ಬಳ್ಳಾರಿ / ಕಂಪ್ಲಿ : ರಾಜ್ಯವನ್ನಾಳುತ್ತಿರುವ ಸರ್ಕಾರಕ್ಕೆ ಕಾರ್ಮಿಕರ ಸಂಕಷ್ಟ ಗೊತ್ತಾಗುತ್ತಿಲ್ಲ. ಇದರಿಂದ ಕಾರ್ಮಿಕರ ಬದುಕು ದುಸ್ತರವಾಗಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಫೆಡರೇಶನ್ ರಾಜ್ಯಾಧ್ಯಕ್ಷ ಹೆಚ್.ಜಿ.ಉಮೇಶ ಹೇಳಿದರು.
ಪಟ್ಟಣದಲ್ಲಿ ಜಿಲ್ಲಾ ಮತ್ತು ತಾಲೂಕು ಘಟಕದಿಂದ ಬುಧವಾರ ಆಯೋಜಿಸಿದ್ದ ಪ್ರಥಮ ಕಂಪ್ಲಿ ತಾಲೂಕು ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾರ್ಮಿಕರು ಸೌಲಭ್ಯಗಳನ್ನು ಪಡೆದುಕೊಳ್ಳಲು ಕಷ್ಟಕರವಾಗಿದೆ. ದೊಡ್ಡ ಮಟ್ಟದಲ್ಲಿ ಸಂಘಟನೆ ಮೂಲಕ ಇಡೀ ಬಳ್ಳಾರಿ ಜಿಲ್ಲೆಯಲ್ಲಿ ವಿಸ್ತರಣೆಯೊಂದಿಗೆ ಹೋರಾಟದ ಮೂಲಕ ಸರ್ಕಾರಕ್ಕೆ ಹಕ್ಕೋತ್ತಾಯ ಮಾಡಬೇಕಾಗಿದೆ. ಹೋರಾಟದ ಚಡಿ ಬೀಸಿದಾಗ ಮಾತ್ರ ಸೌಲಭ್ಯಗಳನ್ನು ಹಾಗೂ ಬಹು ಬೇಡಿಕೆಗಳನ್ನು ಪಡೆದುಕೊಳ್ಳಲು ಸಾಧ್ಯ. ವೈದ್ಯಕೀಯ ಚಿಕಿತ್ಸೆಯಲ್ಲಿ ಅನ್ಯಾಯವಾಗುತ್ತಿದೆ. ದುಡಿದು ತಿನ್ನುವ ಕಾರ್ಮಿಕರ ಬದಲು ಕಷ್ಟಪಡದ ಕಾರ್ಮಿಕರು ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಆದ್ದರಿಂದ ಎಲ್ಲಾ ಕಾರ್ಮಿಕರು ಒಗ್ಗೂಡಿ, ಬಲಿಷ್ಠ ಸಂಘಟನೆಯೊಂದಿಗೆ ಬೀದಿ ಬೀದಿಗೆ ಇಳಿದು ಹೋರಾಟ ಮಾಡಿದಾಗ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸಲಿದೆ ಎಂದರು.
ತಾಲೂಕು ಅಧ್ಯಕ್ಷ ಎನ್.ರಾಜಾಭಕ್ಷಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕಾರ್ಮಿಕರಿಗೆ ಸೌಲಭ್ಯಗಳು ಅಗತ್ಯವಾಗಿವೆ. 2008ರಲ್ಲಿ ದಾವಣಗೆರೆಯಲ್ಲಿ ನಡೆದ ದೊಡ್ಡ ಮಟ್ಟದ ಹೋರಾಟ ಮಾಡಿದಾಗ ಒಂದು ಕೋಟಿ ಅನುದಾನ ನೀಡಿದ್ದರು. ನಂತರದ ದಿನದಲ್ಲಿ ಅನುದಾನ ಮತ್ತು ಸೌಲಭ್ಯ ಇಲ್ಲದಂತಾಗಿದೆ. ಇಂದಿನ ದಿನಮಾನದಲ್ಲಿ ಸೌಲಭ್ಯಗಳಿಲ್ಲದೇ, ಕಾರ್ಮಿಕರ ಬದುಕು ಅತಂತ್ರ ಸ್ಥಿತಿಯಲ್ಲಿ ಸಾಗುವಂತಾಗಿದೆ. ಚುನಾವಣೆ ವೇಳೆ ಕಾರ್ಮಿಕರು ನೆನಪಾಗುವುದು. ಆದರೆ, ಉಳಿದ ದಿನದಲ್ಲಿ ಕಾರ್ಮಿಕರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ. ಆದ್ದರಿಂದ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕಾದರೆ, ದೊಡ್ಡ ಮಟ್ಟದ ಹೋರಾಟದಿಂದ ಮಾತ್ರ ಸಾಧ್ಯ. ಆದ್ದರಿಂದ ಸಂಘಟನೆ ಏಳಿಗೆಗೆ ಜೊತೆಗೆ ಹೋರಾಟಗಳನ್ನು ಮಾಡಲು ಕಾರ್ಮಿಕರು ಮುಂದಾಗಬೇಕಾಗಿದೆ. ಕೇರಳ ಮಾದರಿಯಲ್ಲಿ ಸೌಲಭ್ಯಗಳನ್ನು ಕಾರ್ಮಿಕರಿಗೆ ಕಲ್ಪಿಸಿದರೆ, ಜೀವನ ಉತ್ತಮವಾಗಿರುತ್ತದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಎ.ಎಲ್.ತಿಮ್ಮಣ್ಣ, ಮುಖಂಡರಾದ ಹುಲುಗಪ್ಪ, ತಾಲೂಕು ಗೌರವಾಧ್ಯಕ್ಷ ಬಿ.ಅಬ್ದುಲ್ ನವಾಜ್, ಉಪಾಧ್ಯಕ್ಷರಾದ ಕೃಷ್ಣಪ್ಪ ಮೆಟ್ರಿ, ಶರಣ, ನಾಗಸುಬ್ಬಣ್ಣ, ಪ್ರಧಾನ ಕಾರ್ಯದರ್ಶಿ ಸುಂಕಪ್ಪ, ಸಹ ಕಾರ್ಯದರ್ಶಿ ರಾಘವೇಂದ್ರ, ಸದಸ್ಯರಾದ ಶಿವರಾಜ, ವಿರುಪಾಕ್ಷಿ, ಮೆಟ್ರಿ ಹನುಮಂತಪ್ಪ, ಗಂಗಮ್ಮ, ಜ್ಯೋತೆಮ್ಮ, ಸೇರಿದಂತೆ ಇತರರು ಇದ್ದರು.
ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಸರ್ಕಾರಕ್ಕೆ ಹಕ್ಕೊತ್ತಾಯಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್




















