುರಿತು ಉಪನ್ಯಾಸ ಗೋಷ್ಠಿಗಳು ಏರ್ಪಡಿಸಲಾಗಿದೆ. ಎಲ್ಲರೂ ಎಲ್ಲರನ್ನು ಪ್ರೀತಿಸುವ ಮತ್ತು ಗೌರವಿಸುವ ವಿಶ್ವ ಕುಟುಂಬತ್ವದ ಭಾವ ಬೆಳೆಸುವುದು, ‘ದುರ್ಗುಣ ದುಶ್ಚಟಗಳ ಭಿಕ್ಷೆ, ಸದ್ಗುಣ ಸನ್ನಡತೆಯ ದೀಕ್ಷೆ’ಯ ಸಂಕಲ್ಪ ಹೊತ್ತು ದುರ್ಗುಣ ದುಶ್ಚಟಗಳ ಭಿಕ್ಷೆ ಕೇಳುವುದು ಸೇರಿದಂತೆ ಮುಖ್ಯವಾಗಿ ಬಿಜನಳ್ಳಿಯ ಅಭಿವೃದ್ಧಿ ಯಾತ್ರೆಯ ಮುಖ್ಯ ಉದ್ದೇಶವಾಗಿದೆ ಎಂದರು
ಪ್ರತಿದಿನ ಸಾಯಂಕಾಲ ೫ ಗಂಟೆಗೆ ಗ್ರಾಮಸ್ಥರೊಂದಿಗೆ ಗ್ರಾಮದಲ್ಲಿ ‘ಕಲ್ಯಾಣ ನಡಿಗೆ’, ಸಾಯಂಕಾಲ ೬ ಗಂಟೆಗೆ ಸಾರ್ವಜನಿಕ ಸಮಾರಂಭ ಉಪನ್ಯಾಸ ಕಾರ್ಯಕ್ರಮ, ರಾತ್ರಿ ೮ ಗಂಟೆಗೆ ‘ಕಲ್ಯಾಣ ಕ್ರಾಂತಿ’ ನಾಟಕ ನಡೆಯಲಿದೆ.
ಸಮಾರೋಪ ಸಮಾರಂಭ ದಿನಾಂಕ ೧-೦೩-೨೦೨೬ ರಂದು ಬಸವಕಲ್ಯಾಣದಲ್ಲಿ ಬೆಳಿಗ್ಗೆ ೧೦.೩೦ ರಿಂದ ಸಾಯಂಕಾಲ ೬ ವರೆಗೆ ಜರುಗಲಿದೆ ಎಂದು ತಿಳಿಸಿದರು.
ಶರಣ ಕಾಶಿನಾಥ ನಂದೂರಕರ್, ಸಾಹಿತಿ ಸಂಗಮೇಶ ಎನ್ ಜವಾದಿ, ಶರಣ ರವೀಂದ್ರ ಶಾಬಾದಿ, ಜ್ಯೋತಿ ಮರಗೋಳ, ಸೋಮಶೇಖರ ಪಾಟೀಲ, ಜಗದೀಶ ಪಾಟೀಲ, ನಾಗಭೂಷಣ ಅಗಸ್ತ್ಯ ತೀರ್ಥ ಸೇರಿದಂತೆ
ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.
- ಕರುನಾಡ ಕಂದ ಪತ್ರಿಕೆ




















