ಬಳ್ಳಾರಿ / ಕಂಪ್ಲಿ : ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಕರ್ನಾಟಕ ಟೈಲರ್ ಅಸೋಷಿಯೇಷನ್ ರಾಜ್ಯ ಸಮಿತಿ ಸಭೆಯಲ್ಲಿ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಗಿದ್ದು, ರಾಜ್ಯ ಸಮಿತಿಯ ಜಂಟಿ ಕಾರ್ಯದರ್ಶಿಯಾಗಿ ಕಂಪ್ಲಿಯ ಜಡೇಶ್ ಹಿರೇಮಠ ಅವರನ್ನು ಆಯ್ಕೆ ಮಾಡಿದೆ. ನೂತನ ಜಂಟಿ ಕಾರ್ಯದರ್ಶಿ ಜಡೇಶ ಹಿರೇಮಠ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ನಮ್ಮ ಸಂಘಟನೆಯು ಕಳೆದ 23 ವರ್ಷಗಳಿಂದ ಟೈಲರುಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ರಾಜ್ಯಾದ್ಯಂತ ಹೊಲಿಗೆ ಕೆಲಸದಿಂದ ಜೀವನ ನಡೆಸುತ್ತಿರುವ ಸುಮಾರು ಹತ್ತು ಲಕ್ಷಕ್ಕೂ ಅಧಿಕ ಮಹಿಳಾ ಮತ್ತು ಪುರುಷರ ಹೊಲಿಗೆ ಕೆಲಸಗಾರರಿಗೆ ಜೀವನ ಭದ್ರತೆಯನ್ನು ಒದಗಿಸಲು ಟೈಲರ್ಸ್ ಕ್ಷೇಮನಿಧಿ ಮಂಡಳಿಯನ್ನು ರಚಿಸುವಂತೆ ಸರ್ಕಾರವನ್ನು ಆಗ್ರಹಿಸಿದರು. ಟೈಲರ್ಸ್ ಕ್ಷೇಮನಿಧಿ ಮಂಡಳಿಯನ್ನು ರಚಿಸಿ ಭವಿಷ್ಯ ನಿಧಿ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು ಹಾಗೂ ಆರೋಗ್ಯ ವಿಮೆಯನ್ನು ಜಾರಿಗೊಳಿಸಬೇಕು. ಈ ವರೆಗೆ ಹಣ ಸಂದಾಯ ಮಾಡಿದ 60 ವರ್ಷ ತುಂಬಿದ ಎಲ್ಲಾ ಎನ್ ಪಿ ಎಸ್ ಲೈಟ್ ಫಲಾನುಭವಿಗಳ ನಿವೃತ್ತಿವೇತನ ಘೋಷಣೆ ಮಾಡಬೇಕು ಮತ್ತು ಮಾಸಿಕ 3 ಸಾವಿರದ ವರೆಗೆ ನಿವೃತ್ತಿ ವೇತನ ನೀಡಬೇಕು. ಹೊಲಿಗೆ ಕೆಲಸಗಾರರ ಹೆಣ್ಣುಮಕ್ಕಳಿಗೆ ವಿವಾಹಧನ ನೀಡಬೇಕು. ಮಹಿಳಾ ಹೊಲಿಗೆ ಕೆಲಸಗಾರರಿಗೆ ವಿವಾಹ ಧನ ಮತ್ತು ಹೆರಿಗೆ ಭತ್ಯೆ ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು. ಇದೀಗ ತಾವು ರಾಜ್ಯ ಸಮಿತಿಯ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವುದರಿಂದ ಜಿಲ್ಲೆಯ ಹೊಲಿಗೆ ಕೆಲಸಗಾರರ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್




















